ಕೋಲ್ಕತ್ತಾ,ಜೂ.25- ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ನಡುವೆ ಮತ್ತೊಂದು ಸುತ್ತಿನ ಜಿದ್ದಾಜಿದ್ದಿ ಆರಂಭವಾಗಿದೆ. ನೀರು ಹಂಚಿಕೆ ಕುರಿತು ಬಾಂಗ್ಲಾದೇಶದೊಂದಿಗೆ ಕೇಂದ್ರ ನಡೆಸಿದ ಮಾತುಕತೆಗೆ ಆಕ್ಷೇಪ ವ್ಯಕ್ತಪಡಿಸಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ತೀಸ್ತಾ ನೀರು ಹಂಚಿಕೆ ಮತ್ತು 1996ರ ಗಂಗಾ ಜಲ ಒಪ್ಪಂದವನ್ನು ನವೀಕರಿಸುವ ಕೇಂದ್ರದ ಪ್ರಸ್ತಾಪವನ್ನು ತಿರಸ್ಕರಿಸಿದ ಅವರು, ಸಮಾಲೋಚನೆ ಮತ್ತು ರಾಜ್ಯ ಸರ್ಕಾರದ ಅಭಿಪ್ರಾಯವಿಲ್ಲದೆ ಇಂತಹ ಏಕಪಕ್ಷೀಯ ಚರ್ಚೆಗಳು ಮತ್ತು ಚರ್ಚೆಗಳು ಸ್ವೀಕಾರಾರ್ಹವಲ್ಲ ಎಂದು ಎಂದು ಹೇಳಿದ್ದಾರೆ. ಬಾಂಗ್ಲಾ ದೇಶದ ಜತೆ ನಡೆದ ಮಾತುಕತೆಗೆ ಪಶ್ಚಿಮ ಬಂಗಾಳ ಸರ್ಕಾರವನ್ನು ಆಹ್ವಾನಿಸಿಲ್ಲ ಎಂದೂ ಅವರು ಆರೋಪಿಸಿದ್ದಾರೆ.
ಇತ್ತ ಕೇಂದ್ರ ಸರ್ಕಾರ ಈ ಆರೋಪವನ್ನು ತಳ್ಳಿ ಹಾಕಿದ್ದು, 1996ರ ಜಲ ಒಪ್ಪಂದದ ಆಂತರಿಕ ಪರಿಶೀಲನೆ ನಡೆಸಲು ಉದ್ದೇಶಿಸಿರುವ ಸಮಿತಿಗೆ ನಾಮನಿರ್ದೇಶಿತರನ್ನು ಕಳುಹಿಸುವಂತೆ ಕಳೆದ ವರ್ಷ ಜುಲೈಯಲ್ಲಿ ಬಂಗಾಳ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು ಎಂದು ತಿರುಗೇಟು ನೀಡಿದೆ.
ಆಗಸ್ಟ್‌ನಲ್ಲಿ ರಾಜ್ಯವು ನೀರಾವರಿ ಮತ್ತು ಜಲಮಾರ್ಗಗಳ ನಿರ್ದೇಶನಾಲಯದ ಮುಖ್ಯ ಎಂಜಿನಿಯರ್ ಅವರನ್ನು ನಾಮನಿರ್ದೇಶನ ಮಾಡಿತು. ಈ ವರ್ಷದ ಏಪ್ರಿಲ್ 5 ರಂದು ನೀರಾವರಿ ಮತ್ತು ಜಲಮಾರ್ಗಗಳ ಇಲಾಖೆಯ ಬಂಗಾಳದ ಜಂಟಿ ಕಾರ್ಯದರ್ಶಿ ಮುಂದಿನ 30 ವರ್ಷಗಳವರೆಗೆ ರಾಜ್ಯದ ಒಟ್ಟು ಬೇಡಿಕೆಯನ್ನು ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.
