Thursday, December 12, 2024
Homeರಾಷ್ಟ್ರೀಯ | Nationalಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಭರ್ಜರಿ ಮತದಾನ : ಫಲಿತಾಂಶಕ್ಕೆ ಹೆಚ್ಚಿದ ಕುತೂಹಲ

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಭರ್ಜರಿ ಮತದಾನ : ಫಲಿತಾಂಶಕ್ಕೆ ಹೆಚ್ಚಿದ ಕುತೂಹಲ

Maharashtra voter turnout recorded at 32.18% by 1 pm; Jharkhand at 47.92%

ನವದೆಹಲಿ,ನ.20- ಮಹಾರಾಷ್ಟ್ರದ ವಿಧಾನಸಭೆಯ 288 ಕ್ಷೇತ್ರಗಳಿಗೆ ಒಂದೇ ಹಂತದ ಹಾಗೂ ಜಾರ್ಖಂಡ್ನ 38 ಕ್ಷೇತ್ರಗಳಿಗೆ 2ನೇ ಹಂತದ ಮತದಾನ ಸೇರಿ, ಹಲವು ವಿಧಾನಸಭೆ ಹಾಗೂ ಸಂಸತ್ ಕ್ಷೇತ್ರಗಳ ಉಪಚುನಾವಣೆಗಳು ಇಂದು ನಡೆದಿದ್ದು, ರಾಷ್ಟ್ರದ ಮಿನಿ ಮಹಾಸಮರದ ಫಲಿತಾಂಶಕ್ಕಾಗಿ ಕಾತುರ ಹೆಚ್ಚಾಗಿದೆ.

ರಾಷ್ಟ್ರಮಟ್ಟದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಗಳ ಬಲಾಬಲ ಪರೀಕ್ಷೆ ಎಂದೇ ಬಿಂಬಿಸಲಾಗುವ ಹಲವು ಕ್ಷೇತ್ರಗಳ ಉಪಚುನಾವಣೆಗಳು ನಡೆದಿವೆ. ನ.13 ರಂದು ಒಂದಷ್ಟು ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇಂದು 2ನೇ ಹಾಗೂ ಕೊನೆಯ ಹಂತದ ಮೂಲಕ ಕಳೆದ ಅ.15 ರಂದು ಪ್ರಸ್ತಾಪಿಸಲಾದ ವೇಳಾಪಟ್ಟಿ ಅನುಸಾರ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳುತ್ತಿವೆ.

ಎಲ್ಲಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ನ.23 ರಂದು ಘೋಷಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜಕೀಯ ಅಲೆಯ ಮಾಹಿತಿಗಾಗಿ ಕಾತುರ ಹೆಚ್ಚಾಗಿದೆ.
ನ.13 ರಂದು ಜಾರ್ಖಂಡ್ನ 43 ವಿಧಾನಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದಿತ್ತು. ಒಟ್ಟು 81 ಕ್ಷೇತ್ರಗಳ ಪೈಕಿ ಬಾಕಿ ಉಳಿದ 38 ಕ್ಷೇತ್ರಗಳಿಗೆ ಇಂದು ಚುನಾವಣೆ ನಡೆದಿದೆ.

ಮಹಾರಾಷ್ಟ್ರದಲ್ಲಿ ಹಣಾಹಣಿ :
ದೇಶದ ವಾಣಿಜ್ಯ ನಗರಿ ಮಹಾರಾಷ್ಟ್ರ ವಿಧಾನಸಭೆಯ 288 ಕ್ಷೇತ್ರಗಳಿಗೆ ಇಂದು ಏಕಕಾಲಕ್ಕೆ ಚುನಾವಣೆ ನಡೆದಿದೆ. ಒಟ್ಟು 4,136 ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರಗೊಂಡಿದೆ. ಆಡಳಿತಾರೂಢ ಮಯೂತಿ-ಎನ್ಡಿಎ ಕೂಟ, ಮಹಾ ವಿಕಾಸ ಅಘಾಡಿ-ಇಂಡಿಯಾ ಕೂಟಗಳು ಮ್ಯಾಜಿಕ್ ನಂ. 170 ನ್ನು ದಾಟಲು ಸೆಣೆಸಾಡಿವೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 143, ಮುಖ್ಯಮಂತ್ರಿ ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಬಣ 81, ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣ 59 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟಗಳ ಪೈಕಿ ಉದ್ಧವ್ ಠಾಕ್ರೆ ಬಣದ ಶಿವಸೇನೆ 85 ಕ್ಷೇತ್ರಗಳಲ್ಲಿ, ಎನ್ಸಿಪಿಯ ಅಭ್ಯರ್ಥಿಗಳು 86 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ, ಕಾಂಗ್ರೆಸ್ 101 ಕ್ಷೇತ್ರಗಳಲ್ಲಿ ಹುರಿಯಾಳುಗಳನ್ನು ಕಣಕ್ಕಿಳಿಸಿದೆ.

