Thursday, December 5, 2024
Homeಜಿಲ್ಲಾ ಸುದ್ದಿಗಳು | District Newsಮೈಸೂರು | Mysuruಪ್ರೀತಿ ನಾಟಕವಾಡಿದ ಮತ್ತೊಂದು ಮದುವೆಯಾಗಿ 9 ಲಕ್ಷ ರೂ. ವಂಚಿಸಿದ ವಿವಾಹಿತ

ಪ್ರೀತಿ ನಾಟಕವಾಡಿದ ಮತ್ತೊಂದು ಮದುವೆಯಾಗಿ 9 ಲಕ್ಷ ರೂ. ವಂಚಿಸಿದ ವಿವಾಹಿತ

married man cheated women Rs. 9 lakh

ಮೈಸೂರು,ನ.19- ಮದುವೆಯಾಗಿದ್ದರೂ ಸಹ ಲೇಡಿಸ್‌‍ ಪಿಜಿ ಓನರ್‌ ಜೊತೆ ಪ್ರೀತಿಸುವ ನಾಟಕವಾಡಿ ಮದುವೆ ಮಾಡಿಕೊಂಡು 9 ಲಕ್ಷ ರೂ. ವಂಚಿಸಿರುವ ಘಟನೆ ಮೈಸೂರಿನ ವಿವಿ ಮೊಹಲ್ಲಾದಲ್ಲಿ ಬೆಳಕಿಗೆ ಬಂದಿದೆ. ಮೈಸೂರಿನ ಗೋಕುಲಂನಲ್ಲಿ ಲೇಡೀಸ್‌‍ ಪಿಜಿ ನಡೆಸುತ್ತಿರುವ ಭಾಗ್ಯಲಕ್ಷಿ (31) ವಂಚನೆಗೆ ಒಳಗಾದವರು.

2022ರಲ್ಲಿ ಭರತ್‌ ಗೌಡ(29) ಎಂಬ ವ್ಯಕ್ತಿ ಇಸ್ಟ್ರಾಗ್ರಾಂ ಮೂಲಕ ಭಾಗ್ಯಲಕ್ಷಿಯನ್ನು ಪರಿಚಯ ಮಾಡಿಕೊಂಡಿದ್ದಾನೆ. ತನಗಿಂತ ಎರಡು ವರ್ಷ ದೊಡ್ಡವರಾದ ಭಾಗ್ಯಲಕ್ಷಿ ಜೊತೆ ಪ್ರೀತಿಯ ನಾಟಕವಾಡಿ ಮದುವೆ ಆಗುವುದಾಗಿ ತಿಳಿಸಿದ್ದಾನೆ. ಈ ಹಿಂದೆ ಮೋನಿಕಾ ಎಂಬುವಳ ಜೊತೆ ಮದುವೆ ಆಗಿದ್ದೇನೆ ಕಾರಣಾಂತರದಿಂದ ಡೈವೋರ್ಸ್‌ ನೀಡಿದ್ದೇನೆ ಎಂದು ನಂಬಿಸಿದ್ದಾನೆ.

ಈ ಬಗ್ಗೆ ನ್ಯಾಯಾಲಯದ ತೀರ್ಪಿನ ದಾಖಲೆ ಕೊಡುವುದಾಗಿ ಭರತ್‌ ಗೌಡ ತಂದೆ ಹಾಗೂ ತಾಯಿ ಕೂಡ ಸಾಥ್‌ ನೀಡಿ ಮೊದಲ ಪತ್ನಿಗೆ ಡೈವೋರ್ಸ್‌ ಆಗಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾರೆ.ನಯವಂಚಕರ ಮಾತನ್ನು ನಂಬಿದ ಭಾಗ್ಯಲಕ್ಷಿ ಮದುವೆಗೆ ಒಪ್ಪಿದ್ದಾರೆ. ಸ್ನೇಹಿತರು, ಸಂಬಂಧಿಕರು ಹಾಗೂ ಪೋಷಕರ ಸಮಕ್ಷಮದಲ್ಲಿ 2023ರಲ್ಲಿ ಖಾಸಗಿ ಫಂಕ್ಷನ್‌ ಹಾಲ್‌ನಲ್ಲಿ ಮದುವೆ ನಡೆದಿದೆ.

