ಬೆಂಗಳೂರು,ಮೇ 8– ಮಕ್ಕಳ ವಿಚಾರಕ್ಕೆ ನೆರೆಮನೆಯ ಸೆಕ್ಯೂರಿಟಿ ಗಾರ್ಡ್‌ನ ಎಂಟು ವರ್ಷದ ಬಾಲಕನನ್ನು ಕೊಲೆ ಮಾಡಿ ಶವವನ್ನು ಕೆಸರಲ್ಲಿ ಹೂತಿದ್ದ ಘಟನೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ನಾತೂನ್ ಸಹಾನಿ ಅವರ ಪುತ್ರ ರಮಾನಂದ(8) ಕೊಲೆಯಾದ ಬಾಲಕ. ರಾಯಸಂದ್ರದ ದೊಡ್ಡಮರದ ಬಳಿ ಶೆಡ್ ಹಾಕಿಕೊಂಡು ನಾತೂನ್ ಸಹಾನಿ ಕುಟುಂಬ ವಾಸವಿದೆ. ನಾತೂನ್ ಅವರು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದು, ಇವರ ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಇವರ ಪುತ್ರನೇ ರಮಾನಂದ.
ಇವರ ಶೆಡ್ ಪಕ್ಕದಲ್ಲಿ ಮತ್ತೊಂದು ಬಿಹಾರ ಮೂಲದ ಚಂದ್ರೇಶ್ವರ್ ಮಟ್ಟೂರು ಕುಟುಂಬ ವಾಸವಿದೆ. ಆತನೂ ಸಹ ಸೆಕ್ಯೂರಿಟಿ ಕೆಲಸ ಮಾಡಿಕೊಂಡಿದ್ದು, ಅವರ ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಇವರಿಗೆ ಒಂದು ಗಂಡು, ಒಂದು ಹೆಣ್ಣು ಮಕ್ಕಳಿದ್ದಾರೆ.
ರಮಾನಂದ ಹಾಗೂ ಚಂದ್ರೇಶ್ವರ್ ಮಟ್ಟೂರು ಅವರ ಇಬ್ಬರು ಮಕ್ಕಳು ಒಟ್ಟಾಗಿ ಆಟವಾಡುವಾಗ ಜಗಳವಾಡಿಕೊಂಡಿದ್ದಾರೆ. ಆವೇಳೆ ರಮಾನಂದ ಆ ಇಬ್ಬರು ಮಕ್ಕಳಿಗೆ ಹೊಡೆದಿದ್ದಾನೆ. ಅದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿದೆ. ಆವೇಳೆ ಮಾತಿಗೆ ಮಾತು ಬೆಳದಾಗ ರಮಾನಂದ ಅವರ ತಾಯಿ ಬಾಯಿ ಜೋರು ಮಾಡಿದ್ದರಿಂದ ಚಂದ್ರೇಶ್ವರ್ ಕೋಪಗೊಂಡಿದ್ದನು.
ಅಷ್ಟಕ್ಕೆ ಸುಮನಾಗದ ಚಂದ್ರೇಶ್ವರ್ ಮೊನ್ನೆ ರಮಾನಂದನನ್ನು ರಾಯಸಂದ್ರ ಕೆರೆ ಕೋಡಿಬಳಿ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿ ನಂತರ ಶವವನ್ನು ತಲೆ ಕೆಳಗೆ ಮಾಡಿ ಕೋಡಿಯ ಕೆಸರಲ್ಲಿ ಕಾಲಿನಿಂದ ಅದುಮಿ ಹೂತುಹಾಕಿ ಮನೆಗೆ ಹಿಂದಿರುಗಿದ್ದಾನೆ.ಇತ್ತ ಮಗ ಕಾಣುತ್ತಿಲ್ಲವೆಂದು ನಾತೂಸಹಾನಿ ಹಾಗೂ ಅವರ ಪತ್ನಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಮಗ ಸಿಗದಿದ್ದಾಗ ಪೊಲೀಸರಿಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ಪೊಲೀಸರು ಹುಡುಕಾಟ ನಡೆಸಿದರೂ ಬಾಲಕನ ಸುಳಿವು ಸಿಕ್ಕಿಲ್ಲ. ನೆರೆಮನೆ ನಿವಾಸಿ ಚಂದ್ರೇಶ್ವರ್ ಮಟ್ಟೂರು(36) ಮೇಲೆ ಅನುಮಾನಗೊಂಡು ನಿನ್ನೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ವಿಷಯ ಬಾಯಿಬಿಟ್ಟಿದ್ದಾನೆ.ತಕ್ಷಣ ಘಟನಾ ಸ್ಥಳಕ್ಕೆ ಹೋಗಿ ಕೆಸರಲ್ಲಿ ಹೂತಿದ್ದ ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.