ಮಧ್ಯಾಹ್ನದ ವೇಳೆಗೆ ಶೇ.50ಕ್ಕಿಂತಲೂ ಹೆಚ್ಚಿನ ಮತದಾನ ದಾಖಲಾಗಿತ್ತು. ಗ್ರಾಮೀಣ ಭಾಗದಲ್ಲಿ ಹೆಚ್ಚು ಮತದಾನ ವರದಿಯಾದರೆ ನಗರ ಪ್ರದೇಶಗಳಾದ ಮುಂಬೈ ಹಾಗೂ ಉಪವಲಯದಲ್ಲಿ ಮತದಾರರ ನಿರುತ್ಸಾಹ ಕಂಡುಬಂದಿತು.ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಕ್ಷೇತ್ರದಲ್ಲೂ ನಿರುತ್ಸಾಹದ ಮತದಾನವಾಗಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರ ನಾಗ್ಪುರ ನೈಋತ್ಯ ಕ್ಷೇತ್ರದಲ್ಲಿ ಉತ್ತಮ ಮತದಾನವಾಗಿದೆ.

ಮುಖ್ಯಮಂತ್ರಿ ಏಕನಾಥ ಶಿಂಧೆ ಎನ್ಡಿಎ ಮೈತ್ರಿಕೂಟ ಮರಳಿ ಅಧಿಕಾರ ಹಿಡಿಯಲಿದ್ದು, ಜನ ಅಭಿವೃದ್ಧಿಗೆ ಬೆಂಬಲ ನೀಡಲಿದ್ದಾರ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎನ್ಸಿಪಿಯ ಮುಖಂಡ ಶರದ್ ಪವಾರ್ ಮಹಾರಾಷ್ಟ್ರದ ಜನತೆ ರಾಜ್ಯದ ಭವಿಷ್ಯದ ನಿರ್ಧಾರಕ್ಕಾಗಿ ಮತ ಚಲಾವಣೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಕೇಂದ್ರ ಸಚಿವ ನಿತಿನ್ ಗಟ್ಕರಿ ವಾಣಿಜ್ಯ ನಗರಿ ದೇಶದ ಇತರ ರಾಜ್ಯಗಳಿಗೆ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ.

ಠಾಕ್ರೆ ಬಣದ ಶಿವಸೇನೆಯ ಉದ್ಧವ್ ಠಾಕ್ರೆ ಕುಟುಂಬ ಸಮೇತರಾಗಿ ಮತ ಚಲಾಯಿಸಿದ್ದಾರೆ. ಈ ನಡುವೆ ಬಿಟ್ ಕಾಯಿನ್ ಮೂಲಕ ಎನ್ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಚುನಾವಣಾ ವೆಚ್ಚಕ್ಕಾಗಿ ಹಣ ಸಂಗ್ರಹಿಸಿದ್ದಾರೆ ಎಂದು ಬಿಜೆಪಿ ಮಾಡಿರುವ ಆರೋಪ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ರಜೂರಾ ಕ್ಷೇತ್ರದಲ್ಲಿ ಚುನಾವಣೆ ಅಕ್ರಮಕ್ಕೆ ಸಂಗ್ರಹಿಸಲಾಗಿತ್ತು ಎಂದು ಹೇಳಲಾದ 60 ಲಕ್ಷ ರೂ.ಗಳನ್ನು ವಿಚಕ್ಷಣಾ ದಳ ವಶಪಡಿಸಿಕೊಂಡಿದೆ.ನಾಸಿಕ್ ಜಿಲ್ಲೆಯ ನಂದಗೋನ್, ವಿಧಾನಸಭಾ ಕ್ಷೇತ್ರದಲ್ಲಿ ಶಿವಸೇನೆಯ ಅಭ್ಯರ್ಥಿ ಸುಭಾಷ್ ಕಾಂಡೆ, ಪಕ್ಷೇತರ ಅಭ್ಯರ್ಥಿ ಸಮೀರ್ ಬುಜ್ಬಲ್ ಅವರ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದಿದೆ.

ಇಬ್ಬರು ನಾಯಕರ ಬೆಂಬಲಿಗರು ಮತಕೇಂದ್ರದ ಬಳಿ ಅಧಿಕ ಸಂಖ್ಯೆಯಲ್ಲಿ ಜಮಾಯಿಸಿದಾಗ ಪರಸ್ಪರ ಆಕ್ಷೇಪಗಳು ವ್ಯಕ್ತವಾಗಿವೆ. ಅನಧಿಕೃತ ವ್ಯಕ್ತಿಗಳು ಮತಕೇಂದ್ರದ ಬಳಿ ಬಂದಿದ್ದಾರೆ ಎಂದು ವಿರೋಧಿಸಿದ್ದರಿಂದ ಕಾವೇರಿದ ವಾತಾವರಣ ನಿರ್ಮಾಣವಾಯಿತು.

