ಬೆಂಗಳೂರು, ಸೆ.23-ನಗರದಲ್ಲಿ ಹಗಲು ವೇಳೆ ಊಬರ್ ಚಾಲನಾ ವೃತ್ತಿ ಮಾಡಿಕೊಂಡು ರಾತ್ರಿ ವೇಳೆ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿ ಆಂಧ್ರದಲ್ಲಿ ಮಾರಾಟ ಮಾಡುತ್ತಿದ್ದ ಆರೋಪಿಯನ್ನುವೈಟ್ ಫೀಲ್ಡ್ ಠಾಣೆ ಪೊಲೀಸರು ಬಂಧಿಸಿ 20 ಲಕ್ಷ ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ನಿವಾಸಿ, ಊಬರ್ ವಾಹನ ಚಾಲಕ ಫೈರೋಜ್ ಬಂಧಿತ ಆರೋಪಿ.ನಗರದ ವಿವಿಧ ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದಂತಹ ದ್ವಿಚಕ್ರ ವಾಹನಗಳನ್ನು ತಾನು ಕೆಲಸ ಮಾಡುವ ವೇಳೆ ಗುರುತಿಸಿಕೊಂಡು ರಾತ್ರಿಯಾಗುತ್ತಿದ್ದಂತೆ ಅವುಗಳನ್ನು ಕಳ್ಳತನ ಮಾಡುತ್ತಿದ್ದನು.
ಐಟಿಪಿಎಲ್ ಹಿಂಭಾಗದ ಗೇಟ್‌ನಲ್ಲಿರುವ ಮಾಲ್‌ನ ಪುಟ್ ಪಾತ್ ಜಾಗದಲ್ಲಿ ವಿಜಯನಗರದ ನಿವಾಸಿಯೊಬ್ಬರು ದ್ವಿಚಕ್ರ ವಾಹನ ನಿಲ್ಲಿಸಿ ಕೆಲಸದ ನಿಮಿತ್ತ ಹೋಗಿದ್ದು, ಮಧ್ಯಾಹ್ನ ಬರುವಷ್ಟರಲ್ಲಿ ಅವರ ವಾಹನ ಕಳವಾಗಿತ್ತು.ಈ ಬಗ್ಗೆ ಅವರು ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಸ್ಥಳದ ಸುತ್ತಮುತ್ತಲಿನ ಸಿಸಿ ಕ್ಯಾಮರಗಳನ್ನು ಪರಿಶೀಲಿಸಿ ಹಲವು ಮಾಹಿತಿಗಳನ್ನು ಕಲೆಹಾಕಿ ತನಿಖೆ ಮುಂದುವರೆಸಿದ್ದಾರೆ.
ಹೊಸಕೋಟೆಯ ಕೊಟುರುಗ್ರಾಮದಲ್ಲಿ ಹೊರ ರಾಜ್ಯದ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ದ್ವಿಚಕ್ರ ವಾಹನಗಳನ್ನು ಕಳವು ಮಾಡಿರುವುದಾಗಿ ಹೇಳಿದ್ದಾನೆ.
ಆರೋಪಿಯನ್ನು ಸುದೀರ್ಘವಾಗಿ ವಿಚಾರಣೆಗೆ ಒಳಪಡಿಸಿದಾಗ ಕಳವು ಮಾಡಿದ್ದ ದ್ವಿಚಕ್ರ ವಾಹನಗಳ ಪೈಕಿ ಐದು ವಾಹನಗಳನ್ನು ಮದ್ದೂರು ತಾಲ್ಲೂಕಿನ ಹುರುಗುಲವಾಡಿ ಗ್ರಾಮದ ಪರಿಚಯಸ್ಥನಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದಾನೆ.
ಉಳಿದ ಒಂಬತ್ತು ವಾಹನಗಳನ್ನು ಆಂಧ್ರ ಪ್ರದೇಶದ ಕದರಿ ಮಂಡಲಂನಲ್ಲಿ ವಾಸವಿರುವ ಸಂಬಂಧಿಕರುಗಳಿಗೆ ನೀಡಿರುವುದಾಗಿ ಹಾಗೂ ಆರು ದ್ವಿಚಕ್ರ ವಾಹನಗಳನ್ನು ಶಿವಕುಂಟಮ್ಮ ದೇವಸ್ಥಾನ ಪಕ್ಕದ ಖಾಲಿ ಜಾಗದಲ್ಲಿ ನಿಲ್ಲಿಸಿರುವುದಾಗಿ ತಿಳಿಸಿದ್ದಾನೆ.ಆರೋಪಿಯ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ಮುಂದುವರೆಸಿ 20 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದು, ಈ ಪೈಕಿ ವೈಟ್ ಫೀಲ್ಡ್ ಪೊಲೀಸ್ ಠಾಣೆಯ 12 ದ್ವಿಚಕ್ರ ವಾಹನಪ್ರಕರಣಗಳು ಪತ್ತೆಯಾಗಿದ್ದು, ಉಳಿದ 8 ದ್ವಿಚಕ್ರ ವಾಹನಗಳ ವಾರಸುದಾರರ ಪತ್ತೆ ಕಾರ್ಯ ಮುಂದುವರೆದಿದೆ.ಈ ಕಾರ್ಯಾಚರಣೆಯನ್ನು ಇನ್ಸ್‌ಪೆಕ್ಟರ್ ಗುರುಪ್ರಸಾದ್ ಹಾಗೂ ಸಿಬ್ಬಂದಿ ತಂಡ ಕೈಗೊಂಡಿತ್ತು |