Saturday, May 18, 2024
Homeರಾಜಕೀಯರಾಜ್ಯದಲ್ಲಿ 2ನೇ ಹಂತದ ಚುನಾವಣೆ ಟಾರ್ಗೆಟ್ ಮಾಡಿ 'ಬೆಲೆ ಏರಿಕೆ' ಬಾಣ ಬಿಟ್ಟ ಕಾಂಗ್ರೆಸ್

ರಾಜ್ಯದಲ್ಲಿ 2ನೇ ಹಂತದ ಚುನಾವಣೆ ಟಾರ್ಗೆಟ್ ಮಾಡಿ ‘ಬೆಲೆ ಏರಿಕೆ’ ಬಾಣ ಬಿಟ್ಟ ಕಾಂಗ್ರೆಸ್

ಬೆಂಗಳೂರು,ಮೇ.4- ರಾಜ್ಯದಲ್ಲಿನ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದ 14 ಕ್ಷೇತ್ರಗಳಲ್ಲಿ ಮತದಾನಕ್ಕೆ ಮೂರು ದಿನ ಬಾಕಿ ಇರುವ ಸಂದರ್ಭದಲ್ಲಿ ಕಾಂಗ್ರೆಸ್‌ ಬೆಲೆ ಏರಿಕೆಯನ್ನು ಪ್ರಸ್ತಾಪಿಸಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದೆ.

ಮೋದಿಯವರ ಅಚ್ಛೇದಿನ ಅಮೃತ್‌ಕಾಲದಲ್ಲಿ ಗಗನಮುಖಿಯಾಗಿದೆ. ಹೆಚ್ಚಿರುವುದು ಅಭಿವೃದ್ಧಿ ಅಲ್ಲ, ದಿನಬಳಕೆಯ ವಸ್ತುಗಳ ಬೆಲೆ ಎಂದು ದೂಷಿಸಿದರು.ಬೆಲೆ ಏರಿಕೆಯ ಜೊತೆಗೆ ಜಿಎಸ್‌ಟಿಯ ಹೊರೆ ಹೊರಿಸಿ ಜನರ ಬದುಕನ್ನು ಭಾರವಾಗಿಸಿದ್ದೇ ಮೋದಿಯವರ 10 ವರ್ಷಗಳ ಸಾಧನೆ. ಬಂಡವಾಳಶಾಹಿಗಳ ಪರ ನೀತಿ ಹೊಂದಿರುವ ಬಿಜೆಪಿಯನ್ನು ಸೋಲಿಸಿ ಜನಪರವಾಗಿ ಚಿಂತಿಸುವ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿ ಎಂದು ಮನವಿ ಮಾಡಿಕೊಳ್ಳಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ ಪ್ರಧಾನಿಯ ವಯಸ್ಸಿಗಿಂತ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಾಗಿದೆ. ಚಿನ್ನ ಬಡವರ ಕೈ ಸುಡುತ್ತಿದೆ. ಅಡುಗೆ ಎಣ್ಣೆ, ಗ್ಯಾಸ್‌ ಸಿಲಿಂಡರ್‌, ಬೇಳೆ ಕಾಳಿನ ಬೆಲೆ ಕೇಳಿದರೆ ಹಸಿವೆಯೇ ಮರೆತು ಹೋಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಅಚ್ಛೇದಿನ್‌ ಎಂದರೆ ದುಬಾರಿ. ಮೋದಿ ಎಂದರೆ ಮಕ್ಮಲ್‌ ಟೋಪಿ. ನರೇಂದ್ರ ಮೋದಿಯವರು ಕನ್ನಡಿಗರ ಕೈಗೆ ಕೊಟ್ಟಿರುವ ಚೊಂಬನ್ನು ಈ ಚುನಾವಣೆಯಲ್ಲಿ ಮರೆಯದೇ ಅವರ ಕೈಗೆ ವಾಪಸ್‌ ನೀಡಿ ಎಂದು ಕರೆ ನೀಡಿದ್ದಾರೆ.ಎಐಸಿಸಿಯ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ನಮ್ಮ ಓಟು, ನಮ್ಮ ಅಧಿ ಕಾರ ವಿಭಜನೆಯ ನೀತಿ ಅನುಸರಿಸಿರುವ ಶಕ್ತಿಗಳನ್ನು ಸೋಲಿಸಿ. ಬ್ರಿಟಿಷರು ಒಡೆದಾಳುವ ನೀತಿಯನ್ನು ಅನುಸರಿಸುತ್ತಿದ್ದರು. ಕೇಂದ್ರದಲ್ಲಿ ಆಡಳಿತ ನಡೆಸುವವರು ಅದೇ ರೀತಿಯ ನೀತಿಯನ್ನು ಪಾಲನೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡಿಗರು ಐಕ್ಯತೆ, ಭಾವೈಕ್ಯ, ಸಮಗ್ರತೆ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಪ್ರಜಾಪ್ರಭುತ್ವದ ಹಬ್ಬವಾಗಿರುವ ಚುನಾವಣೆಯಲ್ಲಿ ಭಾಗವಹಿಸಿ ದ್ವೇಷ ಬಿತ್ತುವ ಶಕ್ತಿಗಳಿಗೆ ಹಾಗೂ ದೆಹಲಿಯಲ್ಲಿ ಕುಳಿತು ಸರ್ವಾಧಿ ಕಾರಿ ಪ್ರವೃತ್ತಿ ಅನುಸರಿಸುತ್ತಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ಮನವಿ ಮಾಡಿದ್ದಾರೆ.

ಮೊದಲ ಹಂತದ ಚುನಾವಣೆ ಸೇರಿದಂತೆ ಬಾಕಿ ಉಳಿದ 14 ಕ್ಷೇತ್ರಗಳ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಜಾಹೀರಾತು ಅಸ್ತ್ರವನ್ನು ಬಳಕೆ ಮಾಡಿದೆ. ಅಡುಗೆ ಎಣ್ಣೆ ಲೀಟರ್‌ಗೆ 180 ರೂ., ಪೆಟ್ರೋಲ್‌ 100 ರೂ., ಡೀಸೆಲ್‌ 85 ರೂ., ತೊಗರಿಬೇಳೆ ಕೆಜಿಗೆ 200 ರೂ. ಇದ್ದರೆ ಡಿಎಪಿ ರಸಗೊಬ್ಬರ 1600 ರೂ., ಅಡುಗೆ ಅನಿಲದ ಪ್ರತಿ ಸಿಲಿಂಡರ್‌ಗೆ 1100 ರೂ. ದರ ಹೆಚ್ಚಾಗಿದೆ. ಅಚ್ಛೇದಿನ್‌ ಎಂದರೆ ದುಬಾರಿ ಎಂಬಂತಾಗಿದೆ ಎಂದು ಕಾಂಗ್ರೆಸ್‌ ವಾಗ್ದಾಳಿ ನಡೆಸಿದೆ.

RELATED ARTICLES

Latest News