ಮಂಡ್ಯ,ಡಿ.20- ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸವಿರುವ ಶ್ರೀಮಂತ ಭಾಷೆ ಕನ್ನಡ ಉಳಿಯಬೇಕಾದರೆ ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು ಹಾಗೂ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಉದ್ಯಮಿಗಳು, ಸ್ವಯಂಸೇವಾ ಸಂಸ್ಥೆಗಳು, ಜನಪ್ರತಿನಿಧಿಗಳು, ವಿದೇಶಿ ಕನ್ನಡಿಗರು ಕೈಜೋಡಿಸಬೇಕೆಂದು 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷರಾದ ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ಕರೆ ನೀಡಿದ್ದಾರೆ.
ಮಂಡ್ಯದಲ್ಲಿ ಹಮಿಕೊಂಡಿರುವ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷೀಯ ಭಾಷಣದಲ್ಲಿ ಈ ವಿಷಯ ತಿಳಿಸಿದ ಅವರು, ಕನ್ನಡವು ಇಂದು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ. ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ ಸೇರಿದಂತೆ ಮುಂತಾದ ಕ್ಷೇತ್ರಗಳಲ್ಲಿ ಕನ್ನಡ ಬೆಳೆಯುತ್ತಿದೆ. ಕನ್ನಡ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಪೋಷಣೆ ಅತ್ಯಗತ್ಯ. ಗೂಗಲ್, ಯಾಂತ್ರಿಕ ಬುದ್ದಿಮತ್ತೆಗೂ ಶುದ್ದ ಕನ್ನಡಪ್ರೇಮ ಬರುವಂತಾಗಲಿ ಎಂದರು.
ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ ಕನ್ನಡವು ಜ್ಞಾನದ ಭಾಷೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜನಪ್ರತಿನಿಧಿಗಳು ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾ ಪ್ರೇಮದ ಕೊರತೆ ಇರುವಂತೆ ಕಾಣುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು. ಕಲೆ, ನಾಟಕ, ಸಂಗೀತ ಮುಂತಾದವುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಪರಿಚಯಿಸಿಕೊಡುವ ಕೆಲಸ ಆದ್ಯತೆಯ ಮೇಲೆ ಮಾಡಬೇಕು ಎಂದರು.
ಉದ್ಯಮ ವಲಯಗಳು ಇನ್ನಿತರ ಕಡೆಗಳಲ್ಲಿ ಸರಳ ಕನ್ನಡ ಕಲಿಕಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಬೇರೆ ಭಾಷೆ ಜನರು ಕನ್ನಡ ಕಲಿಯಲು ಇವುಗಳ ಸದುಪಯೋಗಪಡಿಯಬೇಕು ಎಂದು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ನೂರಾರು ಸರ್ಕಾರಿ ಶಾಲೆಗಳ ಸೂರು, ಗೋಡೆ ಉರುಳುವ ಸ್ಥಿತಿಯಲ್ಲಿವೆ. ಮೊದಲು ಸರ್ಕಾರ ಅವುಗಳನ್ನು ಸರಿಪಡಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಶಾಲೆ ಆಕರ್ಷಕವಾಗುವಂತೆ ಉನ್ನತೀಕರಿಸಬೇಕು. ಪೂರ್ವ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಎಂಬ ಗುಚ್ಛ ವ್ಯವಸ್ಥೆಯನ್ನು ಪ್ರತಿ ಗ್ರಾಮದಲ್ಲದಿದ್ದರೂ ಪ್ರತಿ ಗ್ರಾಮಪಂಚಾಯ್ತಿ ವ್ಯಾಪ್ತಿಯಲ್ಲಿ ತೆರೆಯಬೇಕೆಂಬ ಸಲಹೆಗಳನ್ನು ಅನೇಕ ಚಿಂತಕರು ನೀಡಿದ್ದಾರೆ. ಇದನ್ನು ಸರ್ಕಾರ ಪರಿಶೀಲಿಸುವುದು ಅಗತ್ಯ. ಇವುಗಳಲ್ಲಿ ಕನ್ನಡವೇ ಶಿಕ್ಷಣ ಭಾಷೆಯಾಗಿ, ಪಠ್ಯಕ್ರಮದಲ್ಲಿ ಇಂಗ್ಲೀಷ್ ಭಾಷೆಯನ್ನು ಒಂದು ವಿಷಯವಾಗಿ ಮಾಡಬೇಕು ಎಂದರು.
ಇದರಲ್ಲಿ ಬೆಂಗಳೂರು ಐಟಿ-ಬಿಟಿ ಸಿಟಿ ಎಂದು ಪ್ರಖ್ಯಾತವಾಗಿದೆ. ಯಾವ ರಾಜ್ಯದ, ಯಾವ ಭಾಷೆಯ ಜನರಾದರೂ ದೇಶದಲ್ಲಿ ಎಲ್ಲೂ ಬೇಕಾದರೂ ನೆಲೆಸಬಹುದು. ಆದರೆ ನೆಲೆಯೂರುವ ನೆಲದ ಬಗ್ಗೆ ಗೌರವ ಹೊಂದಿರಬೇಕು ಎಂದರು.
