ಬೆಂಗಳೂರು,ಡಿ.21- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಪ್ರಧಾನಿ ಅಭ್ಯರ್ಥಿಯಾಗುವುದಾದರೆ ಅದು ಸಂತಸದ ವಿಷಯ. ಆದರೆ ಇದಕ್ಕೆ ನಮ್ಮ ಮುಂದಿರುವುದು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲುವ ಗುರಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖರ್ಗೆಯವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೊ, ಮಾಡಬಾರದೊ ಎನ್ನುವುದನ್ನು ಖುದ್ದು ಅವರೇ ತೆಗೆದುಕೊಳ್ಳಬೇಕಾದ ನಿರ್ಧಾರ. ಒಂದು ವೇಳೆ ಸ್ಪರ್ಧೆ ಮಾಡಿದರೆ ಅವರನ್ನು ಗೆಲ್ಲಿಸಿಕೊಳ್ಳುವುದು ನಮ್ಮ ಕರ್ತವ್ಯ ಎಂದರು. ಪ್ರಧಾನಿಯ ಅಭ್ಯರ್ಥಿ ಕುರಿತಂತೆ ಚರ್ಚೆಯಾಗಬೇಕು. ಮತ್ತೊಬ್ಬ ಕನ್ನಡಿಗರಾದ ಖರ್ಗೆಯವರು ಪ್ರಧಾನಿ ಹುದ್ದೆಗೇರುವುದಾದರೆ ಅದಕ್ಕಿಂತ ಖುಷಿಯ ವಿಚಾರ ಮತ್ತೊಂದಿಲ್ಲ. ಆದರೆ ಖರ್ಗೆಯವರೇ ಹೇಳಿದ ಪ್ರಕಾರ, ಮೊದಲು ಬಿಜೆಪಿಯ ವಿರುದ್ಧ ಹೋರಾಟ ಮಾಡಿ ಗೆಲುವು ಸಾಧಿಸಬೇಕಿದೆ. ಆನಂತರ ಉಳಿದ ಚರ್ಚೆಗಳು ಸೂಕ್ತ ಎಂದರು.
ಬೆಂಗಳೂರಿನಲ್ಲಿ 17 ಮಂದಿಯಲ್ಲಿ ಹೊಸ ಕೊರೊನಾ ಸೋಂಕು ಪತ್ತೆ
ಎನ್‍ಐಎ ಕ್ರಮ ವಿಳಂಬ:
ಶಂಕಿತ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ರಾಷ್ಟ್ರೀಯ ತನಿಖಾ ದಳ ರಾಜ್ಯದಿಂದ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಹೋಗಿದೆ. ಆದರೆ ಈ ಮೊದಲೇ ರಾಜ್ಯದ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು. ಆತನ ಚಲನವಲನಗಳ ಮೇಲೂ ನಿಗಾ ವಹಿಸಲಾಗಿತ್ತು. ಎನ್‍ಐಎಗೆ ಮಾಹಿತಿ ತಡವಾಗಿ ಸಿಕ್ಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳು ಹಾಗೂ ಅದರಲ್ಲಿರುವ ಶಂಕಿತರ ಮೇಲೆ ನಿಗಾ ವಹಿಸಬೇಕು. ಶೀಥಲೀಕರಣದಲ್ಲಿರುವ ಪ್ರಕರಣಗಳಿಗೆ ಮರುಜೀವ ನೀಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದ್ದೇನೆ. ಯಾರು ಸಕ್ರಿಯವಾಗಿದ್ದಾರೆ, ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದು ಕಾಲಕಾಲಕ್ಕೆ ಮಾಹಿತಿ ಇರಬೇಕು ಎಂದರು.
ಸಂಸತ್‍ನಲ್ಲಿನ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಬಾಗಲಕೋಟೆಯಲ್ಲಿನ ಯುವಕನೊಬ್ಬನನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈಗಾಗಲೇ ಬಂಧಿತ ಆರೋಪಿ ಮನೋರಂಜನ್ ಜೊತೆ ಡಿಸೆಂಬರ್ 4 ವರೆಗೂ ಬಾಗಲಕೋಟೆ ಯುವಕ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಹೀಗಾಗಿ ಸಂಸತ್ ಮೇಲಿನ ದಾಳಿಯ ಬಗ್ಗೆ ಯಾವುದಾದರೂ ಮಾಹಿತಿ ಹಂಚಿಕೊಂಡಿದ್ದನೇ ಎಂಬ ವಿವರ ಪಡೆದುಕೊಳ್ಳಲು ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಿದರು.
ನಿಗಮ ಮಂಡಳಿಗಳ ನೇಮಕಾತಿ ಸಂಬಂಧಪಟ್ಟಂತೆ ದೆಹಲಿಯಲ್ಲಿ ಯಾವ ರೀತಿಯ ಚರ್ಚೆಗಳಾಗಿವೆ ಎಂಬುದು ತಮಗೆ ಮಾಹಿತಿ ಇಲ್ಲ. ಶಾಸಕರ ಪಟ್ಟಿಯನ್ನು ತಾವು ತಯಾರಿಸಿಕೊಟ್ಟಿದ್ದಾಗಿ ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು ಎಂದರು. ಸಂಸತ್‍ನಲ್ಲಿ ಹೆಚ್ಚು ಸಂಸದರ ಅಮಾನತುಗೊಳಿಸಿರುವುದನ್ನು ಗಮನಿಸಿದರೆ ಬಿಜೆಪಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬದಲಾವಣೆ ಮಾಡುವ ಹುನ್ನಾರ ನಡೆಸಿದೆ ಎಂಬುದು ಸ್ಪಷ್ಟವಾಗಿದೆ.
ವಿಪಕ್ಷಗಳ ಎಲ್ಲಾ ಸಂಸದರನ್ನೂ ಹೊರಗಿಟ್ಟು ಕಾಯ್ದೆಯನ್ನು ಅಂಗೀಕರಿಸುತ್ತಾರೆ ಎಂದರೆ ಪ್ರಜಾಪ್ರಭುತ್ವಕ್ಕೆ ಅರ್ಥವಿದೆಯೇ. ಇತರ ದೇಶಗಳಂತೆ ನಾವೂ ಕೂಡ ಸೇನಾ ಆಡಳಿತವನ್ನು ಜಾರಿಗೆ ತರಬಹುದಿತ್ತಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಯೋಜನೆಗಳು ಕುಂಠಿತವಾಗಿವೆ ಎಂದು ಶಾಸಕ ಡಿ.ಆರ್.ಪಾಟೀಲ್ ಆಕ್ಷೇಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ವೇಳೆಯಲ್ಲಿ ಇತರ ಅಭಿವೃದ್ಧಿ ಯೋಜನೆಗಳು ನಿಧಾನವಾಗಿ ನಡೆಯುತ್ತವೆ ಎಂದು ಹೇಳಲಾಗಿತ್ತು. ಹೀಗಾಗಿ ಶಾಸಕರು ಸಹನೆಯಿಂದ ಇರಬೇಕು. ಮುಂದಿನ ಬಜೆಟ್‍ನಲ್ಲಿ ಸಾಕಷ್ಟು ಅನುದಾನ ಒದಗಿಸಿ ಅಭಿವೃದ್ಧಿಯನ್ನು ಚುರುಕುಗೊಳಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.