ರಾಹುಲ್ಗಾಂಧಿಯವರ ರಾಜೀನಾಮೆಯಿಂದ ತೆರವಾಗಿದ್ದ ಕೇರಳದ ವೈನಾಡು ಕ್ಷೇತ್ರಕ್ಕೆ ಕಳೆದ 13 ರಂದು ಚುನಾವಣೆ ನಡೆದಿತ್ತು. ಉಳಿದಂತೆ ಮಹಾರಾಷ್ಟ್ರದಲ್ಲಿ ಬಲವಂತರಾವ್ ಚೌವ್ಹಾಣ್ ಅವರ ನಿಧನದಿಂದ ತೆರವಾಗಿದ್ದ ನಾಂದೇಡ ಲೋಕಸಭಾ ಕ್ಷೇತ್ರಕ್ಕೆ ಇಂದು ಉಪಚುನಾವಣೆ ನಡೆದಿದೆ.ಉತ್ತರ ಪ್ರದೇಶದ 9, ಪಂಜಾಬ್ನ 4, ರಾಜಸ್ಥಾನದ 7 ಕ್ಷೇತ್ರಗಳ ಉಪಚುನಾವಣೆಯು ಇದೇ ಸಂದರ್ಭದಲ್ಲಿ ನಡೆದಿದೆ.

ಕಳೆದ ಅ.15 ರಂದು ಕೇಂದ್ರ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಿ ಅಸ್ಸಾಂನ 5, ಬಿಹಾರ, ಪಂಜಾಬ್ನ ತಲಾ 4, ಛತ್ತೀಸ್ಗಡ, ಗುಜರಾತ್, ಉತ್ತರಾಖಾಂಡ್, ಮೇಘಾಲಯದ ತಲಾ 1, ಕರ್ನಾಟಕದ 3, ಕೇರಳ, ಮಧ್ಯಪ್ರದೇಶ, ಸಿಖ್ಖಿಂನ ತಲಾ 2, ರಾಜಸ್ಥಾನದ 7, ಉತ್ತರಪ್ರದೇಶದ 9, ಪಶ್ಚಿಮ ಬಂಗಾಳದ 6 ಕ್ಷೇತ್ರಗಳಿಗೆ ಉಪಚುನಾವಣೆಯನ್ನು ಘೋಷಿಸಿತ್ತು. ಇಂದು ನಡೆದ ಉಪಚುನಾವಣೆ ಹಾಗೂ ಮಹಾ ಚುನಾವಣೆಗಳಲ್ಲಿ ಉತ್ಸಾಹದ ಮತದಾನ ಕಂಡುಬಂದಿದೆ.

ಮುಕ್ತ ಹಾಗೂ ನ್ಯಾಯ ಸಮತ ಚುನಾವಣೆಗಾಗಿ ಆಯೋಗ ಸಾಕಷ್ಟು ಬಿಗಿ ಕ್ರಮಗಳನ್ನು ಕೈಗೊಂಡಿತ್ತು. ಹಲವು ಕಡೆ ಹಣ ಹಂಚಿಕೆ ಹಾಗೂ ಚುನಾವಣಾ ಅಕ್ರಮಗಳ ಬಗ್ಗೆ ಆರೋಪಗಳು ಕೇಳಿ ಬಂದವಾದರೂ ಶಾಂತಿ ಭಂಗ ಅಥವಾ ಗಲಭೆಯಂತಹ ಪ್ರಕರಣಗಳು ವರದಿಯಾಗಲಿಲ್ಲ.

ಮಹಾರಾಷ್ಟ್ರದ ನಕ್ಸಲ್ ಪೀಡಿತ ಹಾಗೂ ಗಡಿಭಾಗದ ಬರಮಗಡ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮತಕೇಂದ್ರದ ಸುತ್ತಲೂ ತಾತ್ಕಾಲಿಕ ತಡೆಯನ್ನು ನಿರ್ಮಿಸಿ, ಬ್ಯಾರಿಕೇಡ್ಗಳನ್ನು ಅಳವಡಿಸುವ ಮೂಲಕ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನ ನಡೆಯಿತು. ಕೆಲವು ಕಡೆ ಮತದಾನಕ್ಕೆ ಆಗಮಿಸಿದ ತೃತೀಯ ಲಿಂಗಿಗಳಿಗೆ ಚುನಾವಣಾಧಿಕಾರಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ವಿಷಯಾಧಾರಿತ ಮತಗಟ್ಟೆಗಳು, ಸಖಿ, ಯುವ, ದಿವ್ಯಾಂಗ ಮತಗಟ್ಟೆಗಳು ಗಮನ ಸೆಳೆದಿವೆ.ಮುಂಬೈ ಹಾಲಿವುಡ್ನ ತವರೂರಾಗಿದ್ದು, ಅಕ್ಷಯ್ ಕುಮಾರ್ ಸೇರಿದಂತೆ ಖ್ಯಾತ ನಟರು, ಕ್ರಿಕೆಟಿಗ ಸಚಿವ ತೆಂಡೂಲ್ಕರ್ ಸೇರಿದಂತೆ ಹಲವರು ತಮ ಹಕ್ಕು ಚಲಾಯಿಸಿದರು.

RELATED ARTICLES

Latest News