ಕೊಪ್ಪಳ, ಫೆ.8- ಮೈಕ್ರೋಫೈನಾನ್ಸ್ ಮೇಲೆ ನಿಯಂತ್ರಣ ಸಾಧಿಸಲು ರಾಜ್ಯ ಸರ್ಕಾರಕ್ಕೆ ಅವಕಾಶ ಇಲ್ಲವೆಂಬ ಕಾರಣಕ್ಕೆ ಸುಗ್ರೀವಾಜ್ಞೆ ರೂಪಿಸಲಾಗಿತ್ತು. ರಾಜ್ಯಪಾಲರು ಸ್ಪಷ್ಟನೆ ಕೇಳಿ ವಾಪಾಸ್ ಕಳುಹಿಸಿದ್ದರು, ಸೂಕ್ತ ವಿವರಣೆಯೊಂದಿಗೆ ಮತ್ತೆ ಮಸೂದೆಯನ್ನು ರಾಜಭವನಕ್ಕೆ ರವಾನಿಸಲಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ವಲಯದಲ್ಲಿ ಉತ್ತಮವಾಗಿ ಕೆಲಸ ಮಾಡುವ ಸಂಸ್ಥೆಗಳಿವೆ. ಅದೇ ರೀತಿ ಕೆಟ್ಟದಾಗಿ ಕೆಲಸ ಮಾಡುವ ಸಂಸ್ಥೆಗಳು ಇವೆ. ನಾನ್ ಬ್ಯಾಂಕಿಂಗ್ ಫೈನಾನ್‌್ಸ ಕಂಪನಿಗಳು ಬ್ಯಾಂಕಿಂಗ್ ರೆಸ್ಯೂಲೇಷನ್ ಆ್ಯಕ್ಟ್ ನಲ್ಲಿ ನೋಂದಾವಣೆಯಾಗಿರುತ್ತವೆ. ಅವುಗಳನ್ನು ನಿಯಂತ್ರಿಸಲು ರಾಜ್ಯಸರ್ಕಾರಗಳಿಗೆ ಅಧಿಕಾರ ಇರುವುದಿಲ್ಲ. ನೇರವಾಗಿ ಆರ್ಬಿಐ ನಿಯಂತ್ರಣ ಮಾಡಬೇಕಾಗುತ್ತದೆ ಎಂದರು.
ಮನಿ ಲ್ಯಾಂಡರಿಂಗ್ ಆ್ಯಕ್ಟ್ ಅನ್ನು ಸಹಕಾರ ಇಲಾಖೆ ಬಳಕೆ ಮಾಡಿ ಅಧಿಕ ಬಡ್ಡಿ ವಸೂಲಿ ಮಾಡುವ ಸಂಸ್ಥೆಗಳ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವಿದೆ. 2004ರಲ್ಲಿ ಕಾಯ್ದೆಗೆ ತಿದ್ದುಪಡಿ ಮೂಲಕ ಇದಕ್ಕೆ ಅವಕಾಶ ಮಾಡಿಕೊಡಲಾಗಿದೆ. ಹಣಕಾಸು ಸಂಸ್ಥೆಗಳು ಸಾಲ ನೀಡಿ, ವಸೂಲಿಯ ಪ್ರಕ್ರಿಯೆಯನ್ನು ಹೊರಗುತ್ತಿಗೆಗೆ ನೀಡುತ್ತಿವೆ.
ಸಾಲ ವಸೂಲಿ ಮಾಡುವವರು ದಬ್ಬಾಳಿಕೆ ಮಾಡುತ್ತಿದ್ದಾರೆ. ಇದರಿಂದ ಮರ್ಯಾದೆಗೆ ಅಂಜಿ ದಿನನಿತ್ಯ ಆತಹತ್ಯೆಗಳು ವರದಿಯಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯಸರ್ಕಾರ ಸುಗ್ರೀವಾಜ್ಞೆ ರೂಪಿಸಲಾಗಿತ್ತು.
ರಾಜ್ಯಪಾಲರು ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಯನ್ನು ತಿರಸ್ಕರಿಸಲಿಲ್ಲ, ಇದರಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಿದೆ. ಹೀಗಿದ್ದರೆ ಸಾಲ ನೀಡಲು ಯಾರು ಮುಂದೆ ಬರುತ್ತಾರೆ, ಇದರಿಂದ ಬಡ ಜನರಿಗೆ ತೊಂದರೆ ಆಗುತ್ತದೆ ಎಂದು ಕೆಲ ಸ್ಪಷ್ಟನೆ ಕೇಳಿದ್ದರು. ಅದಕ್ಕೆ ಸೂಕ್ತ ವಿವರಣೆಯೊಂದಿಗೆ ಮತ್ತೆ ರಾಜಭವನಕ್ಕೆ ಎರಡನೇ ಬಾರಿ ರವಾನಿಸಲಾಗಿದೆ. ರಾಜ್ಯಪಾಲರ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದು ನೋಡುವುದಾಗಿ ಹೇಳಿದರು.
