ಬೆಂಗಳೂರು,ಮಾ.11- ಶಿವರಾತ್ರಿ ಹಬ್ಬದಂದು ಡ್ಯಾನ್ಸ್ ಮಾಡುವಾಗ ಕಾಲು ತಾಗಿತೆಂಬ ಕ್ಷುಲ್ಲಕ ಕಾರಣಕ್ಕೆ ಯುವಕನೊಂದಿಗೆ ಜಗಳವಾಡಿ ಹಿಂಬಾಲಿಸಿಕೊಂಡು ಹೋಗಿ ಚಾಕುವಿನಿಂದ ಇರಿದು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಮೂವರು ಆರೋಪಿಗಳನ್ನು ಬ್ಯಾಟರಾಯನಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೇತನ್, ರಂಗ ಮತ್ತು ಪವನ್ ಬಂಧಿತ ಆರೋಪಿಗಳು.
ಶ್ರೀನಗರ ನಿವಾಸಿಯಾದ ಯೋಗೇಶ್(23) ಶಿವರಾತ್ರಿ ಹಬ್ಬದ ಆಚರಣೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದ ಗಿರಿನಗರದ ಶನಿ ಮಹಾತ್ಮ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ಹೋಗಿದ್ದಾನೆ. ಆ ಸಂದರ್ಭದಲ್ಲಿ ಹಾಡಿಗೆ ಎಲ್ಲರೂ ಕುಣಿಯುತ್ತಿದ್ದುದನ್ನು ನೋಡಿ ಯೋಗೇಶ್ ಸಹ ಡ್ಯಾನ್ಸ್ ಮಾಡುತ್ತಿದ್ದಾಗ ಮತ್ತೊಂದು ಗುಂಪಿನ ಯುವಕರಿಗೆ ಆಕಸ್ಮಿಕವಾಗಿ ಕಾಲು ತಾಗಿದೆ.
ಆ ವಿಷಯವನ್ನೇ ದೊಡ್ಡದು ಮಾಡಿಕೊಂಡು ಯೊಗೇಶ್ ಜೊತೆ ಜಳಗವಾಡಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳೀಯರು ಇಬ್ಬರನ್ನು ಸಮಾಧಾನಪಡಿಸಿ ಕಳುಹಿಸಿದ್ದಾರೆ. ಬೆಳಗಿನ ಜಾವ 2.30ರ ಸುಮಾರಿನಲ್ಲಿ ಯೋಗೇಶ್ ಬೈಕ್‍ನಲ್ಲಿ ತನ್ನ ಮನೆಗೆ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಹೋದ ಯುವಕರ ಗುಂಪು ಬೈಕ್ ಅಡ್ಡಗಟ್ಟಿ ಹಲ್ಲೆ ನಡೆಸಿದೆ.
ತಕ್ಷಣ ತಪ್ಪಿಸಿಕೊಳ್ಳಲು ಯೋಗೇಶ್ ಓಡಿ ಹೋಗುತ್ತಿದ್ದಾಗ ಮನೆಯೊಂದರ ಗೇಟ್ ಒಳಗೆ ಹೋಗಿದ್ದಾನೆ. ಆದರೂ ಬಿಡದೆ ಗುಂಪು ಬೆನ್ನಟ್ಟಿ ಬಂದು ಚಾಕುವಿನಿಂದ ಮನಬಂದಂತೆ ಇರಿದು ಪರಾರಿಯಾಗಿತ್ತು. ತೀವ್ರ ರಕ್ತಸ್ರಾವದಿಂದ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಯೋಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಈ ಮನೆಯವರೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಇದೀಗ ಮೂವರು ಆರೋಪಿಗಳನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.