Saturday, April 27, 2024
Homeರಾಜಕೀಯಕೋಲಾರದಿಂದ ಖರ್ಗೆ ಕಣಕ್ಕೆ..?

ಕೋಲಾರದಿಂದ ಖರ್ಗೆ ಕಣಕ್ಕೆ..?

ಬೆಂಗಳೂರು,ಮಾ.29- ಜಿಲ್ಲೆಯಲ್ಲಿ ಉಭಯ ಬಣವನ್ನು ಸಮಾಧಾನಪಡಿಸಲು ನಾನಾ ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಒಂದೆಡೆ ಹೊಸ ಅಭ್ಯರ್ಥಿಯ ಹುಡುಕಾಟ ನಡೆದಿದ್ದರೆ, ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಕ್ಷೇತ್ರದಿಂದ ಕಣಕ್ಕಿಳಿಯುವಂತೆ ರಮೇಶ್ ಕುಮಾರ್ ಬಣ ಹೊಸ ಪ್ರಸ್ತಾವನೆ ಮುಂದಿಟ್ಟಿದೆ.

ಈ ನಡುವೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ತನಗೆ ಟಿಕೆಟ್ ಸಿಗುವುದಿಲ್ಲ ಎಂಬುದು ಖಾತ್ರಿಯಾಗಿರುವ ಹಿನ್ನೆಲೆಯಲ್ಲಿ ಮಾಜಿ ಶಾಸಕ ಶಿವಶಂಕರ ರೆಡ್ಡಿ ಕಾಂಗ್ರೆಸ್ ತೊರೆಯಲು ಮುಂದಾಗಿದ್ದಾರೆ.ಚಿಕ್ಕಬಳ್ಳಾಪುರದಲ್ಲಿ ಮರು ಸ್ಪರ್ಧೆಗಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿಯವರ ದುಂಬಾಲು ಬಿದ್ದಿರುವುದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಬಿಸಿ ತುಪ್ಪವಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಯುವ ಕಾಂಗ್ರೆಸ್ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಅವರಿಗೆ ಟಿಕೆಟ್ ಕೊಡಿಸುವ ಸಂಬಂಧ ನಿರ್ಧಾರ ಕೈಗೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅದಕ್ಕೆ ಸಹಮತ ವ್ಯಕ್ತಪಡಿಸಿದ್ದರು. ಆದರೆ ವೀರಪ್ಪ ಮೊಯ್ಲಿಯವರ ಪಟ್ಟು ರಾಜ್ಯ ನಾಯಕರಿಗೆ ಇರಿಸುಮುರಿಸು ಉಂಟು ಮಾಡಿದೆ.

ಮೊಯ್ಲಿಯವರು ಕ್ಷೇತ್ರದಲ್ಲಿ ಸಕ್ರಿಯವಾಗಿಲ್ಲ, ಸಂಘಟನೆಯಲ್ಲಿ ತೊಡಗಿಸಿಕೊಂಡಿಲ್ಲ ಎಂಬ ನಾನಾ ರೀತಿಯ ದೂರುಗಳನ್ನು ಹೈಕಮಾಂಡ್ ಮುಂದಿಟ್ಟು ಟಿಕೆಟ್ ತಪ್ಪಿಸುವ ಪ್ರಯತ್ನಗಳು ನಡೆದಿದ್ದವು. ಆದರೆ ಇದ್ಯಾವುದಕ್ಕೂ ಹೈಕಮಾಂಡ್ ಬೆಲೆ ಕೊಟ್ಟಂತೆ ಕಾಣುತ್ತಿಲ್ಲ. ರಕ್ಷಾ ರಾಮಯ್ಯ ಅವರ ಹೆಸರು ಕೊನೆಕ್ಷಣದಲ್ಲಿ ಪಟ್ಟಿಗೆ ಸೇರಿರುವ ಬಗ್ಗೆ ಕ್ಷೇತ್ರದ ಕಾಂಗ್ರೆಸ್ಸಿಗರು ಸಿಡಿಮಿಡಿ ವ್ಯಕ್ತಪಡಿಸಿದ್ದಾರೆ.

