ಬೆಂಗಳೂರು,ಸೆ.2- ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಅರಣ್ಯ ಅಪರಾಧ ಪ್ರಕರಣಗಳಲ್ಲಿ ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಅರಣ್ಯ ಇಲಾಖೆಯಲ್ಲಿ ಬರೊಬ್ಬರಿ 5,866 ಪ್ರಕರಣಗಳು ದಾಖಲಾಗಿವೆ. ಮಾತ್ರವಲ್ಲ ಇದುವರೆಗೂ 17 ಸಾವಿರಕ್ಕೂ ಹೆಚ್ಚಿನ ಅರಣ್ಯ ಅಪರಾಧ ಪ್ರಕರಣಗಳು ಇತ್ಯರ್ಥವಾಗದೆ ಬಾಕಿ ಉಳಿದಿರುವುದು ತಲೆನೋವಾಗಿ ಪರಿಣಮಿಸಿದೆ.
ಅರಣ್ಯ ಸಂರಕ್ಷಣೆಗೆ ಧಕ್ಕೆ, ವನ್ಯಜೀವಿಗಳಿಗೆ ಹಾನಿ ಮಾಡುವವರ ವಿರುದ್ದ ಕೇಸ್ ದಾಖಲಿಸಿರುವ ಅರಣ್ಯ ಇಲಾಖೆಯ ಭದ್ರತಾ ಪಡೆಗಳು ನಿರ್ದಾಕ್ಷಿಣ್ಯವಾಗಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸುತ್ತ ಬಂದಿದೆ.ಇಲಾಖೆಯಲ್ಲಿ ಇತ್ಯರ್ಥವಾಗದೆ ಬಾಕಿ ಉಳಿದಿರುವ 17 ಸಾವಿರ ಪ್ರಕರಣಗಳಲ್ಲಿ ಅರಣ್ಯ ಭೂಮಿ ಅತಿಕ್ರಮಣ ಪ್ರಕರಣಗಳೇ ಹೆಚ್ಚು ಇರುವುದು ವಿಶೇಷವಾಗಿದೆ.
ಶ್ರೀಗಂಧ, ಬೀಟೆ, ರಕ್ತ ಚಂದನ ಮರಗಳ ಕಳ್ಳ ಸಾಗಣೆ, ವನ್ಯ ಜೀವಿಗಳಿಗೆ ಸುರಕ್ಷತೆಗೆ ಧಕ್ಕೆಯನ್ನುಂಟು ಮಾಡಿದ ಪ್ರಕರಣಗಳಲ್ಲೂ ಏರಿಕೆ ಕಂಡು ಬಂದಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯ ದಲ್ಲಿ ಪ್ರತಿವರ್ಷ ಸರಾಸರಿ 4,500ರಿಂದ 5 ಸಾವಿರ ಅರಣ್ಯ ಅಪರಾಧ ಪ್ರಕರಣಗಳು ದಾಖಲಾಗುತ್ತಿದೆ. ಅರಣ್ಯ ಭೂಮಿಯನ್ನು ಅತಿಕ್ರಮಿಸಿದ್ದಕ್ಕೆ ದಾಖಲಿಸಲಾದ ಪ್ರಕರಣಗಳ ಸಂಖ್ಯೆ 44,608 ಆದರೆ, 2,840 ಶ್ರೀಗಂಧ ಕಳ್ಳಸಾಗಣೆ, 63 ರಕ್ತಚಂದನ, 1,544 ಬೀಟೆ ಮರ ತುಂಡು ಕಳ್ಳ ಸಾಗಣೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಪ್ರಸಕ್ತ ಸಾಲಿನ ಪ್ರಕರಣಗಳ ಸಂಖ್ಯೆ:
ಅರಣ್ಯ ಭೂಮಿ ಒತ್ತುವರಿ- 1,385
ಶ್ರೀಗಂಧ ಕಳ್ಳಸಾಗಣೆ – 237
ರಕ್ತಚಂದನ ಕಳ್ಳಸಾಗಣೆ – 07
ಬೀಟೆ ಕಳ್ಳಸಾಗಣೆ- 1,326
ವನ್ಯಜೀವಿ ಸಂಬಂಧಿತ ಪ್ರಕರಣ-429
ಇತರೆ- 2,482
ಒಟ್ಟು- 5,866