ಬೆಂಗಳೂರು,ಡಿ.20- ಮುಂದಿನ ಲೋಕಸಭೆ ಚುನಾವಣೆಯಲ್ಲಿ ಎಸಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಬೇಕೆನ್ನುವ ಪ್ರಸ್ತಾವನೆ ಮೂಲಕ ಇಂಡಿಯಾ ರಾಜಕೀಯ ಮೈತ್ರಿಕೂಟ ಕರ್ನಾಟಕದ ಚುನಾವಣಾ ಮಾದರಿಯನ್ನೇ ಅನುಸರಿಸಿ ಬಿಜೆಪಿಗೆ ಠಕ್ಕರ್ ನೀಡಲು ಮುಂದಾಗಿದೆ. ಪಂಚ ರಾಜ್ಯಗಳ ಚುನಾವಣೆಯ ಪೈಕಿ 3 ಕಡೆ ಭರ್ಜರಿ ಜಯಭೇರಿ ಭಾರಿಸಿ ಬಲಿಷ್ಠ ಸ್ಥಿತಿಯಲ್ಲಿರುವ ಬಿಜೆಪಿ ಮಹಾಸಮರದಲ್ಲೂ ದಿಗ್ವಿಜಯ ಸಾಧಿಸುವ ಹುಮ್ಮಸ್ಸಿನಲ್ಲಿದೆ.
ಆಡಳಿತ ವಿರೋಧಿ ಅಲೆಯಿಂದಾಗಿ ತೆಲಂಗಾಣದ ಬಿಎಸ್‍ಆರ್ ಪಕ್ಷ ಅಧಿಕಾರ ಕಳೆದುಕೊಂಡಿದ್ದು, ಅದರ ಲಾಭ ಪಡೆದು ಕಾಂಗ್ರೆಸ್ ಪಂಚರಾಜ್ಯಗಳಲ್ಲಿ ಒಂದು ಕಡೆ ಮಾತ್ರ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಆದರೂ ಗಣನೀಯ ಮತಗಳಿಕೆಯ ಮೂಲಕ ಕಾಂಗ್ರೆಸ್ ಸಂಪೂರ್ಣ ದುರ್ಬಲವಾಗಿಲ್ಲ ಎಂಬ ಸಂದೇಶ ರವಾನೆಯಾಗಿದೆ.ಮತಗಳಿಕೆಯಲ್ಲಿ ಉತ್ತಮ ಸ್ಥಿತಿಯಲ್ಲಿದ್ದರೂ ಸ್ಥಾನಗಳ ಗೆಲುವಿಕೆಯಲ್ಲಿ ಕಾಂಗ್ರೆಸ್ ಎಡವಿದೆ. ಬಿಜೆಪಿಯ ದಿಗ್ವಿಜಯ ಯಾತ್ರೆಯ ಕುದುರೆಯನ್ನು ಕಟ್ಟಿಹಾಕಬೇಕಾದರೆ ಮತಗಳ ಕ್ರೂಢೀಕರಣ ಅನಿವಾರ್ಯ ಎಂಬ ವಿಶ್ಲೇಷಣೆ ಇದ್ದು, ಈ ನಿಟ್ಟಿನಲ್ಲಿ ಇಂಡಿಯಾ ಮೈತ್ರಿಕೂಟ ಹೊಸ ದಾಳ ಉರುಳಿಸಿದೆ.
ಬದಲಾವಣೆಯಾದ ರಣತಂತ್ರ: ಈವರೆಗೂ ಇಂಡಿಯಾ ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ವಿಷಯ ಬಂದಾಗಲೆಲ್ಲಾ ಜಾರಿಕೆಯ ಉತ್ತರ ನೀಡುತ್ತಿದ್ದ 26 ಪಕ್ಷಗಳ ನಾಯಕರು ನಿನ್ನೆ ಇದ್ದಕ್ಕಿದ್ದಂತೆ ರಣತಂತ್ರ ಬದಲಿಸಿದ್ದಾರೆ. ಮಮತಾ ಬ್ಯಾನರ್ಜಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಹುದ್ದೆಗೆ ಪ್ರಸ್ತಾಪಿಸಿದ್ದು, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಬೆಂಬಲಿಸಿರುವುದು, ಇದಕ್ಕೆ ಪರೋಕ್ಷ ಅಸಮಾಧಾನ ಎಂಬಂತೆ ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‍ಕುಮಾರ್, ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಹೊರ ನಡೆದಿರುವುದು ನಾಟಕೀಯ ಬೆಳವಣಿಗೆಗಳಾಗಿವೆ.
