ಬೆಂಗಳೂರು, ನ.30– ಪತ್ನಿ ಜೊತೆ ಸಲುಗೆಯಿಂದ ಇರುತ್ತಿದ್ದ ಬಗ್ಗೆ ವಿಚಾರಿಸಲು ಹೋದ ಸಹೋದರರೊಂದಿಗೆ ಜಗಳವಾಡಿದ ಗೂಡ್ಸ್ ವಾಹನ ಚಾಲಕ ತಾನು ಧರಿಸಿದ್ದ ಮೆಟಲ್ ಬಳೆಯಿಂದ ಹಲ್ಲೆ ನಡೆಸಿ ಒಬ್ಬನನ್ನು ಕೊಲೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಅಭಿಷೇಕ್ ಕೊಲೆಯಾದ ದುರ್ದೈವಿ.
ಈತನ ಸಹೋದರ ಅವಿನಾಶ್ ಸಹ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅವಿನಾಶ್ ಅವರ ಪತ್ನಿಯೊಂದಿಗೆ ಆರೋಪಿ ಕಾರ್ತಿಕ್ ಸಲುಗೆಯಿಂದ ಇರುತ್ತಿದ್ದನ್ನಲ್ಲದೆ, ಮೊಬೈಲ್ನಲ್ಲಿ ಆಗಾಗ್ಗೆ ಮಾತನಾಡುತ್ತಿದ್ದ. ಈ ಬಗ್ಗೆ ವಿಚಾರಿಸಲು ನ. 27ರಂದು ತನ್ನ ಅಣ್ಣ ಅಭಿಷೇಕ್ ಅವರನ್ನು ಕರೆದುಕೊಂಡು ಅವಿನಾಶ್ ಹೋಗಿದ್ದಾರೆ.
ಆ ವೇಳೆ ಕಾರ್ತಿಕ್ ಹಾಗೂ ಈ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಜಗಳ ವಿಕೋಪಕ್ಕೆ ಹೋದಾಗ ಆರೋಪಿ ಕಾರ್ತಿಕ್ ತನ್ನ ಸಹಚರ ಚೇತನ್ ಕುಮಾರ್ನೊಂದಿಗೆ ಸೇರಿಕೊಂಡು ಅಭಿಷೇಕ್ ಅವರ ತಲೆ, ಮುಖಕ್ಕೆ ತಾನು ಧರಿಸಿದ್ದ ಮೆಟಲ್ ಬಳೆಯಿಂದ ಮಾರಾಣಾಂತಿಕ ಹಲ್ಲೆ ನಡೆಸಿದ್ದಾನೆ.
ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಅವಿನಾಶ್ಗೂ ಸಹ ಹಲ್ಲೆ ಮಾಡಿ ಕಾರ್ತಿಕ್ ತಲೆಮರೆಸಿಕೊಂಡಿದ್ದನು.ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್ ಅವರು ಚಿಕಿತ್ಸೆ ಫಲಿಸದೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಂದು ಮೃತಪಟ್ಟಿದ್ದಾರೆ.
ಆರೋಪಿಗಳ ಬಂಧನ:
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಬ್ಯಾಡರಹಳ್ಳಿ ಠಾಣೆ ಇನ್ಸ್ ಪೆಕ್ಟರ್ ವೀರಣ್ಣ ಎನ್. ಮಗಿ ಅವರ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡು ಆರೋಪಿ, ಗೂಡ್ಸ್ ವಾಹನದ ಚಾಲಕ ಕಾರ್ತಿಕ್(27) ಮತ್ತು ಈತನ ಸಹಚರ, ಶಾಲಾ ವಾಹನದ ಚಾಲಕ ಚೇತನ್ ಕುಮಾರ್(33) ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.