ಅಯೋಧ್ಯೆ, ನ.22- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮುಂದಿನ ವರ್ಷ 2024ರ ಜನವರಿ 22ರಿಂದ ಮಾರ್ಚ್ 10ರವರೆಗೆ 48 ದಿನಗಳ ಕಾಲ ನಡೆಯಲಿದೆ. ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನಂತರ ಜ.22ರಿಂದಲೇ 48 ದಿನಗಳ ಮಂಡಲೋತ್ಸವ ಆರಂಭವಾಗಲಿದ್ದು, ಈ ಸೇವೆಯಲ್ಲಿ ದೇಶದ ಎಲ್ಲಾ ಜನತೆ ಭಾಗಿಯಾಗುವಂತೆ ಉಡುಪಿ ಪೇಜಾವರ ಮಠಾೀಧಿಶ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮನವಿ ಮಾಡಿದ್ದಾರೆ.
ಜ.22ರಂದು ಅಭಿಜಿನ್ ಮುಹೂರ್ತದಲ್ಲಿ ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ನೆರವೇರಲಿದೆ. ಭವ್ಯವಾದ ರಾಮ ಮಂದಿರವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಜ.22ರಂದು
ಲೋಕಾರ್ಪಣೆ ಮಾಡಲಿದ್ದಾರೆ.
ಶ್ರೀರಾಮ ಮಂದಿರ ಲೋಕಾರ್ಪಣೆಯ ಬಗ್ಗೆ ವಿವರ ನೀಡಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಕೋಟ್ಯಂತರ ಭಕ್ತರ ಆಶಯದಂತೆ ಅಯೋಧ್ಯೆ ರಾಮ ಮಂದಿರ ನಿರ್ಮಾಣಗೊಳ್ಳುತ್ತಿದೆ. ರಾಮ ಮಂದಿರ ಲೋಕಾರ್ಪಣೆಗೆ ದಿನಗಣನೆ ಆರಂಭವಾಗಿದ್ದು, ಸಿದ್ಥತೆಗಳು ಅಂತಿಮಗೊಳ್ಳುತ್ತಿದೆ. ಈಗಾಗಲೇ ಅಯೋಧ್ಯೆಯಲ್ಲಿ ಶ್ರೀರಾಮನ ಶಿಲಾ ವಿಗ್ರಹ ಸಿದ್ಧಗೊಳ್ಳುತ್ತಿದ್ದು, ಜ.17ರಂದು ಅಯೋಧ್ಯೆಗೆ ವಿಗ್ರಹದ ಮೆರವಣಿಗೆ ನಡೆಯಲಿದೆ ಎಂದರು.
ಪಾಕ್ ಉಗ್ರ ನಂಟು: ನಾಲ್ವರು ಸರ್ಕಾರಿ ಅಧಿಕಾರಿಗಳು ಸೇವೆಯಿಂದ ವಜಾ
ಇನ್ನು ಜ.17ರಂದು ಸರಯೂ ನದಿಯಲ್ಲಿ ಶ್ರೀರಾಮನ ಶಿಲಾಮೂರ್ತಿಗೆ ಅಭಿಷೇಕ ನೆರವೇರಿಸಿ, ಅಲ್ಲಿಂದ ಮತ್ತೆ ಮೆರವಣಿಗೆಯಲ್ಲಿ ಅಯೋಧ್ಯೆಗೆ ಕರೆತರಲಾಗುತ್ತದೆ. ಜ.18ರಂದು ಶಿಲಾಮೂರ್ತಿಯನ್ನು ಶ್ರೀರಾಮ ಜನ್ಮಸ್ಥಳದ ಮೂಲ ಸ್ಥಾನದಲ್ಲಿ ನಿಲ್ಲಿಸಿ ಜ.18ರಿಂದ ಜನವರಿ 20ರವರೆಗೆ ಜಲಾವಾಸ, ಧಾನ್ಯಾವಾಸ, ಶಿಲಾವಾಸ ವಿಧಿ ವಿಧಾನ ನೆರವೇರಿಸಲಾಗುತ್ತದೆ. ಬಳಿಕ ಜ.21ರಂದು ಪ್ರತಿಷ್ಠಾಪನೆಯ ಪೂರ್ವಸಿದ್ಧತೆ ನಡೆಸಿ ಜನವರಿ 22ರಂದು ಅಭಿಜಿನ್ ಮುಹೂರ್ತದಲ್ಲಿ ಅಯೋಧ್ಯೆಯ ಶ್ರೀರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠೆ ಮಾಡಲಾಗುತ್ತದೆ ಎಂದು ರಾಮಮಂದಿರ ಲೋಕಾರ್ಪಣೆಯ ಧಾರ್ಮಿಕ ಕಾರ್ಯಗಳ ಬಗ್ಗೆ ವಿವರಿಸಿದರು.
