ಮಂಗಳೂರು ಏರ್‌ಪೋರ್ಟ್‌ನಲ್ಲಿ ಕಾಂಗ್ರೆಸ್ ನಿಯೋಗಕ್ಕೆ ಪೊಲೀಸರ ತಡೆ

ಬೆಂಗಳೂರು, ಡಿ.20- ನಿನ್ನೆ ಮಂಗಳೂರಿನಲ್ಲಿ ನಡೆದ ಗೋಲಿಬಾರ್‍ನಲ್ಲಿ ಮೃತಪಟ್ಟ ಕುಟುಂಬಸ್ಥರ ಭೇಟಿಗಾಗಿ ತೆರಳಿದ ಕಾಂಗ್ರೆಸ್ ನಿಯೋಗವನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲೇ ಪೊಲೀಸರು ತಡೆದು ವಶಕ್ಕೆ ಪಡೆದರು. ರಮೇಶ್‍ಕುಮಾರ್, ವಿ.ಎಸ್.ಉಗ್ರಪ್ಪ, ಎಂ.ಬಿ.ಪಾಟೀಲ್, ಬಸವರಾಜ ರಾಯರೆಡ್ಡಿ ಸೇರಿದಂತೆ ಆರು ಜನರ ನಿಯೋಗ ಮಂಗಳೂರಿಗೆ ಭೇಟಿ ನೀಡಿ ಗೋಲಿಬಾರ್‍ನಲ್ಲಿ ಮೃತಪಟ್ಟ ಕುಟುಂಬದವರಿಗೆ ಸಾಂತ್ವನ ಹೇಳಲು ನಿರ್ಧರಿಸಿತ್ತು.

ಆದರೆ, ಕಫ್ರ್ಯೂ ಜಾರಿ ಇರುವ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ಮಂಗಳೂರಿನ ವಿಮಾನ ನಿಲ್ದಾಣದಲ್ಲೇ ವಶಕ್ಕೆ ಪಡೆದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ ಅವರು ಸರ್ಕಾರದ ಜನವಿರೋಧಿ ಧೋರಣೆ ಖಂಡಿಸಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲದಂತಹ ಪರಿಸ್ಥಿತಿಯನ್ನು ಬಿಜೆಪಿ ಸರ್ಕಾರ ನಿರ್ಮಾಣ ಮಾಡಿದೆ. ನಿನ್ನೆ ಅಮಾಯಕರಿಬ್ಬರ ಬಲಿಯಾಗಿದೆ.

ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಅವಕಾಶವಿಲ್ಲದಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಇದು ಪ್ರಜಾಪ್ರಭುತ್ವವೋ ಅಲ್ಲವೋ ಎಂಬ ಆತಂಕ ಉಂಟಾಗಿದೆ ಎಂದು ಹೇಳಿದರು.
ನಿನ್ನೆ ನಡೆದ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ಮೃತಪಟ್ಟ ಕುಟುಂಬದವರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.