Saturday, May 18, 2024
Homeರಾಜ್ಯರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆ, ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ

ರಾಜ್ಯದ 2ನೇ ಹಂತದ ಲೋಕಸಭಾ ಚುನಾವಣೆ, ನಾಳೆ ಬಹಿರಂಗ ಪ್ರಚಾರಕ್ಕೆ ತೆರೆ

ಬೆಂಗಳೂರು,ಮೇ.4 – ರಾಜ್ಯದ ಎರಡನೇ ಹಂತದ 14 ಲೋಕಸಭಾ ಕ್ಷೇತ್ರಗಳ ಬಹಿರಂಗ ಪ್ರಚಾರಕ್ಕೆ ನಾಳೆ ಸಂಜೆ 6 ಗಂಟೆಗೆ ತೆರೆ ಬೀಳಲಿದೆ.ಮೇ 7 ರಂದು ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚಿತವಾಗಿ ಅಂದರೆ ನಾಳೆ ಸಂಜೆ 6 ಗಂಟೆಯ ನಂತರ ಮತದಾರರಲ್ಲದ ರಾಜಕೀಯ ಪಕ್ಷಗಳ ಕಾರ್ಯಕರ್ತರು, ಮುಖಂಡರು, ನಾಯಕರು ಆಯಾ ಕ್ಷೇತ್ರಬಿಟ್ಟು ತೆರಳಬೇಕಾಗಿದೆ.

ಹೀಗಾಗಿ ಇಂದು ಮತ್ತು ನಾಳೆ ಅಬ್ಬರದ ಬಿರುಸಿನ ಚುನಾವಣಾ ಪ್ರಚಾರ ಬೆಳಗಾವಿ, ಚಿಕ್ಕೋಡಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್‌, ಕೊಪ್ಪಳ, ಬಳ್ಳಾರಿ, ಹಾವೇರಿ, ಧಾರವಾಡ, ಉತ್ತರಕನ್ನಡ, ದಾವಣಗೆರೆ, ಶಿವಮೊಗ್ಗ ಕ್ಷೇತ್ರಗಳಲ್ಲಿ ನಡೆಯಲಿದೆ.

ಈಗಾಗಲೇ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖ ರಾಜಕೀಯ ಪಕ್ಷದ ನಾಯಕರು, ಮುಖಂಡರು, ಅಭ್ಯರ್ಥಿಗಳು ಬಿರುಸಿನ ಪ್ರಚಾರ ಕೈಗೊಂಡಿದ್ದು, ಮತದಾರರನ್ನು ಓಲೈಸಲು ನಾನಾ ರೀತಿಯ ಭರವಸೆಗಳನ್ನು ನೀಡುತ್ತಿದ್ದಾರೆ. ಆರೋಪ-ಪ್ರತ್ಯಾರೋಪದ ಮೂಲಕ ಪ್ರಚಾರದ ಅಬ್ಬರ ತಾರಕಕ್ಕೇರಿದೆ.

ನಾಳೆ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದ್ದು, ಅಲ್ಲಿಗೆ ರಾಜ್ಯದ ಎಲ್ಲಾ ಕ್ಷೇತ್ರಗಳ ಪ್ರಚಾರಕ್ಕೂ ತೆರೆ ಬಿದ್ದಂತಾಗುತ್ತದೆ. ಸುರಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೂ ಇದೇ ನಿಯಮ ಅನ್ವಯವಾಗಲಿದೆ. ಆ ಕ್ಷೇತ್ರಕ್ಕೂ ಮೇ 7 ರಂದೇ ಮತದಾನ ನಡೆಯಲಿದೆ. ಸುರಪುರ ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ನಿಂದ ತಲಾ ಒಬ್ಬರು ಹಾಗೂ ನಾಲ್ವರು ಪಕ್ಷೇತರರು ಸೇರಿದಂತೆ ಒಟ್ಟು 6 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.

