Saturday, December 28, 2024
Homeರಾಷ್ಟ್ರೀಯ | Nationalಸಂದರ್ಶನವೊಂದರಲ್ಲಿ ತಮ್ಮ ಬಯಕೆಯನ್ನು ಬಹಿರಂಗಪಡಿಸಿದ್ದ ಮನಮೋಹನ್‌ ಸಿಂಗ್‌

ಸಂದರ್ಶನವೊಂದರಲ್ಲಿ ತಮ್ಮ ಬಯಕೆಯನ್ನು ಬಹಿರಂಗಪಡಿಸಿದ್ದ ಮನಮೋಹನ್‌ ಸಿಂಗ್‌

Manmohan Singh reveals his desire in an interview

ನವದೆಹಲಿ,ಡಿ.27– ಮನಮೋಹನ್‌ ಸಿಂಗ್‌ ಅವರಿಗೆ ತಾವು ಬೆಳೆದ ಸ್ಥಳವನ್ನು ಎಂದೂ ಮರೆಯಲು ಸಾಧ್ಯವಾಗಲಿಲ್ಲ. ಕಾಂಗ್ರೆಸ್‌‍ ನಾಯಕ ರಾಜೀವ್‌ ಶುಕ್ಲಾ ಅವರು ತಮ ಸಂದರ್ಶನವೊಂದರಲ್ಲಿ ಮನಮೋಹನ್‌ ಸಿಂಗ್‌ ಅವರ ಕನಸುಗಳ ಬಗ್ಗೆ ಪ್ರಸ್ತಾಪಿಸಿದ್ದರು. ಸಂದರ್ಶನವೊಂದರಲ್ಲಿ ಕಾಂಗ್ರೆಸ್‌‍ ನಾಯಕ ರಾಜೀವ್‌ ಶುಕ್ಲಾ ಅವರು ಮನಮೋಹನ್‌ ಸಿಂಗ್‌ ಅವರ ಆಸೆಯನ್ನು ಬಹಿರಂಗಪಡಿಸಿದ್ದರು. ಮನಮೋಹನ್‌ ಸಿಂಗ್‌ ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ತಮ್ಮ ಪಾಕಿಸ್ತಾನಿ ಸ್ನೇಹಿತರೊಂದಿಗೆ ರಾವಲ್ಪಿಂಡಿಗೆ ಹೋಗಿದ್ದರು. ಆ ಪ್ರವಾಸದ ಸಮಯದಲ್ಲಿ ಅವರು ಬೈಸಾಖಿಯ ದಿನದಂದು ಗುರುದ್ವಾರಕ್ಕೆ ಹೋಗಿದ್ದರು, ಆದರೆ ತಮ್ಮ ಹಳ್ಳಿಗೆ ಹೋಗಲು ಸಾಧ್ಯವಾಗಲಿಲ್ಲ.

ಮನಮೋಹನ್‌ ಸಿಂಗ್‌ ತಾಯಿ ತೀರಿಕೊಂಡಾಗ ಅವರಿನ್ನೂ ತುಂಬಾ ಚಿಕ್ಕವರು. ಅವರ ಅಜ್ಜನ ಜತೆಯಲ್ಲಿ ಬೆಳೆದಿದ್ದರು, ಯಾವುದೋ ಒಂದು ಗಲಭೆಯಲ್ಲಿ ಅಜ್ಜನನ್ನು ಕೂಡ ಕಳೆದುಕೊಂಡರು. ಈ ಘಟನೆ ಅವರ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರಿತ್ತು.