ಮುಖ್ಯವಾಗಿ ದೇಶದಾದ್ಯಂತ ಇರುವ ಕೋಟ್ಯಂತ ಭಕ್ತರಿಗಿದ್ದ ಗೊಂದಲಕ್ಕೆ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಉತ್ತರಿಸಿದ್ದಾರೆ. ಅಯ್ಯೋಧ್ಯೆಯ ಶ್ರೀರಾಮನಿಗೆ ಯಾವ ಹರಕೆ ಸಿಲ್ಲಿಸಬಹುದು ಎನ್ನುವ ಭಕ್ತರ ಪ್ರಶ್ನೆಗೆ ಶ್ರೀಗಳು ವಿವರಣೆ ನೀಡಿದ್ದಾರೆ. ಸಾಮಾನ್ಯವಾಗಿ ಶ್ರೀರಾಮನ ಮಂದಿರಗಳಲ್ಲಿ ಅಷ್ಟೋತ್ತರ, ಶತನಾಮಾವಳಿ, ಅರ್ಚನೆ, ಅಭಿಷೇಕ ಹರಕೆ ಸೇವೆಯನ್ನು ಭಕ್ತರು ಸಲ್ಲಿಸುತ್ತಾರೆ. ಆದರೆ ಅಯ್ಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಈ ರೀತಿಯ ಯಾವುದೇ ಪ್ರತ್ಯೇಕ ಹರಕೆಗಳಿಗೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಶ್ರೀರಾಮನಿಗೆ ಪ್ರತ್ಯೇಕ ಹರಕೆ ಸೇವೆ ಎಂಬುದು ಇರುವುದಿಲ್ಲ. ಬದಲಾಗಿ ಪ್ರತಿಯೊಬ್ಬ ಭಕ್ತರು ಮಾಡಿದ ಸಮಾಜ ಸೇವೆಯನ್ನು ರಾಮನ ಸಾನ್ನಿಧ್ಯದಲ್ಲಿ ನಿವೇದಿಸಿಕೊಳ್ಳುವ ರಾಮಾರ್ಪಣೆಯೇ ಸೇವೆ ಇರಲಿದೆ. ಜೊತೆಗೆ ಭಕ್ತರಿಗಾಗಿ ಆರತಿ, ತೀರ್ಥ ಹಾಗೂ ಉತ್ತರ ಭಾರತದ ಸಿಹಿಯ ನೈವೇದ್ಯ ಇರುತ್ತದೆ. ಇದು ಬಿಟ್ಟರೆ ಹರಕೆ, ಸೇವೆ ಯಾವುದೂ ಇಲ್ಲ ಎಂದು ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ವಿವರಿಸಿದ್ದಾರೆ. ಇನ್ನು ಅಯ್ಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆಯ ಎಲ್ಲಾ ಕಾರ್ಯದಲ್ಲೂ ದೇಶದಾದ್ಯಂತ ಎಲ್ಲಾ ಭಕ್ತರು ಭಾಗಿಯಾಗುವಂತೆ ಶ್ರೀಗಳು ಮನವಿ ಮಾಡಿದ್ದಾರೆ.