ಉತ್ತರ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 14 ಕ್ಷೇತ್ರಗಳಲ್ಲೂ ಸ್ಪರ್ಧಿಸಿವೆ.ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್‌ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿಲ್ಲ. ರಾಜಕೀಯ ಪಕ್ಷಗಳು, ಪಕ್ಷೇತರರು ಸೇರಿದಂತೆ ಒಟ್ಟು 227 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ. ಈ ಪೈಕಿ 206 ಪುರುಷ ಹಾಗೂ 21 ಮಹಿಳಾ ಅಭ್ಯರ್ಥಿಗಳು ಚುನಾವಣಾ ಸ್ಪರ್ಧೆಯಲ್ಲಿದ್ದಾರೆ.

ಒಟ್ಟು 2,59,52,958 ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ. ಇದರಲ್ಲಿ 1,29,48,928 ಪುರುಷ, 1,29,66,570 ಮಹಿಳೆಯರಿದ್ದು, 35,465 ಸೇವಾ ಮತದಾರರಿದ್ದಾರೆ. ಯುವ ಮತದಾರರು 6,90,929 ಇದ್ದು, 85 ವರ್ಷ ಮೇಲ್ಪಟ್ಟ 2,29,563 ಮತದಾರರಿದ್ದರೆ, 3,43,966 ದಿವ್ಯಾಂಗ ಮತದಾರರಿದ್ದಾರೆ.

ಗುಲ್ಬರ್ಗ ಕ್ಷೇತ್ರದಲ್ಲಿ ಅತೀ ಹೆಚ್ಚು 20,98,202 ಮತದಾರರಿದ್ದರೆ, ಉತ್ತರ ಕನ್ನಡ ಕ್ಷೇತ್ರದಲ್ಲಿ 16,41,156 ಮತದಾರರಿದ್ದಾರೆ.14 ಕ್ಷೇತ್ರಗಳಲ್ಲೂ ಒಟ್ಟು 28,269 ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ಎಡಗೈ ತೋರುಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ. ಮತದಾರರಿಗೆ ಈಗಾಗಲೇ ನೀಡಿರುವ ಓಟರ್‌ ಸ್ಲಿಪ್‌ ಹಾಗೂ ಮತದಾರರ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತದಾನ ಮಾಡಬಹುದಾಗಿದೆ.

ಒಂದು ವೇಳೆ ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಆಧಾರ್‌ ಕಾರ್ಡ್‌, ಮನ್ರೇಗಾ ಜಾಬ್‌ಕಾರ್ಡ್‌, ಬ್ಯಾಂಕ್‌ ಅಥವಾ ಪೋಸ್ಟ್ ಆಫೀಸ್‌ ಪಾಸ್‌ಬುಕ್‌, ಕಾರ್ಮಿಕ ಇಲಾಖೆ ನೀಡಿರುವ ಆರೋಗ್ಯ ವಿಮಾ ಸ್ಮಾರ್ಟ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್‌್ಸ, ಪ್ಯಾನ್‌ ಕಾರ್ಡ್‌, ಪಾಸ್‌ಪೋರ್ಟ್‌, ಪಿಂಚಣಿ ದಾಖಲೆ ಸೇರಿದಂತೆ ಭಾವಚಿತ್ರವಿರುವ ಕೇಂದ್ರ, ರಾಜ್ಯಸರ್ಕಾರ, ಸಾರ್ವಜನಿಕ ಸಂಸ್ಥೆಗಳು, ಪಬ್ಲಿಕ್‌ ಲಿಮಿಟೆಡ್‌ ಕಂಪನಿಗಳು ನೀಡಿರುವ ಉದ್ಯೋಗ ಗುರುತಿನ ಚೀಟಿಯನ್ನು ಹಾಜರುಪಡಿಸಿ ಮತ ಚಲಾಯಿಸಬಹುದಾಗಿದೆ.

RELATED ARTICLES

Latest News