Saturday, April 27, 2024
Homeರಾಜ್ಯಬಿಜೆಪಿ ಸಂಸದರಿಂದ ರಾಜ್ಯಕ್ಕೆ ಅನ್ಯಾಯ : ಬಿ.ಕೆ.ಹರಿಪ್ರಸಾದ್

ಬಿಜೆಪಿ ಸಂಸದರಿಂದ ರಾಜ್ಯಕ್ಕೆ ಅನ್ಯಾಯ : ಬಿ.ಕೆ.ಹರಿಪ್ರಸಾದ್

ಬೆಂಗಳೂರು,ಡಿ.20- ರಾಜ್ಯದಿಂದ ಬಿಜೆಪಿಗೆ 25 ಸಂಸದರನ್ನು ಗೆಲ್ಲಿಸಿಕೊಡಲಾಗಿತ್ತು. ಆದರೂ ನೆರೆ, ಬರದಂತಹ ಸಂದರ್ಭದಲ್ಲಿ ಪ್ರಧಾನಿಯವರಾಗಲೀ, ಕೇಂದ್ರ ಗೃಹಸಚಿವರಾಗಲೀ ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪರಿಸ್ಥಿತಿ ಪರಿಶೀಲನೆ ನಡೆಸದೆ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆ ಸಂದರ್ಭದಲ್ಲಿ ಪದೇಪದೇ ರಾಜ್ಯ ಪ್ರವಾಸ ಮಾಡುತ್ತಿದ್ದ ಪ್ರಧಾನಿಯವರು ಅನಂತರ ಇತ್ತ ತಲೆ ಹಾಕಿಲ್ಲ. ನೆರೆಯ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಿಗೆ ಬಂದು ಹೋಗಿದ್ದಾರೆ. ನೆರೆ ಸಂದರ್ಭದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿಲ್ಲ. ಬರ ಪರಿಸ್ಥಿತಿಯನ್ನೂ ವಿಮರ್ಶೆ ಮಾಡಲಿಲ್ಲ. ರಾಜ್ಯಕ್ಕೆ ಅಗತ್ಯವಾದ ಆರ್ಥಿಕ ನೆರವು ನೀಡುವುದಂತೂ ದೂರದ ಮಾತೇ ಆಗಿದೆ. 25 ಸಂಸದರನ್ನು ಗೆಲ್ಲಿಸಿದ್ದಕ್ಕೆ ಬಿಜೆಪಿ ತಕ್ಕ ಪ್ರತಿಫಲ ನೀಡುತ್ತಿದೆ ಎಂದು ಹೇಳಿದರು.

ಇಂಡಿಯಾ ರಾಜಕೀಯ ಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆಯ ಹೆಸರು ಪ್ರಸ್ತಾಪವಾಗುತ್ತಿದ್ದಂತೆ ಬಿಜೆಪಿ ನಾಯಕರು, ರಾಹುಲ್‍ಗಾಂಧಿಯವರ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಮೊದಲು ಕರ್ನಾಟಕ ವಿಧಾನಪರಿಷತ್‍ಗೆ ವಿರೋಧಪಕ್ಷದ ನಾಯಕನನ್ನು ನೇಮಿಸಿಕೊಳ್ಳಲಿ. ಅವರ ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸಿಕೊಳ್ಳಲಿ ಎಂದು ತಿಳಿಸಿದರು.

ಬಿಜೆಪಿಯಲ್ಲಿರುವ ಹಲವು ಶಾಸಕರು ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆ. ಕಾಂಗ್ರೆಸ್‍ನ ಶಾಸಕಾಂಗ ಸಭೆಗೆ ಬಿಜೆಪಿ ಶಾಸಕರು ಬಂದು ಪುಷ್ಕಳವಾದ ಭೋಜನ ಮಾಡಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಕಾಂಗ್ರೆಸ್‍ಗೋಸ್ಕರ ಬಂದರೂ ಬರಬಹುದು ಎಂದು ಹೇಳಿದರು. ಸಂಸತ್‍ನಲ್ಲಿನ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವರ ಮೌನ ಪ್ರಶ್ನಾರ್ಹವಾಗಿದೆ. ಎಲ್ಲದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿಗಳು, ಕೇಂದ್ರ ಗೃಹಸಚಿವರು ಭದ್ರತಾ ಲೋಪ ವಿಷಯದಲ್ಲಿ ಜಾರಿಕೊಳ್ಳುತ್ತಿದ್ದಾರೆ ಎಂದು ದೂರಿದರು.

ಸಂಸತ್‍ನ ಭದ್ರತಾ ಲೋಪದ ವಾಸ್ತವಾಂಶವನ್ನು ಬಹಿರಂಗಕ್ಕೆ ಪ್ರಿಯಾಂಕ್ ಖರ್ಗೆ ಆಗ್ರಹ

ಭದ್ರತಾ ಲೋಪವನ್ನು ಪ್ರಶ್ನಿಸಿದ ಸಂಸದರ ಪೈಕಿ 141 ಮಂದಿಯನ್ನು ಅಮಾನತುಪಡಿಸಲಾಗಿದೆ. ದೇಶದಲ್ಲಷ್ಟೇ ಅಲ್ಲ, ವಿಶ್ವದ ಯಾವುದೇ ಜನಪ್ರತಿನಿ ಸಂಸ್ಥೆಗಳಲ್ಲಿ ಚುನಾಯಿತ ಸದಸ್ಯರನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಅನರ್ಹಗೊಳಿಸಿದ ಉದಾಹರಣೆಗಳಿಲ್ಲ.

ಪ್ರಧಾನಿಯವರು ಸಂಸತ್ ನಡೆಯುವಾಗ ಭದ್ರತಾ ಲೋಪದ ಬಗ್ಗೆ ಸಂಸತ್‍ನಲ್ಲೇ ಉತ್ತರ ನೀಡಬೇಕು. ಅದು ಬಿಟ್ಟು ದಕ್ಷಿಣಾ ಕೊರಿಯಾದ ಚಾನೆಲ್‍ಗೆ ಪ್ರಧಾನಿಯವರು ಹೇಳಿಕೆ ನೀಡುತ್ತಾರೆ. ಅದು ದಾಖಲೆಯಾಗಿ ಉಳಿಯುವುದಿಲ್ಲ. ಸಂಸತ್‍ನಲ್ಲಿ ಮಾತನಾಡಿದರೆ ಅದು ಅಧಿಕೃತವಾದ ದಾಖಲೆ ಎಂದು ಹೇಳಿದರು. ದೇಶದ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆಗೆ ತಿರುಗಿಸಲು ಸಂಸತ್‍ನ ಭದ್ರತಾಲೋಪವನ್ನು ಸೃಷ್ಟಿಸಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಈವರೆಗೂ ಪ್ರಧಾನಿ ಮತ್ತು ಗೃಹಸಚಿವರ ಮೌನವನ್ನು ನೋಡಿದರೆ ಇಂತಹ ಅನುಮಾನಗಳು ಸಹಜವಾಗಿ ಮೂಡುತ್ತವೆ ಎಂದರು.

ರಾಜಕೀಯವಾಗಿ ತಾವು ಕಾಲಕಾಲಕ್ಕೆ ನೀಡಬೇಕಾದ ಹೇಳಿಕೆಗಳನ್ನು ಹೇಳುತ್ತಲೇ ಬಂದಿದ್ದೇನೆ. ಮೌನಕ್ಕೆ ಶರಣಾಗಿಲ್ಲ. ಈ ಮೊದಲು ಬಿಜೆಪಿ ಮತ್ತು ಅದರ ಅಂಗಪಕ್ಷಗಳು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದರು. ಈಗ ವಿಧಾನಸಭೆಯ ಚುನಾವಣೆ ಬಳಿಕ ಆ ಪರಿಸ್ಥಿತಿ ಕಡಿಮೆಯಾಗಿದೆ ಎಂದು ಅವರು ಹೇಳಿದರು.

RELATED ARTICLES

Latest News