ಇಂಫಾಲ್,ಮೇ1- ಸಂಘರ್ಷ ಪೀಡಿತ ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪೊಲೀಸರು ಸಂತ್ರಸ್ತರಿಗೆ ನೆರವಾಗದೇ ಇರುವುದೇ ಕೃತ್ಯಕ್ಕೆ ಕಾರಣ ಎಂದು ಎಂದು ಉಲ್ಲೇಖಿಸಿದ್ದಾರೆ.
ಅಂದು ಸಂತ್ರಸ್ತ ಮಹಿಳೆಯರು ನೆರವು ಕೋರಿ ಪೊಲೀಸರ ವಾಹನ ಏರಿದ್ದರು, ಆದರೆ ಪೊಲೀಸರು ವಾಹನದ ಕೀ ಇಲ್ಲ ಎನ್ನುವ ನೆಪ ಹೇಳಿ ನೆರವು ನೀಡಲು ನಿರಾಕರಿಸಿದ್ದಾರೆ. ಮಹಿಳೆಯರು ಮಾತ್ರವಲ್ಲ ಇಬ್ಬರು ಪುರುಷರೂ ಪೊಲೀಸರ ವಾಹನ ಏರಿದ್ದರು. ಆದರೆ ಸಂಘರ್ಷನಿರತರು ಅವರನ್ನು ವಾಹನದಿಂದ ಎಳೆದು ಥಳಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರು ಎಂದು ಕೇಂದ್ರೆಯ ತನಿಖಾ ದಳ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.
ಘಟನೆ ಹಿನ್ನಲೆ:
2023ರ ಮೇ 3-4ರಂದು ನಡೆದಿದ್ದ ಹಿಂಚಾಚಾರದ ವೇಳೆ ಸಾರ್ವಜನಿಕರ ಮೇಲೆ ಭಾರೀ ಹಲ್ಲೆ ನಡೆದಿತ್ತು. ಈ ವೇಳೆ ಸಂತ್ರಸ್ತರು ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಕಾಡಿನತ್ತ ಓಡಿದ್ದರು. ಆದರೆ ಅವರನ್ನು ಶಸಾ್ತ್ರಸ್ತ್ರ ಹಿಡಿದುಕೊಂಡೇ ಹಿಂಬಾಲಿಸಿದ್ದ ದಾಳಿಕೋರರು ಕಾಡಿನೊಳಗೆ ಹೊಕ್ಕಿದ್ದವರನ್ನೆಲ್ಲ ಬಲವಂತವಾಗಿ ರಸ್ತೆಗೆ ಎಳೆದು ತಂದು ಥಳಿಸ ತೊಡಗಿದ್ದರು.
ಅಷ್ಟೇ ಅಲ್ಲ ಸಂತ್ರಸ್ತೆಯರಿಬ್ಬರನ್ನು ಒಂದು ಕಡೆ, ಇನ್ನಿಬ್ಬರು ಮಹಿಳೆಯರು, ಅವರ ತಂದೆ ಹಾಗೂ ಗ್ರಾಮದ ಯಜಮಾನನನ್ನು ಮತ್ತೊಂದು ಕಡೆ ನಿಲ್ಲಿಸಿ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ.
ಕಿರುಕುಳ ತಾಳಲಾರದೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದ ಸಂತ್ರಸ್ತರು ರಕ್ಷಣೆಗಾಗಿ ಪೊಲೀಸ್ ವಾಹನಕ್ಕೆ ನುಗ್ಗಿದ್ದರು. ವಾಹನ ಚಾಲನೆ ಮಾಡುವಂತೆ, ಇಲ್ಲಿಂದ ಕರೆದೊಯ್ದು ರಕ್ಷಣೆ ಕೊಡುವಂತೆ ಬೇಡಿಕೊಂಡಿದ್ದರು. ಆದರೆ ವಾಹನದ ಕೀ ಇಲ್ಲ ಎಂದು ಹೇಳಿ ಪೊಲೀಸರು ನೆರವಾಗಲು ನಿರಾಕರಿಸಿದ್ದರು.