ಚಿನ್ನಾಭರಣದ ಸಾಲವನ್ನು ಕೃಷಿ ಸಾಲ ಎಂದು ಪರಿಗಣಿಸಲಾಗಿದೆ. ಇದನ್ನು ಆಧರಿಸಿ ಕೇಂದ್ರ ಹಣಕಾಸು ಇಲಾಖೆ ಮತ್ತು ನಬಾರ್ಡ್ ಕೃಷಿ ವಲಯಕ್ಕೆ ಈಗಾಗಲೇ ಹೆಚ್ಚಿನ ಸಾಲ ನೀಡಲಾಗಿದೆ ಎಂದು ಪರಿಭಾವಿಸಿ ನಬಾರ್ಡ್ ನಿಂದ ರಾಜ್ಯಕ್ಕೆ ನೀಡಲಾಗುತ್ತಿದ್ದ ಸಾಲದ ಪ್ರಮಾಣವನ್ನು ಕಡಿತ ಮಾಡಲಾಗಿದೆ. ಇದರ ಪರಿಣಾಮ ಕೃಷಿಕರಿಗೆ ಬ್ಯಾಂಕ್ ಗಳಿಂದ ಸಾಲ ಸಿಗುತ್ತಿಲ್ಲ. ಖಾಸಗಿ ಫೈನಾನ್‌್ಸ ಸಂಸ್ಥೆಗಳ ಮೊರೆ ಹೋಗುತ್ತಿದ್ದಾರೆ ಎಂದು ವಿವರಿಸಿದರು.
ಡಿಸಿಸಿ ಬ್ಯಾಂಕುಗಳು ನಬಾರ್ಡ್ ಮತ್ತು ಅಪೆಕ್‌್ಸಬ್ಯಾಂಕಗಳಿಂದ ಸಾಲ ಪಡೆದು ಸಾಲ ನೀಡುತ್ತವೆ. ಇದಕ್ಕೆ ಸರ್ಕಾರದ ಅನುದಾನ ಇರುವುದಿಲ್ಲ. ಸಾಲದ ಮೊತ್ತವನ್ನು ಠೇವಣಿ ಹಣದಿಂದ ಕೊಡಲಾಗುತ್ತಿದ್ದು, ಹಣಕಾಸಿನ ಲಭ್ಯತೆಯಿಂದಾಗಿ ಸಾಲ ನೀಡುವುದರಲ್ಲಿ ಸಮಸ್ಯೆ ಆಗುತ್ತಿದೆ ಎಂದರು.
ಗೃಹಲಕ್ಷ್ಮಿ ಯೋಜನೆಯಡಿ ಹಣ ಸಂದಾಯವಾಗಲಿದೆ. ಇದರಲ್ಲಿ ಯಾವುದೇ ರೀತಿಯ ಗೊಂದಲವಿಲ್ಲ. ತಾಂತ್ರಿಕ ಕಾರಣಗಳಿಗಾಗಿ ಒಂದು ತಿಂಗಳು ತಡ ಆಗಿರಬಹುದು. ಆದರೆ ಗ್ಯಾರಂಟಿ ಯೋಜನೆಗಳ ಪೂರ್ಣ ಹಣ ಫಲಾನುಭವಿಗಳಿಗೆ ಸಂದಾಯವಾಗುತ್ತದೆ. ಯಾವುದೇ ಯೋಜನೆಗಳನ್ನು ನಿಲ್ಲುಸುವುದಿಲ್ಲ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಜನಪರವಾದ ಕಾಂಗ್ರೆಸ್ ಸರ್ಕಾರ ನಡೆಯುತ್ತಿದ್ದು, ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಯಾವುದೇ ಲೋಪವಿಲ್ಲದಂತೆ ಬೆಳಗಾವಿಯ ಕಾಂಗ್ರೆಸ್ ಮಹಾಧಿವೇಶನ ಸೇರಿದಂತೆ ಎಲ್ಲಾ ಕಾರ್ಯಕ್ರಮಗಳೂ ನಡೆಯುತ್ತಿವೆ. ಪಕ್ಷದ ಅಧ್ಯಕ್ಷ ಸ್ಥಾನ ಸೇರಿದಂತೆ ಯಾವುದೇ ಬದಲಾವಣೆಯಾಗಬೇಕಾದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸದ್ಯಕ್ಕೆ ಅದರ ಬಗ್ಗೆ ನಾವು ಚರ್ಚೆ ಮಾಡುವುದಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗಲೇ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಚರ್ಚೆಯಾಗುತ್ತಿದೆ ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನಲ್ಲಿ ಪರಮೋಚ್ಚ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಸಚಿವರೇ ನಿಮ ಕೆಲಸ ನೀವು ಮಾಡಿ. ರಾಜಕೀಯದ ಬಗ್ಗೆ ಮಾತನಾಡಬೇಡಿ ಎಂದು ಸೂಚನೆ ನೀಡಿದ್ದಾರೆ. ಹೀಗಾಗಿ ನಾವ್ಯಾರೂ ಮಾತನಾಡುವುದಿಲ್ಲ. ಎಲ್ಲೋ ನಾಲ್ಕು ಜನ ಸಭೆ ಸೇರಿದಾಕ್ಷಣ ಪ್ರತ್ಯೇಕ ಸಭೆಯೆಂದು ಭಾವಿಸಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ ಹಿಟ್ನಾಳ್, ಮಾಜಿ ಸಂಸದ ಸಂಗಣ್ಣ ಕರಡಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಾಟನ್ ಪಾಷ, ನಗರಸಭೆ ಸ್ಥಾಯಿ ಸಮಿತಿ ಸದ್ಯಸ್ಯ ಅಕ್ಬರ್ ಪಲ್ಟನ್, ಕೃಷ್ಣ ಇಟ್ಟಂಗಿ, ಸಲೀಮ್ ಅಳವಂಡಿ ಸೇರಿದಂತೆ ಮುಂತಾದ ಮುಖಂಡರು ಉಪಸ್ಥಿತರಿದ್ದರು.