ನಿರೀಕ್ಷೆಯಂತೆ ಮಲ್ಲಿಕಾರ್ಜುನ ಖರ್ಗೆ ಯವರು ಮೊದಲು ನಾವು ಚುನಾವಣೆಯನ್ನು ಗೆಲ್ಲೋಣ. ಸಂಸದರೇ ಆಗದಿದ್ದ ಮೇಲೆ ಪ್ರಧಾನಿಯಾಗುವುದು ಹೇಗೆ ಎಂದು ಪ್ರಧಾನಿ ಹುದ್ದೆಯ ಪ್ರಸ್ತಾಪವನ್ನು ನಯವಾಗಿಯೇ ತಳ್ಳಿಹಾಕಿದ್ದಾರೆ. ಈ ಎಲ್ಲಾ ಬೆಳವಣಿಗೆಗಳೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್‍ನಲ್ಲೇ ಬಿಸಿತುಪ್ಪ : ಕಾಂಗ್ರೆಸ್‍ನಲ್ಲಿ ಖರ್ಗೆಯವರ ಹೆಸರು ಎಐಸಿಸಿ ಅಧ್ಯಕ್ಷ ಹುದ್ದೆಗೆ ಪ್ರಸ್ತಾಪವಾಗುತ್ತಿದ್ದಂತೆ ಒಂದು ಬಣ ರಾಹುಲ್‍ಗಾಂಧಿಯವರನ್ನು ಸರ್ವೋಚ್ಛ ನಾಯಕ ಎಂಬಂತೆ ಮೇಳೈಸಲಾರಂಭಿಸಿತ್ತು. ಆವರೆಗೂ ರಾಹುಲ್‍ಗಾಂಧಿಯನ್ನು ಅಪ್ರಬುದ್ಧ… ಪಪ್ಪು… ಎಂದೆಲ್ಲಾ ಬಿಂಬಿಸುತ್ತಿದ್ದ ಕಾಂಗ್ರೆಸ್‍ನ ಜಿ-23 ಬಣವೇ ಏಕಾಏಕಿ ಭಾರತ್ ಜೋಡೊ ಯಾತ್ರೆಯ ಬಳಿಕ ರಾಹುಲ್‍ಗಾಂಧಿ ಪ್ರಬುದ್ಧರು, ಬಲಿಷ್ಠ ನಾಯಕ ಎಂದೆಲ್ಲಾ ಹೊಗಳಲಾರಂಭಿಸಿತ್ತು.
ಖರ್ಗೆಯವರು ಅಧ್ಯಕ್ಷರಾದ ಬಳಿಕವಂತೂ ರಾಹುಲ್‍ಗಾಂ ಒಪ್ಪುತ್ತಾರೋ, ಬಿಡುತ್ತಾರೋ ಎಂಬುದನ್ನು ಗಮನಿಸದೇ ಪ್ರತಿ ಹಂತದಲ್ಲೂ ಭಟ್ಟಂಗಿತನವನ್ನು ಪಾಲಿಸಿ ರಾಹುಲ್ ಗಾಂಧಿಯನ್ನು ಉನ್ನತ ನಾಯಕ ಎಂದು ಬಿಂಬಿಸುವ ಜೊತೆಗೆ ಖರ್ಗೆಯವರನ್ನು ನಗಣ್ಯ ಮಾಡುವ ಯತ್ನಗಳು ನಡೆಯುತ್ತಲೇ ಇದ್ದವು. ಒಂದರ್ಥದಲ್ಲಿ ರಾಹುಲ್‍ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದೇ ಬಿಂಬಿಸಲಾಗಿತ್ತು.
ನಿನ್ನೆ ಮಮತಾ ಬ್ಯಾನರ್ಜಿ ಅವರ ಹೊಸ ದಾಳ ಅನ್ಯ ಪಕ್ಷಗಳಿಗಷ್ಟೇ ಅಲ್ಲ, ಸ್ವತಃ ಕಾಂಗ್ರೆಸ್‍ನಲ್ಲೂ ಬಹಳಷ್ಟು ಮಂದಿಗೆ ಬಿಸಿ ತುಪ್ಪವಾಗಿದೆ. ಆದರೆ ಚುನಾವಣೆ ಗೆಲ್ಲುವ ಮಹತ್ವದ ಗುರಿಯ ಎದುರು ಸಣ್ಣಪುಟ್ಟ ಅಸಹನೆಗಳನ್ನು ಕಡೆಗಣಿಸಿರುವಂತೆ ಕಂಡುಬರುತ್ತಿದೆ.