ಹೀಗೆ ಹೇಳಿದ ಕ್ಷಣಾರ್ಧದಲ್ಲೇ ಕಾರು ಚಾಲನೆ ಮಾಡಿದ ಚಾಲಕ, ಸಾವಿರಾರು ಸಂಖ್ಯೆಯಲ್ಲಿದ್ದ ಉದ್ರಿಕ್ತರ ಸಮೀಪವೇ ವಾಹನ ನಿಲ್ಲಿಸಿದ್ದ. ಇದರಿಂದ ಭಯಗೊಂಡ ಸಂತ್ರಸ್ತರು, ಬೇರೆಡೆಗೆ ಕರೆದೊಯ್ಯುವಂತೆ ಅಂಗಲಾಚಿದ್ದರು. ಈ ಮಧ್ಯೆ ಸಂತ್ರಸ್ತ ಮಹಿಳೆಯ ತಂದೆಯನ್ನು ಹತ್ಯೆ ಮಾಡಲಾಗಿತ್ತು. ಬಳಿಕ ವಾಹನದಲ್ಲಿದ್ದವರನ್ನು ಉದ್ರಿಕ್ತರು ಹೊರಗೆಳೆದು ಮನಸ್ಸೋ ಇಚ್ಛೆ ಹಲ್ಲೆ ಮಾಡಿದರು. ಅಷ್ಟರಲ್ಲಿ ಪೊಲೀಸರು ಅಲ್ಲಿಂದ ಕಾಲ್ಕಿತ್ತು ದೌಡಾಯಿಸಿದ್ದರು.
ನಂತರ ಉದ್ರಿಕ್ತರ ಗುಂಪು ಇಬ್ಬರು ಮಹಿಳೆಯರನ್ನು ವಿವಸ್ತ್ರಗೊಳಿಸಿ ಮೆರವಣಿಗೆ ನಡೆಸಿತ್ತು, ಇದೇ ವೇಳೆ ಅಲ್ಲಿದ್ದ ಇಬ್ಬರು ಪುರುಷರ ಮೇಲೆ ಹಲ್ಲೆ ನಡೆಸಿತ್ತು ಎಂದು ಸಿಬಿಐ ಹೇಳಿದೆ.
ಮುಂದುವರಿದ ತನಿಖೆ:
ಇದರ ಬೆನ್ನಲ್ಲೇ ರಾಜ್ಯದಾದ್ಯಂತ ಕುಕಿ ಹಾಗೂ ಮೈತೇಯಿ ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದಿತ್ತು. ಕೃಷ್ಣ ಸಂಬಂಧ ಮಣಿಪುರ ಸರ್ಕಾರದ ಶಿಫಾರಸ್ಸು ಮತ್ತು ಕೇಂದ್ರ ಸರ್ಕಾರದ ನಿರ್ದೇಶನದಂತೆ ಸಿಬಿಐ ತನಿಖೆ ಆರಂಭಿಸಿದೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ, ಕೊಲೆ, ಕೋಮುಗಲಭೆಗೆ ಸಂಚು ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದೆ.
ಜನಾಂಗೀಯ ಹಿಂಸಾಚಾರಕ್ಕೆ ಕಾರಣ ಏನು?:
ಮಣಿಪುರದಲ್ಲಿ ಬಹುಸಂಖ್ಯೆಯಲ್ಲಿರುವ ಮೈಥೇಯಿ ಸಮುದಾಯದವರು ತಮಗೆ ಎಸ್ಟಿ ಮೀಸಲಾತಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು. ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಿರುವ ನಾಗಾ ಮತ್ತು ಕುಕಿ ಬುಡಕಟ್ಟು ಸಮುದಾಯಗಳು ಇದನ್ನು ವಿರೋಧಿಸಿದ್ದವು. ಇದರಿಂದ ಸೃಷ್ಟಿಯಾದ ಬಿಕ್ಕಟ್ಟು ರಾಜ್ಯದಲ್ಲಿ ಭೀಕರ ಹಿಂಸಾಚಾರಕ್ಕೆ ಕಾರಣವಾಗಿತ್ತು.