ಬೆಂಗಳೂರು, ಅ.31- ಮಲೆನಾಡನ್ನು ವಿಶೇಷ ಕೃಷಿ ವಲಯವೆಂದು ಘೋಷಿಸಬೇಕು. ಅರಣ್ಯ ಕಾಯ್ದೆ ಬಗ್ಗೆ ಪುನರ್ ಮನನವಾಗಬೇಕು. ನೆಲವಾಸಿಗಳನ್ನು ಎತ್ತಂಗಡಿ ಮಾಡಬಾರದು. ಮಲೆನಾಡು-ಕರಾವಳಿ ಭಾಗಕ್ಕೆ ಹೈಕೋರ್ಟ್ ಪೀಠ ಮಂಜೂರು ಮಾಡಬೇಕು ಎಂಬ ಹಕ್ಕೊತ್ತಾಯವನ್ನು ಇಂದು ನಡೆದ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾಡಲಾಯಿತು.
ವಿಜಯನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮಲೆನಾಡು-ಕರಾವಳಿ ಜನಪರ ಒಕ್ಕೂಟ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಲೆನಾಡು ಹಾಗೂ ಕರಾವಳಿ ಭಾಗದ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ ಪರಿಹಾರದ ಮಾರ್ಗೋಪಾಯಗಳ ಬಗ್ಗೆಯೂ ಪ್ರಸ್ತಾಪಿಸಲಾಯಿತು.
ಅಡಿಕೆ ಸೇರಿದಂತೆ ವಿವಿಧ ಬೆಳೆಗಳಿಗೆ ರೋಗಗಳು ಕಾಣಿಸಿಕೊಂಡಿದ್ದು, ಪರಿಹಾರ ದೊರೆಯಬೇಕು. ಅರಣ್ಯ ಹಕ್ಕು ಕಾಯ್ದೆಗೆ ಸೂಕ್ತ ತಿದ್ದುಪಡಿ ತಂದು ಜನಪರವಾಗಿ ಕಾಯ್ದೆಗಳನ್ನು ಸರಳೀಕರಣಗೊಳಿಸಬೇಕು. ಮಡಿಕೇರಿ, ಚಿಕ್ಕಮಗಳೂರು, ಹಾಸನ ಪ್ರದೇಶದ ಕಾಫಿ, ಟೀ ಕಂಪೆನಿಯಲ್ಲಿನ ಕಾರ್ಮಿಕರ ಬವಣೆಗೆ ಸೂಕ್ತ ಪರಿಹಾರ ಸಿಗಬೇಕು. ಸ್ಥಳೀಯವಾಗಿಯೇ ಉದ್ಯೋಗಾವಕಾಶಗಳು ದೊರೆಯಲು ತಾಲ್ಲೂಕಿಗೊಂದು ಕೈಗಾರಿಕಾ ಪ್ರದೇಶ ನಿರ್ಮಾಣವಾಗಬೇಕು. ಕುಂದಾಪುರ ಕನ್ನಡ ಮತ್ತು ಹವ್ಯಕ ಕನ್ನಡ ಭಾಷೆಗಳಿಗೆ ಪ್ರತ್ಯೇಕ ಅಕಾಡೆಮಿ ರಚನೆಯಾಗಬೇಕು ಎಂಬ ಒತ್ತಾಯ ಮಾಡಲಾಯಿತು.
ಕಂದಾಯ, ಅರಣ್ಯ ಭೂಮಿ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಲು ಎದುರಾಗಿರುವ ತೊಡಕುಗಳನ್ನು ನಿವಾರಿಸಬೇಕು. ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಮೆಡಿಕಲ್, ಐಐಟಿ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣಕ್ಕೆ ನೆರವಾಗುವ ಯೋಜನೆ ರೂಪಿಸಬೇಕು. ಬಗರ್‍ಹುಕುಂ ಹಾಗೂ ಜೀವನಾಧಾರಿತ ಒತ್ತುವರಿ ಕೃಷಿ ಜಮೀನಿನಲ್ಲಿ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಮೀನುಗಾರಿಕೆಗೆ ಆಧುನಿಕ ಸ್ಪರ್ಶ ನೀಡಬೇಕು. ಕುದುರೆ ಮುಖ ನಿರಾಶ್ರಿತರಿಗೆ ಸೂರು ಕಲ್ಪಿಸಬೇಕು. ಮೀನುಗಾರಿಕೆಗೆ ಆಧುನಿಕ ಸ್ಪರ್ಶ ನೀಡಬೇಕು. ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಬೇಕು. ಗೋರಖ್‍ಸಿಂಗ್ ವರದಿ ಜಾರಿ ಮಾಡಬೇಕು ಎಂಬುದು ಸೇರಿದಂತೆ ಹಲವು ಹಕ್ಕೊತ್ತಾಯಗಳನ್ನು ಸಭೆಯಲ್ಲಿ ಮಾಡಲಾಯಿತು.
ಎಮರ್ಜೆನ್ಸಿ ವಾರ್ಡ್‍ನಲ್ಲಿ ಬೆಡ್ ಸಿಗದೆ ಬಿಜೆಪಿ ಮಾಜಿ ಸಂಸದನ ಪುತ್ರ ಸಾವು
ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಎದುರಿಸುತ್ತಿರುವ ಹತ್ತು-ಹಲವು ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ, ದೇವರಾಜು, ಲೋಹಿತ್ ನಾಯ್ಕರ್, ಜ್ಯೋತಿ ಪಾಟೀಲ್, ಮಲೆನಾಡು-ಕರಾವಳಿ ಜನಪರ ಒಕ್ಕೂಟದ ಸಂಚಾಲಕ ಸುನಿಲ್‍ಕುಮಾರ್ ಮುರೊಳ್ಳಿ ಮತ್ತಿತರರು ಮಾತನಾಡಿ, ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು.
ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್.ಶಂಕರ್, ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್, ವಿನಯ್‍ಕುಮಾರ್ ಸೊರಕೆ, ಶಾಸಕ ಟಿ.ಡಿ.ರಾಜೇಗೌಡ, ಮಾಜಿ ಶಾಸಕರಾದ ಎಂ.ಪಿ.ಕುಮಾರಸ್ವಾಮಿ, ಸುಕುಮಾರ್ ಶೆಟ್ಟಿ, ರೈತ ಮುಖಂಡ ಕೆ.ಟಿ.ಗಂಗಾಧರ್, ನಾರಾಯಣಗುರು ಹೋರಾಟ ಸಮಿತಿಯ ಸತ್ಯಜಿತ್ ಸೂರತ್‍ಕಲ್, ಹೋರಾಟಗಾರಾದ ರಾಧಾ ಸುಂದರೇಶ್, ಒಕ್ಕೂಟದ ಸಂಚಾಲಕ ಅನಿಲ್ ಹೊಸಕೊಪ್ಪ ಸೇರಿದಂತೆ ಹಲವು ಮುಖಂಡರು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು.