ಪಾವಗಡ,ಏ.5- ಮಾನಸಿಕ ಅಸ್ವಸ್ಥನೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲ್ಲೂಕಿನ ಕಣಿವೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಹನುಮಂತರಾಯಪ್ಪ (40) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ.
ಕಳೆದ ಐದಾರು ತಿಂಗಳಿನಿಂದ ಮಾನಸಿಕ ಅಸ್ವಸ್ಥನಂತೆ ವರ್ತಿಸುತ್ತಿದ್ದ ಈತ ಹಲವಾರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಈ ಹಿನ್ನೆಲೆ ಕುಟುಂಬಸ್ಥರು ಆತನು ಮನೆಯಿಂದ ಹೊರಗೆ ಹೋಗದಂತೆ ನೋಡಿಕೊಳ್ಳುತ್ತಿದ್ದರು. ಆದರೆ, ನಿನ್ನೆ ಸಂಜೆ ಮನೆಯವರು ಗಮನಿಸದಿರುವ ಸಂದರ್ಭದಲ್ಲಿ ಹನುಮಂತರಾಯಪ್ಪ ಮನೆಯಿಂದ ತಪ್ಪಿಸಿಕೊಂಡು ಚಾಕುವನ್ನು ಕೈಯಲ್ಲಿ ಹಿಡಿದು ಗ್ರಾಮದ ಹೊರವಲಯದ ಮೆಕ್ಕೆಜೋಳ ತೋಟಕ್ಕೆ ತೆರಳಿದ್ದನು.
ಅಲ್ಲಿಯೇ ತನ್ನ ಕತ್ತನ್ನು ಚಾಕುವಿನಿಂದ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ಈ ವೇಳೆ ಗ್ರಾಮಸ್ಥರು ಆತನನ್ನು ತಕ್ಷಣ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗೆ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಘಟನಾ ಸ್ಥಳಕ್ಕೆ ಪಾವಗಡ ಠಾಣೆಯ ಸಿಪಿಐ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.