ಕೋಲಾರಕ್ಕೆ ಹೊಸ ಅಭ್ಯರ್ಥಿ ? :
28 ಲೋಕಸಭಾ ಕ್ಷೇತ್ರಗಳ ಪೈಕಿ ಹೆಚ್ಚು ಕಗ್ಗಂಟಾಗಿರುವ ಕೋಲಾರದಲ್ಲಿ ಉಭಯ ಬಣಗಳನ್ನು ಸಮಾಧಾನಪಡಿಸಲು ಹೊಸ ಅಭ್ಯರ್ಥಿಯ ಹುಡುಕಾಟಕ್ಕೆ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಮೇಶ್ಕುಮಾರ್ ಬಣದ ನಾಯಕರ ಜೊತೆ ಸಭೆ ನಡೆಸಿ ಪಕ್ಷಕ್ಕೆ ಇರಿಸು ಮುರಿಸು ಉಂಟು ಮಾಡುವ ನಡವಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. ಒಂದು ವೇಳೆ ನಮ್ಮ ಮಾತನ್ನು ಮೀರಿ ನೀವು ಇದೇ ವರ್ತನೆಯನ್ನು ಮುಂದುವರೆಸಿದರೆ ನಿಮ್ಮ ದಾರಿಗೆ ನಿಮಗೆ ಎಂಬ ಧೋರಣೆಗೆ ಪಕ್ಷ ಬರಬೇಕಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಅವರ ಕಿವಿಮಾತುಗಳನ್ನು ಕೇಳಿದ ಜಿಲ್ಲೆಯ ನಾಯಕರು ಮುನಿಯಪ್ಪ ಅವರ ಕುಟುಂಬ ಹೊರತುಪಡಿಸಿ ನೀವು ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕೆಲಸ ಮಾಡಿ ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.

ಮುನಿಯಪ್ಪ ತಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಅಳಿಯ ಚಿಕ್ಕಪೆದ್ದಣ್ಣ ಅವರನ್ನು ಅಭ್ಯರ್ಥಿಯೆಂದು ಬಿಂಬಿಸಿದ್ದಾರೆ. ಒಂದು ವೇಳೆ ತಮ್ಮ ಕುಟುಂಬಕ್ಕೆ ಟಿಕೆಟ್ ಕೈ ತಪ್ಪಿದರೆ ರಾಜ್ಯಾದ್ಯಂತ ಕಾಂಗ್ರೆಸ್ಗೆ ಹಿನ್ನಡೆಯಾಗಲಿದೆ, ಎಡಗೈ ಸಮುದಾಯದ ಮತಗಳು ಕೈತಪ್ಪಲಿವೆ ಎಂಬ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ ತಮ್ಮ ಸಮುದಾಯದ ಸಭೆ ನಡೆಸಿದ ಮುನಿಯಪ್ಪ ಒಳಮೀಸಲಾತಿ ಹಾಗೂ ದಲಿತ ಮುಖ್ಯಮಂತ್ರಿ ವಿಚಾರ ಕುರಿತು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ರಮೇಶ್ಕುಮಾರ್ ಬಣದ ಒತ್ತಡಕ್ಕೆ ಮಣಿದಿರುವ ಕಾಂಗ್ರೆಸ್ ನಾಯಕರು ಎಡಗೈ ಸಮುದಾಯಕ್ಕೆ ಅವಕಾಶ ನೀಡುವುದಾದರೆ ಎಲ್.ಹನುಮಂತಯ್ಯ ಅಥವಾ ಮುನಿಯಪ್ಪ ಅವರೇ ಸೂಚಿಸುವ ಕುಟುಂಬದ ಹೊರತಾದ ಅನ್ಯ ಅಭ್ಯರ್ಥಿಗೆ ಅವಕಾಶ ಮಾಡಿಕೊಡುವ ಚಿಂತನೆಯಲ್ಲಿದೆ. ಈ ನಡುವೆ ಬೆಂಗಳೂರು ಕೇಂದ್ರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ವಿ.ಗೌತಮ್ ಮತ್ತು ಕೋಲಾರ ಮೂಲದವರೇ ಆದ ಉದ್ಯಮಿ ವಿ.ನಾರಾಯಣಸ್ವಾಮಿ ಅವರ ಹೆಸರುಗಳು ಕೇಳಿಬಂದಿವೆ. ಜೊತೆಯಲ್ಲಿ ದಲಿತ ಮುಖಂಡ ಎಂ.ಸಿ.ಮುನಿಯಪ್ಪ, ಡಾ.ಬಿ.ಸಿ.ಮುದ್ದುಗಂಗಾಧರ್ ಅವರ ಹೆಸರುಗಳೂ ಚರ್ಚೆಯಲ್ಲಿವೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸ್ರ್ಪಸುವುದಾದರೆ ತಮ್ಮ ಸಂಪೂರ್ಣ ಬೆಂಬಲ ಇದೆ ಎಂದು ಮುನಿಯಪ್ಪ ಬಣ ಹೊಸ ದಾಳ ಉರುಳಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಕೋಲಾರದಲ್ಲಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಬೇಕು, ಇಲ್ಲವಾದರೆ ಅದು ರಾಜ್ಯದಲ್ಲಿ ಬೇರೆ ರೀತಿಯ ಸಂದೇಶ ರವಾನಿಸುತ್ತದೆ ಎಂದು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

RELATED ARTICLES

Latest News