ಬೆಂಗಳೂರು, ಏ.30- ಏಪ್ರಿಲ್-ಮೇ ಬಂತೆಂದರೆ ಎಲ್ಲಿ ನೋಡಿದರೂ ಹಣ್ಣುಗಳ ರಾಜ. ಮಾವಿನ ಹಣ್ಣಿನ ಗಮಲು ಪಸರಿಸುತ್ತಿತ್ತು. ಆದರೆ ಈ ಬಾರಿ ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿದ್ದು, ಮಾವಿನ ಅಬ್ಬರವೇ ಇಲ್ಲದಂತಾಗಿದೆ. ಈ ಸಮಯದಲ್ಲಿ ರಾಜ್ಯದ ವಿವಿಧ ಜಿಲ್ಲೆ ಪಟ್ಟಣ ನಗರದ ರಸ್ತೆ ಬದಿ ರಾಶಿರಾಶಿ ಮಾವಿನ ಹಣ್ಣುಗಳ ವ್ಯಾಪಾರ ಜೋರಾಗಿ ನಡೆಯುತ್ತಿತ್ತು.
ಬರದಿಂದಾಗಿ ಇಳುವರಿ ಕುಂಠಿತವಾಗಿ ಬೆಲೆ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು ಕೈಗೆಟುಕದಂತೆ ಹಣ್ಣು ಹುಳಿಯಾಗಿದೆ. ಪ್ರತಿ ವರ್ಷ ಕೆಜಿ ಹಣ್ಣಿಗೆ 70ರಿಂದ 100 ರೂ.ಗೆ ಮಾರಾಟವಾಗುತ್ತಿತ್ತು. ಆದರೆ ಈ ಬಾರಿ ಕೆಜಿಗೆ 300 ರೂ.ಗೆ ತಲುಪಿದೆ. ರಾಜ್ಯ ಮಾತ್ರ ವಲ್ಲದೆ ಹೊರರಾಜ್ಯದಲ್ಲೂ ಸಹ ನಿರೀಕ್ಷೆಯಂತೆ ಮಾವು ಬೆಳೆಯಿಲ್ಲ. ಪೂರೈಕೆ ಇಲ್ಲದೆ ಬೆಲೆ ಗಗನಕ್ಕೇರಿದೆ.
ಮಾವು ಹೂ ಬಿಡುವ ಸಂದರ್ಭದಲ್ಲಿ ಮಳೆ ಕೈಕೊಟ್ಟಿದ್ದು, ಗಿಡದಲ್ಲೇ ಉಳಿದಿದ್ದ ಪೀಚುಗಳು ಸಹ ಬಿಸಿಲಿನ ಧಗೆಗೆ ಉದುರು ಹೋಗಿದ್ದು, ಬೆಳೆ ರಕ್ಷಿಸಿಕೊಳ್ಳಲು ರೈತರು ಟ್ಯಾಂಕರ್‌ಗಳ ಮೂಲಕ ನೀರು ಹಾಯಿಸಿದ್ದು, ಜೊತೆಗೆ ಸಾಕಷ್ಟು ಔಷಧಿಯನ್ನು ಸಹ ಸಿಂಪಡಿಸಿದರು.
ಇದ್ಯಾವುದೇ ಸಹ ಪ್ರಯೋಗವಾಗದೇ ಹವಾಮಾನದ ಮುಂದೆ ನಮ್ಮ ಕಸರತ್ತು ಏನೂ ಕೂಡ ನಡೆಯದಂತಾಗಿ ಇಳುವಳಿ ಭಾರೀ ಕುಂಠಿತವಾಗಿದೆ. ಹಾಗಾಗಿ ಬೆಲೆ ಗಗನಕ್ಕೇರಿದೆ.
ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮಾಲೂರು, ಮಾಗಡಿ ಪ್ರದೇಶದಲ್ಲಿ ಹೆಚ್ಚಿನ ಮಾವು ಬೆಳೆಯಲಾಗುತ್ತಿತ್ತು. ಬೆಂಗಳೂರಿಗೆ ಅಧಿಕ ಪ್ರಮಾಣದಲ್ಲಿ ಮಾಲು ಬರುತ್ತಿತ್ತು. ಈ ಬಾರಿ ಇಳುವಳಿ ಇಲ್ಲದೆ ಕೆಲವೇ ಟನ್‌ಗಳಷ್ಟೇ ಹಣ್ಣು ಬಂದಿದ್ದು, ನಗರದ ಆಯ್ದ ಪ್ರದೇಶಗಳಲ್ಲಿ ಮಾತ್ರ ಕಾಣಬಹುದಾಗಿದೆ.
ಬಂದಿರುವ ಹಣ್ಣುಗಳು ಸಹ ಅಷ್ಟೇನೂ ಗಾತ್ರ ಹೊಂದಿಲ್ಲ. ಜೊತೆಗೆ ರುಚಿಯೂ ಕೂಡ ಇಲ್ಲದಂತಾಗಿದೆ. ಅವು ಕೂಡ ನೈಸರ್ಗಿಕವಾಗಿ ಹಣ್ಣಾದಂತಿಲ್ಲ. ಬಿಸಿಲಿಗೆ ಕಲ್ಲರ್ ಬಂದಿದ್ದು ಬಲವಂತವಾಗಿ ಹಣ್ಣು ಮಾಡಲಾಗಿದ್ದು, ರುಚಿ ಇಲ್ಲದಂತಾಗಿದೆ.
ಬೆಲೆ ನೋಡುವುದಾದರೆ ಮಲಗೋಬ 200ರಿಂದ 250, ಬಾದಾಮಿ 200, ಸೇಂದೂರ 150, ರಸಪುರಿ 150ಗೆ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.ಈ ಸಮಯದಲ್ಲಿ ಬುಟ್ಟಿಗಟ್ಟಲೆ ಹಣ್ಣು ಕೊಂಡು ತಿನ್ನುತ್ತಿದ್ದ ಜನ ಹಣ್ಣಿನ ಬರಹರಿಸಿಕೊಳ್ಳಲು ಕೆಜಿ ಲೆಕ್ಕದಲ್ಲಿ ಕೊಂಡು ತಿನ್ನುವಂತಾಗಿದೆ.