ಈ ವೇಳೆ ಬುಸಿನೆಸ್‌‍ಗಾಗಿ 10 ಲಕ್ಷ ಕ್ಯಾಶ್‌ ಹಾಗೂ 100 ಗ್ರಾಂ ಚಿನ್ನ ವರದಕ್ಷಿಣೆಗೆ ಡಿಮ್ಯಾಂಡ್‌ ಮಾಡಿದ್ದಾರೆ. ಮದುವೆ ನಂತರ ಕೊಡುವುದಾಗಿ ಭಾಗ್ಯಲಕ್ಷಿ ಹೆತ್ತವರು ಒಪ್ಪಿದ್ದಾರೆ.ಮದುವೆ ಆದ ನಂತರ ಹಣಕ್ಕಾಗಿ ಭರತ್‌ ಗೌಡ ಪೀಡಿಸಿದ್ದಾನೆ. ತಂದೆ ತಾಯಿಯನ್ನ ಒಪ್ಪಿಸಿದ ಭಾಗ್ಯಲಕ್ಷಿ 8 ಲಕ್ಷ ನೀಡಿ ಕಾರ್‌, ವಾಶಿಂಗ್‌ ಬುಸಿನೆಸ್‌‍ ಹಾಕಿಕೊಟ್ಟಿದ್ದಾರೆ. ಅಲ್ಲದೆ ಕ್ರೆಡಿಟ್‌ ಕಾರ್ಡ್‌ನಿಂದ ಭರತ್‌ ಗೌಡ 1.25 ಲಕ್ಷ ಡ್ರಾ ಮಾಡಿಕೊಂಡಿದ್ದಾನೆ.


ಈ ಮಧ್ಯೆ ಮೊದಲ ಪತ್ನಿ ಮೊನಿಕಾ ಮೆಸೇಜ್‌ ಮಾಡಿ ಭರತ್‌ ಗೌಡ ಮೋಸಗಾರ ಎಂದು ಎಚ್ಚರಿಕೆ ನೀಡಿದಾಗ ನಮ ಸಂಸಾರ ಹಾಳು ಮಾಡುತ್ತಿದ್ದಾಳೆ ನಂಬಬೇಡ ಎಂದು ನಾಡಕವಾಡಿದ್ದಾನೆ.

ನಂತರದ ದಿನಗಳಲ್ಲಿ ಭರತ್‌ ಗೌಡ ಬಣ್ಣ ಬಯಲಾಗಿದೆ. ಮೊನಿಕಾ ಜೊತೆ ನಂಟು ಉಳಿಸಿಕೊಂಡು ಡೈವೋರ್ಸ್‌ ನಾಟಕವಾಡಿ ತನ್ನನ್ನ ವಂಚಿಸಿರುವುದು ಭಾಗ್ಯಲಕ್ಷಿ ಅವರಿಗೆ ಮನದಟ್ಟಾಗಿದೆ.ಈ ಬಗ್ಗೆ ಪ್ರಶ್ನಿಸಿದಾಗ ನಿನ್ನ ಜೊತೆ ದೈಹಿಕ ಸಂಬಂಧ ಬೆಳೆಸಿ ಆಸ್ತಿ ಲಪಟಾಯಿಸುವ ಉದ್ದೇಶದಿಂದ ಮಾಡಿರುವುದಾಗಿ ತಿಳಿಸಿದ್ದಾನೆ. ಅಲ್ಲದೆ ಕೊಲೆ ಮಾಡುವುದಾಗಿ ಹೆದರಿಸಿದ್ದಾನೆ.

ನಯವಂಚಕನ ಮಾತಿಗೆ ಮರುಳಾದ ಭಾಗ್ಯಲಕ್ಷಿ ಇದೀಗ ಗರ್ಭಿಣಿಯಾಗಿದ್ದು ದಿಕ್ಕು ತೋಚದೆ ಠಾಣೆಯ ಮೆಟ್ಟಿಲೇರಿದ್ದಾರೆ. ಸುಳ್ಳು ಹೇಳಿ ವಂಚಿಸಿ ಗರ್ಭಿಣಿ ಮಾಡಿ ಹಣ ಲಪಟಾಯಿಸಿ ಮೋಸ ಮಾಡಿದ ಭರತ್‌ ಗೌಡ, ಸುರೇಶ್‌, ಅಂಕಿತಲತಾ ವಿರುದ್ದ ಕಾನೂನು ಕ್ರಮ ಕೈಗೊಂಡು ನ್ಯಾಯ ದೊರಕಿಸುವಂತೆ ಭಾಗ್ಯಲಕ್ಷಿ ಜಯಲಕ್ಷಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

RELATED ARTICLES

Latest News