ಈ ಘಟನೆ ಬಳಿಕ ಅವರು ಪೇಶಾವರದಲ್ಲಿರುವ ತನ್ನ ತಂದೆಯ ಬಳಿಗೆ ಮರಳಿದರು. ಭಾರತದ ವಿಭಜನೆಯ ಸಮಯದಲ್ಲಿ ಅವರು ಹೈಸ್ಕೂಲ್‌ನಲ್ಲಿದ್ದಾಗ ಪಾಕಿಸ್ತಾನವನ್ನು ತೊರೆದು ತನ್ನ ತಂದೆಯೊಂದಿಗೆ ಭಾರತಕ್ಕೆ ಬರಬೇಕಾಯಿತು. ರಾಜೀವ್‌ ಶುಕ್ಲಾ ಪ್ರಕಾರ, ಸಿಂಗ್‌ ಭಾರತದ ಪ್ರಧಾನಿಯಾಗಿದ್ದಾಗ ಒಮೆ ಪಾಕಿಸ್ತಾನಕ್ಕೆ ಹೋಗಬೇಕೆಂದು ಬಯಸಿದ್ದರು. ತಾನು ಬೆಳೆದ ಹಳ್ಳಿಯನ್ನು ನೋಡಬೇಕೆಂಬ ಆಸೆ ಇತ್ತು. ಅವರು ಪ್ರಾಥಮಿಕ ಶಿಕ್ಷಣ ಪಡೆದ ಶಾಲೆಯನ್ನು ನೋಡಲು ಬಯಸಿದ್ದರು.

ಒಮೆ ನಾನು ಅವರ ಜತೆ ಪಿಎಂ ಹೌಸ್‌‍ನಲ್ಲಿ ಕುಳಿತಿದ್ದೆ. ಹೀಗೆ ಮಾತನಾಡುತ್ತಿದ್ದಾಗ ಅವರು ತಮಗೆ ಪಾಕಿಸ್ತಾನಕ್ಕೆ ಹೋಗುವ ಆಸೆ ಇದೆ ಎಂದಿದ್ದರು. ನಾನು ಎಲ್ಲಿ ಎಂದು ಕೇಳಿದಾಗ ತಮ ಹಳ್ಳಿಗೆ ಹೋಗಬೇಕು ಎಂದು ಹೇಳಿದ್ದಾಗಿ ರಾಜೀವ್‌ ಶುಕ್ಲಾ ಸಂದರ್ಶನವೊಂದರಲ್ಲಿ ತಿಳಿಸಿದ್ದರು. ಅವರು ತಮ ಆರಂಭಿಕ ಶಿಕ್ಷಣವನ್ನು ಪಡೆದ ಶಾಲೆಯನ್ನು ನೋಡುವ ಅವಕಾಶ ಅವರಿಗೆ ಎಂದಿಗೂ ಇರಲಿಲ್ಲ, ಆದರೆ ಅವರು ಪಾಕಿಸ್ತಾನದ ಗಾಹ್‌ ಗ್ರಾಮದಲ್ಲಿ ಕಲಿತ ಶಾಲೆಯನ್ನು ಈಗ ಮನಮೋಹನ್‌ ಸಿಂಗ್‌ ಸರ್ಕಾರಿ ಬಾಲಕರ ಶಾಲೆ ಎಂದು ಕರೆಯಲಾಗುತ್ತಿದೆ.

ಇದೇ ಗಾಹ್‌ ಗ್ರಾಮದಲ್ಲಿ ವಾಸವಾಗಿದ್ದ ಹಾಗೂ ಮನಮೋಹನ್‌ ಸಿಂಗ್‌ ಅವರ ಸಹಪಾಠಿಯಾಗಿದ್ದ ರಾಜಾ ಮೊಹಮದ್‌ ಅಲಿ ಅವರು ಮನಮೋಹನ್‌ ಅವರೊಂದಿಗೆ ನಾಲ್ಕನೇ ತರಗತಿಯವರೆಗೆ ಓದಿರುವುದಾಗಿ ಮಾಧ್ಯಮ ವರದಿಯಲ್ಲಿ ತಿಳಿಸಿದ್ದಾರೆ. ನಂತರ ಮನಮೋಹನ್‌ ಸಿಂಗ್‌ ಅಧ್ಯಯನಕ್ಕಾಗಿ ಚಕ್ವಾಲ್‌ ಪಟ್ಟಣಕ್ಕೆ ಹೋದರು. ದೇಶ ವಿಭಜನೆಯ ನಂತರ ಅವರ ಕುಟುಂಬ ಭಾರತಕ್ಕೆ ಬಂದಿತು. ಆದರೆ ಇಂದಿಗೂ ಗಾಹ್‌ ಗ್ರಾಮದ ಜನರು ಅವರನ್ನು ನೆನಪಿಸಿಕೊಳ್ಳುತ್ತಾರೆ.

RELATED ARTICLES

Latest News