ಮತ ಬ್ಯಾಂಕ್‍ನ ಲೆಕ್ಕಾಚಾರ: ಬಿಜೆಪಿ ಬೇರೆಬೇರೆ ರೀತಿಯ ಕಾರ್ಯತಂತ್ರಗಳ ಮೂಲಕ ತನ್ನ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಂಡಿದೆ. ಅಲ್ಪಸಂಖ್ಯಾತರು, ದಲಿತರು ಕಾಂಗ್ರೆಸ್‍ನ ಮೂಲ ಮತ ಬ್ಯಾಂಕ್ ಎಂದು ಪರಿಗಣಿಸಲಾಗಿತ್ತು. ಆದರೆ ಚುನಾವಣೆಗಳಿಗಷ್ಟೇ ಈ ಸಮುದಾಯಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಧಿಕಾರದ ವಿಷಯ ಬಂದಾಗ ಕಾಂಗ್ರೆಸ್ ಮೇಲ್ವರ್ಗದತ್ತಲೆ ಮುಖ ಮಾಡುತ್ತಿದೆ ಎಂಬ ಆಕ್ಷೇಪಣೆಯಿಂದಾಗಿ ಮೂಲ ಮತ ಬ್ಯಾಂಕ್ ಚದುರಿ ಹೋಗಿತ್ತು.
ಪ್ರಸ್ತುತ ರಾಜಕೀಯ ಸಂದರ್ಭದಲ್ಲಿ ದಲಿತರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗ ಜೊತೆಯಲ್ಲಿ ಅಳಿದುಳಿದ ಮೇಲ್ವರ್ಗ ಗಳ ಮತಗಳು ಮಾತ್ರ ಕಾಂಗ್ರೆಸ್ ಅಥವಾ ಇಂಡಿಯಾ ಮೈತ್ರಿಕೂಟವನ್ನು ಅಕಾರದ ಗದ್ದುಗೆಗೆ ಸಮೀಪ ತರಲು ಸಾಧ್ಯ ಎನ್ನಲಾಗುತ್ತಿದೆ.ಬಿಜೆಪಿ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಓಬಿಸಿ ಹಾಗೂ ಮೇಲ್ವರ್ಗದ ಮತಗಳನ್ನು ಕ್ರೂಢೀಕರಿಸಿಕೊಳ್ಳುತ್ತಿದೆ. ಇದಕ್ಕೆ ಎದುರೇಟು ಎಂಬಂತೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಪ್ರಸ್ತಾಪಿಸುವ ಮೂಲಕ ದಲಿತರ ಮತ ಬ್ಯಾಂಕ್ ಅನ್ನು ಗಟ್ಟಿಗೊಳಿಸಿಕೊಳ್ಳುವ ರಣತಂತ್ರ ರೂಪಿಸಿದೆ.
ನಟಿ ರಶ್ಮಿಕಾ ಡೀಪ್ ಫೇಕ್ ವಿಡಿಯೋ ಮಾಡಿದ ನಾಲ್ವರನ್ನು ಪತ್ತೆ ಹಚ್ಚಿದ ಪೋಲೀಸರು
ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಯವರ ಆಡಳಿತದಿಂದ ಅತೃಪ್ತಿಗೊಂಡಿರುವ ದಲಿತರು ಮತ್ತು ಹಿಂದುಳಿದ ವರ್ಗಗಳು ಟಿಎಂಸಿ ಯಿಂದ ದೂರವಾಗುತ್ತಿದ್ದರೂ, ಈ ಹಿನ್ನೆಲೆಯಲ್ಲಿಯೂ ರಾಜ್ಯ ಹಾಗೂ ರಾಷ್ಟ್ರ ರಾಜಕಾರಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಮಮತಾ ಬ್ಯಾನರ್ಜಿ ಖರ್ಗೆ ಹೆಸರು ಪ್ರಸ್ತಾಪಿಸಿದ್ದಾರೆ ಎಂದೂ ಹೇಳಲಾಗುತ್ತಿದೆ. ಕಳೆದ 2 ತಿಂಗಳ ಹಿಂದೆ ಕರ್ನಾಟಕ ವಿಧಾನಸಭೆಯ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಇದೇ ರೀತಿಯ ಮತ ಬ್ಯಾಂಕ್ ರಾಜ ಕಾರಣದ ರಣತಂತ್ರವನ್ನು ಅನುಸರಿಸಿತ್ತು.