ಗಂಗಾ ಜಲ ಒಪ್ಪಂದವನ್ನು ನವೀಕರಿಸುವ ಮತ್ತು ತೀಸ್ತಾ ನೀರು ಹಂಚಿಕೆಯ ಬಗ್ಗೆ ಭಾರತ-ಬಾಂಗ್ಲಾದೇಶದ ನಡುವೆ ಶನಿವಾರ ಚರ್ಚೆ ನಡೆಯಿತು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು ದೆಹಲಿಗೆ ಆಗಮಿಸಿ ಮೋದಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
ಕೇಂದ್ರ ಸರ್ಕಾರವು ಭಾರತ-ಬಾಂಗ್ಲಾದೇಶದ 1996 ರಕ್ಕಾ ಒಪ್ಪಂದ (Farakka Treaty)ವನ್ನು ನವೀಕರಿಸಲು ಮುಂದಾಗಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇನೆ. ಈಗಿನ ಒಪ್ಪಂದ 2026ರಲ್ಲಿ ಮುಕ್ತಾಯಗೊಳ್ಳಲಿದೆ. ಈ ಒಪ್ಪಂದವನ್ನು ನವೀಕರಿಸಿದರೆ ಪಶ್ಚಿಮ ಬಂಗಾಳದ ಜನರ ಮೇಲೆ ಭಾರಿ ಪರಿಣಾಮಗಳನ್ನು ಬೀರುತ್ತದೆ ಎಂದು ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇಂತಹ ಒಪ್ಪಂದದಿಂದ ಬಂಗಾಳದ ಜನರು ತೊಂದರೆ ಅನುಭವಿಸಲಿದ್ದಾರೆ ಎಂದೂ ಹೇಳಿದ್ದಾರೆ.
ಪಶ್ಚಿಮ ಬಂಗಾಳವು ಈ ಹಿಂದೆ ಹಲವು ವಿಷಯಗಳಲ್ಲಿ ಬಾಂಗ್ಲಾದೇಶಕ್ಕೆ ಸಹಕಾರ ನೀಡಿದೆ. ಎರಡೂ ಸರ್ಕಾರಗಳು ಜತೆಯಾಗಿ ಕೆಲಸ ಮಾಡಿವೆ. ಆದರೆ ನೀರಿನ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ನೀರು ಜನರ ಜೀವನಾಡಿ. ಜನರ ಮೇಲೆ ತೀವ್ರ ಮತ್ತು ಪ್ರತಿಕೂಲ ಪರಿಣಾಮ ಬೀರುವ ಇಂತಹ ಸೂಕ್ಷ್ಮ ವಿಷಯದ ಬಗ್ಗೆ ನಾವು ರಾಜಿ ಮಾಡಿಕೊಳ್ಳಲು ತಯಾರಿಲ್ಲ ಎಂದು ಅವರು ಪಟ್ಟು ಹಿಡಿದಿದ್ದಾರೆ.
ಉತ್ತರ ಬಂಗಾಳದ ತೀಸ್ತಾ ನದಿಯ ನೀರನ್ನು ಹಂಚಿಕೊಳ್ಳುವ ಪ್ರಸ್ತಾಪವನ್ನು ಉಲ್ಲೇಖಿಸಿದ ಅವರು, ಸಿಕ್ಕಿಂನ ಜಲವಿದ್ಯುತ್ ಯೋಜನೆಗಳ ಮತ್ತು ನದಿಯ ಜಲಾನಯನ ಪ್ರದೇಶದಲ್ಲಿನ ಅರಣ್ಯನಾಶದಿಂದಾಗಿ ತೀಸ್ತಾ ನದಿಯಲ್ಲಿ ಈಗ ಹಂಚಿಕೊಳ್ಳಲು ಸಾಕಷ್ಟು ನೀರು ಇಲ್ಲ. ತೀಸ್ತಾ ನೀರನ್ನು ಬಾಂಗ್ಲಾದೇಶದೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪತ್ರದಲ್ಲಿ ವಿವರಿಸಿದ್ದಾರೆ.