ಬೆಂಗಳೂರು,ಜ.13- ಕೆಲಸ ಮಾಡುತ್ತಿದ್ದ ಹೋಟೆಲ್ನಲ್ಲೇ ಬೆಲೆ ಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳನ್ನು ಕಳ್ಳತನ ಮಾಡಿದ್ದ ಮ್ಯಾನೇಜರ್ ಒಬ್ಬನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿಸಿ 4.50 ಲಕ್ಷ ರೂ. ಮೌಲ್ಯದ ಮಾಲನ್ನು ವಶಪಡಿಸಿಕೊಂಡಿದ್ದಾರೆ.ಮೂಲತಃ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿಯ ಮೊಹಮದ್ ಸಫ್ವಾನ್ ಬಂಧಿತ ಆರೋಪಿ.
ಈತ ನಗರದ ಬಿ.ಟಿ.ಎಂ. 1 ನೇ ಹಂತದ ಭುವನಪ್ಪ ಲೇಔಟ್ನಲ್ಲಿರುವ ಟೆರೆಸ್ ಕೆಫೆ ಹೋಟೆಲ್ವೊಂದರಲ್ಲಿ 2 ತಿಂಗಳಿನಿಂದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಹೋಟೆಲ್ನಲ್ಲಿರುವ ಬೆಲೆಬಾಳುವ ತಾಮ್ರ ಮತ್ತು ಹಿತ್ತಾಳೆ ವಸ್ತುಗಳ ಮೇಲೆ ಕಣ್ಣಿಟ್ಟಿದ್ದನು.
ಮಾಲೀಕರು ಹಾಗೂಉ ಹೋಟೆಲ್ ಕಾರ್ಮಿಕರು ಇಲ್ಲದಿದ್ದ ಸಂದರ್ಭದಲ್ಲಿ ಸಮಯ ಸಾಧಿಸಿ ಹೋಟೆಲ್ನಲ್ಲಿದ್ದ ತಾಮ್ರ ಹಾಗೂ ಹಿತ್ತಾಳೆ ವಸ್ತುಗಳನ್ನು ಕಳ್ಳತನ ಮಾಡಿ ಕೆಲವು ವಸ್ತುಗಳನ್ನು ಕಾಟನ್ಪೇಟೆಯ ಗುಜರಿ ಅಂಗಡಿಯಲ್ಲಿ ಮಾರಾಟ ಮಾಡಿದ್ದಲ್ಲದೆ ಇನ್ನುಳಿದ ವಸ್ತುಗಳನ್ನು ಆತನ ಸ್ವಂತ ಊರಿನ ಮನೆಯಲ್ಲಿಟ್ಟಿದ್ದನು.
ಹೋಟೆಲ್ನಲ್ಲಿ ತಾಮ್ರ ಹಾಗೂ ಹಿತ್ತಾಳೆ ವಸ್ತುಗಳು ಕಳ್ಳತನವಾಗಿರುವ ಬಗ್ಗೆ ಮಾಲೀಕ ಮಡಿವಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಹೋಟೆಲ್ ಮ್ಯಾನೇಜರ್ ಮೇಲೆಯೇ ಅನುಮಾನ ವ್ಯಕ್ತಪಡಿಸಿ ವಶಕ್ಕೆ ಪಡೆದು ಸುದೀರ್ಘ ವಿಚಾರಣೆ ಮಾಡಿದಾಗ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾನೆ.
ಆರೋಪಿ ಮಾರಾಟ ಮಾಡಿದ್ದ ಗುಜರಿ ಅಂಗಡಿಯಿಂದ ಪೊಲೀಸರು ಎರಡು ಹಿತ್ತಾಳೆ ದೀಪ, ಒಂದು ಹಿತ್ತಾಳೆ ಟೇಬಲ್, ಹತ್ತು ತಾಮ್ರದ ಜಗ್ಗುಗಳು, 85 ತಾಮ್ರದ ಲೋಟಗಳು, ಒಂದು ಹಿತ್ತಾಳೆಯ ಗಣೇಶ ಮುಖವಿರುವ ವೀಣೆಯನ್ನು ವಶಕ್ಕೆ ಪಡೆದಿದ್ದಾರೆ.
ಅಲ್ಲದೆ ಬೆಳ್ತಂಗಡಿಯ ಮನೆಯಲ್ಲಿದ್ದ 19 ತಾಮ್ರದ ಬೌಲ್ಗಳು, ಕೃಷ್ಣ-ಹಸುವಿರುವ ಹಿತ್ತಾಳೆಯ ದೇವರ ವಿಗ್ರಹವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇವುಗಳ ಒಟ್ಟು ಮೌಲ್ಯ 4.50 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.ಇನ್‌್ಸಪೆಕ್ಟರ್ ಮೊಹಮದ್ ಹಾಗೂ ಸಿಬ್ಬಂದಿ ತಂಡ ಈ ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದೆ.