ಮಧುಗಿರಿ,ಸೆ.6- ತಂದೆ-ತಾಯಿ, ಸಹೋದರರಿಲ್ಲದ ಯುವತಿಯರನ್ನು ಹುಡುಕಿ ಮದುವೆಯಾಗಿ ಅವರಿಂದ ಹಣ ಮತ್ತು ಚಿನ್ನಾಭರಣ ಕಿತ್ತು ಪರಾರಿಯಾಗುವ ಧೋಖಾ ಕುಟುಂಬವೊಂದು ರಾಜ್ಯದಲ್ಲಿ ಸಕ್ರಿಯವಾಗಿದ್ದು, ಮಧುಗಿರಿಯ ಕುಟುಂಬವೊಂದು 7ಕ್ಕೂ ಹೆಚ್ಚು ಯುವತಿಯರಿಂದ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ಪಡೆದು ವಂಚಿಸಿದ್ದು, ಈ ಬಗ್ಗೆ ಖತರ್ನಾಕ್ ಕುಟುಂಬದ ವಿರುದ್ಧ ಚೆನ್ನೈ ಹಾಗೂ ರಾಜ್ಯದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಷ್ಟೇ ಅಲ್ಲದೆ, ಹೊರರಾಜ್ಯಗಳಲ್ಲೂ ಈ ಗ್ಯಾಂಗ್ ವಂಚನೆ ಎಸಗಿರುವ ಸಂಗತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ಬಸವಣ್ಣ ದೇವಸ್ಥಾನದ ಸಮೀಪ ಐಸ್ ಪ್ಯಾಕ್ಟರಿ ನಡೆಸುತ್ತಿರುವ ನಿವಾಸಿ ಎಂ.ಬಿ.ವಿನಯ್, ಅವರ ತಂದೆ ಬಸವರಾಜು, ತಾಯಿ ಶಾಂತಕುಮಾರಿ, ಸಹೋದರಿ ಶೋಭಾ ಈ ಗ್ಯಾಂಗ್‌ನ ಸದಸ್ಯರು. ಇವರೆಲ್ಲ ಸೇರಿಕೊಂಡು 7ಕ್ಕೂ ಹೆಚ್ಚು ಯುವತಿಯರಿಂದ ಚಿನ್ನಾಭರಣ, ಕೋಟ್ಯಂತರ ರೂ. ಪಡೆದು ವಂಚಿಸಿರುವುದು ಬೆಳಕಿಗೆ ಬಂದಿದೆ.
ಮದುವೆಯಾಗುವುದಾಗಿ ನಂಬಿಸಿ ಯುವತಿಯರನ್ನು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರು ಸೆಷನ್‌್ಸ ನ್ಯಾಯಾಲಯ ಆರೋಪಿ ವಿನಯ್‌ಗೆ ಜೈಲು ಶಿಕ್ಷೆ ವಿಧಿಸಿತ್ತು. ಮೂರು ತಿಂಗಳ ಬಳಿಕ ಜಾಮೀನಿನ ಮೇಲೆ ಜೈಲಿನಿಂದ ಹೊರ ಬಂದಿದ್ದ ಈತನ ವಿರುದ್ಧ ರಾಜ್ಯದ ವಿವಿಧ ಜಿಲ್ಲೆ, ತಾಲೂಕುಗಳಲ್ಲಿ ಸಂತ್ರಸ್ತೆ ಯುವತಿಯರು ದೂರು ನೀಡಿದ್ದರಿಂದ ಹಲವು ಪ್ರಕರಣ ದಾಖಲಾಗಿವೆ. ಜೈಲಿನಿಂದ ಹೊರಬಂದ ಬಳಿಕವೂ ಆರೋಪಿ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್, ಸಾಮಾಜಿಕ ಜಾಲತಾಣ ಸೇರಿದಂತೆ ಇತರ ವೆಬ್‌ಸೈಟ್‌ಗಳಲ್ಲಿ ನಕಲಿ ಪ್ರೊಫೈಲ್ ಅಪ್ಲೋಡ್ ಮಾಡಿ ವಂಚನೆ ಮುಂದುವರಿಸಿದ್ದಾನೆ ಎಂದು ಆರೋಪಿಸಲಾಗಿದೆ.
ವಿಧವೆಯರು, ಒಂಟಿ ಮಹಿಳೆಯರೇ ಟಾರ್ಗೆಟ್ :
ಬಿಎಸ್ಸಿ, ಎಂಎಸ್ಸಿ ಓದಿರುವುದಾಗಿ ನಂಬಿಸಿ, ಸುಳ್ಳು ಹೇಳಿ ಯುವತಿಯರ ವಿಶ್ವಾಸ ಗಳಿಸುತ್ತಿದ್ದ, 2016ರಿಂದಲೇ ವಂಚನೆ ಕೃತ್ಯ ನಡೆಸುತಿದ್ದ ಚೆನ್ನೈನಲ್ಲಿ ಯುವತಿಯೊಬ್ಬಳನ್ನು ವಿವಾಹವಾಗಿರುವ ಆರೋಪಿ ಆಕೆಯಿಂದ ಲಕ್ಷಾಂತರ ರೂ. ಚಿನ್ನಾಭರಣ ಪಡೆದು ವಂಚನೆ ಮಾಡಿದ್ದಾನೆ.
ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಪಾವಗಡದ ಯುವತಿಗೂ ಕೂಡ ವಿವಾಹವಾಗುವುದಾಗಿ ಆಕೆಗೂ ವಂಚಿಸಿದ್ದ. ಹಿರಿಯೂರಿನ ಯುವತಿಗೆ 2014ರಲ್ಲಿ ವಂಚನೆ ಮಾಡಿದ್ದಾನೆ. ಕೆಲವರ ಜತೆ ಸಲುಗೆ ಬೆಳೆಸಿಕೊಂಡು ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಲೋನ್ ಮಾಡಿಕೊಂಡ ಪ್ರಕರಣಗಳೂ ಬೆಳಕಿಗೆ ಬಂದಿವೆ. ತುಮಕೂರಿನ ಯುವತಿಗೆ ವಂಚಿಸಿ 15 ಲಕ್ಷ ರೂಪಾಯಿ ಪಡೆದಿದ್ದಾನೆ.
ಸಂತ್ರಸ್ತರ ಕೂಗು :
ಹೆಣ್ಣು ಮಕ್ಕಳ ಜೀವನದ ಜತೆ ಚೆಲ್ಲಾಟವಾಡುತ್ತಿರುವ ವಂಚಕ ವಿನಯ್ ಹಾಗೂ ಕುಟುಂಬಕ್ಕೆ ತಕ್ಕ ಶಿಕ್ಷೆಯಾಗಬೇಕು. ಈ ರೀತಿ ವಂಚಿಸುವುದು ಅವರಿಗೆ ಸಾಮಾನ್ಯವಾಗಿದೆಂದು ಸಂತ್ರಸ್ತರ ಕೂಗಾಗಿದೆ.
ಮದುವೆಗೂ ಮೊದಲೇ ನೋಂದಣಿ:
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯೋರ್ವಳಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತಮ ಮದುವೆ ಪ್ರೊಫೈಲ್ ನೋಂದಣಿ ಮಾಡಿದ್ದರು. ಇದನ್ನು ಗಮನಿಸಿದ ವಿನಯ್ ಸಹೋದರಿ ಶೋಭಾ, ಅಣ್ಣನ ಮದುವೆಗೆ ಹುಡುಗಿ ನೋಡುತ್ತಿದ್ದೇವೆ.
ನೀವು ಸೂಕ್ತ ಜೋಡಿ ಎಂದು ಸಹೋದರನ ನಕಲಿ ಪ್ರೊಫೈಲ್ ಕಳುಹಿಸಿದ್ದಳು. ನನ್ನ ತಂಗಿ ಮದುವೆ ನಂತರವೇ ನಮ ಮದುವೆ ಎಂದು ಹೇಳಿಕೊಂಡಿದ್ದ ವಂಚಕ, ಕೆಲ ದಿನಗಳ ಬಳಿಕ ಲ್ಯಾಟ್ರಿಯಾ ದೇಶದಲ್ಲಿ ತುರ್ತು ವ್ಯವಹಾರಕ್ಕೆ 30 ಲಕ್ಷ ರೂ. ಬೇಕೆಂಬ ಬೇಡಿಕೆ ಇಟ್ಟಿದ್ದ. ಇದನ್ನು ನಂಬಿದ ಯುವತಿ 10 ಲಕ್ಷ ರೂ. ನೀಡಿದ್ದಳು. ನಂತರ ಲ್ಯಾಟ್ರಿಯಾಗೆ ಹೋಗಲು ಡಿಫೆಂಡೆಂಟ್ ವೀಸಾ ಮಾಡಿಸಲು ಮ್ಯಾರೇಜ್ ಸರ್ಟಿಫಿಕೇಟ್ ಬೇಕಾಗಿದೆ ಎಂದು ಯುವತಿಯನ್ನು ಕರೆದುಕೊಂಡು ನಾಗರಬಾವಿಯಲ್ಲಿರುವ ರಿಜಿಸ್ಟ್ರರ್ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸಿದ್ದನೆಂದು ತಿಳಿದು ಬಂದಿದೆ.
ವರದಕ್ಷಿಣೆ ಹೆಸರಿನಲ್ಲಿ 21.12 ಲಕ್ಷ ರೂ. ಪಡೆದುಕೊಂಡು, ತಂದೆ ತಾಯಿಗೆ ಅನಾರೋಗ್ಯ, ಮನೆ ನಿರ್ಮಾಣಕ್ಕೆ, ಮದುವೆ ಕಲ್ಯಾಣ ಮಂಟಪದ ಖರ್ಚು 7 ಲಕ್ಷ ರೂ. ಅದ್ದೂರಿ ಮದುವೆ ಹೆಸರಲ್ಲಿ 5 ಲಕ್ಷ ರೂ. ಲಗ್ನಪತ್ರಿಕೆ ಹಂಚಿದ ಬಳಿಕ ತಾನು ಮದುವೆಗೆ ಬರುವುದಿಲ್ಲ ಎಂದು ಹೆದರಿಸಿ 3 ಲಕ್ಷ ರೂ. ಹೀಗೆ ಎರಡೂವರೆ ವರ್ಷದಲ್ಲಿ 40 ಲಕ್ಷ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ್ದರು. ನಂತರ 2025 ಫೆ. 2 ರಂದು ತುಮಕೂರಿನ ಕ್ಯಾತ್ಸಂದ್ರದ ಚನ್ನಕೇಶವಸ್ವಾಮಿ ಕಲ್ಯಾಣ ಮಂಟಪದಲ್ಲಿ ವಿವಾಹವಾಗಿದ್ದ.
ಮದುವೆಯಾಗಿ ಎರಡು ತಿಂಗಳ ಬಳಿಕ ಯುವತಿ ಬಳಿ ಇದ್ದ 80 ಗ್ರಾಂ ಚಿನ್ನಾಭರಣ ಕಿತ್ತುಕೊಂಡಿದ್ದ. ಮದುವೆ ಹೆಸರಿನಲ್ಲಿ 30 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ತುಮಕೂರು ಮಹಿಳಾ ಪೊಲೀಸ್ ಠಾಣೆಯಲ್ಲಿ 5 ಮೇ 2025 ರಂದು ಇನ್ನೊಬ್ಬ ಯುವತಿ ಪ್ರಕರಣ ದಾಖಲಿಸಿದ ಬಳಿಕ ವಂಚಕ ವಿನಯ್ ಅಸಲಿ ಬಣ್ಣ ಬಯಲಾಗಿದೆ.
ಆಗ ತುಮಕೂರಿನ ಯುವತಿ ತುಮಕೂರು ಮಹಿಳಾ ಠಾಣೆಯಲ್ಲಿ 2025 ಜೂನ್ 14 ರಂದು ವಿನಯ್ ಹಾಗೂ ಕುಟುಂಬಸ್ಥರ ವಿರುದ್ದ ಎಫ್‌ಐಆರ್ ದಾಖಲಿಸಿದ್ದಾರೆ.ನಾಲೈದು ಹೆಸರು ಪ್ರೊಫೈಲ್: ಆರೋಪಿ ಪ್ರೊಫೈಲ್‌ನಲ್ಲಿ ಎಂ.ಬಿ. ವಿನಯ್, ವಿನಯ್ ಆರಾಧ್ಯ, ಮಧುಗಿರಿ ಬಸವ ರಾಜು, ಗಣೇಶ್ ಎಂಬ ಹಲವು ಹೆಸರುಗಳು ಪತ್ತೆಯಾಗಿವೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ ಐಡಿ, ವಿವಿಧ ಮ್ಯಾಟ್ರಿಮೋನಿಯಲ್ಲಿ ಬೇರೆ ಬೇರೆ ಹೆಸರಿನಲ್ಲಿ ನೋಂದಣಿ ಆಗಿವೆ.