ನಾಯಕತ್ವದ ಗೊಂದಲ: ಕರ್ನಾಟಕ ವಿಧಾನ ಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‍ನ ಮುಖ್ಯ ಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಯನ್ನು ಬಿಜೆಪಿ ಬೃಹದಾಕಾರವಾಗಿ ಮುಂದಿಟ್ಟಿತ್ತು. ಅದಕ್ಕೆ ನೇರವಾಗಿ ಉತ್ತರ ನೀಡದೇ ಕೆಲವು ಬೆಂಬಲಿಗರು ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಪ್ರಚಾರ ಮಾಡಿದ್ದರು. ಡಿ.ಕೆ.ಶಿವಕುಮಾರ್ ಕೆಲವು ಸಮಾವೇಶಗಳಲ್ಲಿ ತಮಗೆ ಅವಕಾಶ ಸಿಗಲಿದೆ ಎಂದು ಹೇಳಿಕೊಳ್ಳುವ ಮೂಲಕ ಒಕ್ಕಲಿಗ ಸಮುದಾಯದವರು ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆ ಹುಟ್ಟಿಸಿದ್ದರು. ಮತ್ತೊಂದೆಡೆ ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಬರುವುದಾದರೆ ನಾನು ಎಲ್ಲಾ ತ್ಯಾಗಕ್ಕೂ ಸಿದ್ಧ ಎಂದು ಹೇಳಿ ಡಿ.ಕೆ.ಶಿವಕುಮಾರ್ ಗೊಂದಲ ಮೂಡಿಸಿದ್ದರು. ಇದು ದಲಿತರ ಮತಗಳನ್ನು ಸೆಳೆಯಲು ಸಹಾಯವಾಯಿತು.
ಅತ್ತ ಲಿಂಗಾಯತ ಸಮುದಾಯದ ಕೆಲ ನಾಯಕರು ಎಂ.ಬಿ.ಪಾಟೀಲ್ ಅವರ ಹೆಸರನ್ನು ಮುನ್ನೆಲೆಗೆ ತೇಲಿಬಿಟ್ಟರು. ಹೀಗಾಗಿ ವಿವಿಧ ಜಾತಿಗಳ ಮೂಗಿಗೆ ತುಪ್ಪ ಸವರುವ ಮೂಲಕ ಗೊಂದಲ ಮೂಡಿಸಿ ಎಲ್ಲಾ ಪ್ರಮುಖ ಜಾತಿಗಳ ಮತಗಳನ್ನು ಸೆಳೆದುಕೊಂಡು ಗೆಲುವು ಸಾಸಿತ್ತು. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲೂ ಅದೇ ರೀತಿಯ ರಣತಂತ್ರವನ್ನು ಅನುಸರಿಸು ವಂತೆ ಕಂಡುಬರುತ್ತಿದೆ.
ಇಂಡಿಯಾ ಕೂಟದಲ್ಲಿರುವ ನಿತೀಶ್‍ಕುಮಾರ್, ಮಮತಾ ಬ್ಯಾನರ್ಜಿ, ಎಂ.ಕೆ. ಸ್ಟಾಲಿನ್, ಅರವಿಂದ್ ಕೇಜ್ರಿವಾಲ್ ಸೇರಿದಂತೆ ದಂಡು ದಂಡು ನಾಯಕರು ಪ್ರಧಾನಿ ಹುದ್ದೆಗೆ ಟವಲ್ ಹಾಕಲು ಹವಣಿಸುತ್ತಿದ್ದಾರೆ. ಈಗಾಗಲೇ ಹಲವಾರು ಬಾರಿ ಈ ರೀತಿಯ ಚರ್ಚೆಗಳೂ ಕೂಡ ಕೇಳಿಬಂದಿವೆ. ಅದೆಲ್ಲವನ್ನೂ ಬದಿಗಿರಿಸಿ ಏಕಾಏಕಿ ಖರ್ಗೆಯವರ ಹೆಸರನ್ನು ಪ್ರಸ್ತಾಪಿಸಿರುವುದು ಮತ್ತೊಂದು ಕಡೆ ರಾಹುಲ್‍ಗಾಂಯವರನ್ನು ಮೇಳೈಸುವ ಮೂಲಕ ಕಾಂಗ್ರೆಸ್ ಕರ್ನಾಟಕದಲ್ಲಿ ಅನುಸರಿಸಿದಂತೆ ನಾಯಕತ್ವದ ಗೊಂದಲದ ತಂತ್ರಗಾರಿಕೆ ಪಾಲಿಸಲಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.