ಹಕ್ಕೋತ್ತಾಯ: ದುರಹಂಕಾರದ ಪ್ರದರ್ಶನ ಅಲ್ಲಲ್ಲಿ ವ್ಯಕ್ತವಾಗಿದ್ದು, ಇದನ್ನು ಸರ್ಕಾರ ಮತ್ತು ಕನ್ನಡಿಗರು ನಿಯಂತ್ರಿಸಬೇಕು. ಕನ್ನಡ ನಾಡಿನಲ್ಲಿ ಔದ್ಯಮಿಕವಾಗಿ ನೆಲೆಯೂರು ಲಾಭದಾಯಕವಾಗಿ ಬೆಳೆಯುವ ಉದ್ಯಮಗಳು ಕನ್ನಡಿಗರಾದ ವಿದ್ಯಾವಂತ ಅಭ್ಯರ್ಥಿಗಳಿಗೆ ನಿರ್ಧಿಷ್ಟ ಪ್ರಮಾಣದ ಉದ್ಯೋಗ ನೀಡುವುದು ಅವರ ಋಣ ಸಂದಾಯದ ಮಾರ್ಗವೆಂದು ಭಾವಿಸಬೇಕು. ಆದರೆ ಇದನ್ನು ತಪ್ಪಿಸಲು ಹಲವಾರು ದಾರಿಗಳನ್ನು ಹುಡುಕುವ ಉದ್ಯಮಗಳನ್ನು ಸರ್ಕಾರ ತನ್ನ ಷರತ್ತು, ನಿಯಮಗಳಿಂದ ನಿರ್ಬಂಧಿಸಿದರೆ ತಪ್ಪೇನಿಲ್ಲ ಎಂದು ಅವರು ತಿಳಿಸಿದ್ದಾರೆ.
ಕನ್ನಡ ನೆಲಜಲ, ನೈಸರ್ಗಿಕ ಸಂಪನೂಲಗಳನ್ನು ಒದಗಿಸುವ ಮೊದಲು ಸರ್ಕಾರ ಈ ಬಗ್ಗೆ ಮುಚ್ಚಳಿಕೆ ಬರೆಸಿಕೊಂಡರೂ ತಪ್ಪಿಲ್ಲ. ಈ ಕುರಿತು ಹಲವು ವರ್ಷಗಳಿಂದ ಚರ್ಚೆ ನಡೆದಿದೆಯಾದರೂ ನಿರ್ಧಿಷ್ಟ ಕ್ರಮ ಅತ್ಯಗತ್ಯ ಎಂದು ಕನ್ನಡಿಗರು ಹಕ್ಕೋತ್ತಾಯ ಮಂಡಿಸಬೇಕು ಎಂದು ಸಲಹೆ ಮಾಡಿದರು.
ದ್ರಾವಿಡ ಭಾಷಾ ಕುಟುಂಬದಲ್ಲಿ ಕನ್ನಡ ಒಂದು ಪ್ರಾಚೀನ ಮತ್ತು ಸಾಹಿತ್ಯದ ದೃಷ್ಟಿಯಿಂದ ಮಹತ್ವದ ಭಾಷೆಯಾಗಿದೆ. ಕನ್ನಡ ಸಾಹಿತ್ಯವು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಡುತ್ತಿದೆ. ರಾಘವಾಂಕನ ಹರಿಶ್ಚಂದ್ರ ಕಾವ್ಯ, ಕುಮಾರವ್ಯಾಸ ಭಾರತ, ಕವಿರಾಜ ಮಾರ್ಗ, ಒಡ್ಡರಾಧನೆ, ಕಥೆ ಕಾದಂಬರಿಗಳು ಮುಂತಾದ ಕನ್ನಡದ ಅಭಿಜಾತ ಕೃತಿಗಳು ಇಂಗ್ಲೀಷ್‌ಗೆ ಅನುವಾದವಾಗಿ ಜಾಗತಿಕ ಸಾಹಿತ್ಯದ ಭಾಗವಾಗುತ್ತಿವೆ. ವಚನಗಳು ಇಂಗ್ಲೀಷ್ ಅಲ್ಲದೆ ದೇಶದ ಹಾಗೂ ಜಗತ್ತಿನ ಇತರ ಪ್ರಮುಖ ಭಾಷೆಗಳಿಗೆ ಅನುವಾದವಾಗುತ್ತಿವೆ ಎಂದರು. ಕನ್ನಡ ಸಾಹಿತ್ಯ ಪರಿಷತ್ತು ಭಾರತದ ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು ಎಂದು ಹೇಳಿದರು.
ಮಹಿಷಿ ವರದಿಗೆ ಆಗ್ರಹ: ಕೇಂದ್ರ ಸರ್ಕಾರವು ಸ್ಪರ್ಧಾತಕ ಪರೀಕ್ಷೆಗಳಲ್ಲಿ ಇಂದಿಗೆ ಪ್ರಾಶಸ್ತ್ಯವನ್ನು ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದರಿಂದ ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಇಲ್ಲವಾಗುತ್ತಿವೆ. ಆದ್ದರಿಂದ ಸರ್ಕಾರವು ಸರೋಜಿನಿ ಮಹಿಷಿ ಸಮಿತಿ ವರದಿಯನ್ನು ಕೂಡಲೇ ಅನುಷ್ಠಾನಗೊಳಿಸಬೇಕು, ಕನ್ನಡದ ಯುವಜನರು ನಮ ರಾಜ್ಯದಲ್ಲದೆ ಬೇರೆಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಸಲ್ಲಿಸುವುದು ಸಾಧ್ಯ ಎಂದು ಅವರು ಪ್ರಶ್ನಿಸಿದರು.