ಬೆಂಗಳೂರು,ಸೆ.11- ಕಲಬುರಗಿ ಜಿಲ್ಲೆಯ ಅಳಂದ ತಾಲ್ಲೂಕಿನ ಆಲೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಜಾವಗಲ್ ಬಳಿ ಇಂದು ಬೆಳಗ್ಗೆ ಲಘು ಭೂಕಂಪನ ಸಂಭವಿಸಿದೆ. ಇಂದು ಬೆಳಗ್ಗೆ 8.17ರಲ್ಲಿ ಜಾವಗಲ್ ಗ್ರಾಮದ ಆಗ್ನೇಯ ಭಾಗದ ಅರ್ಧ ಕಿ.ಮೀ ದೂರದಲ್ಲಿ 2.3 ಮ್ಯಾಗ್ನಿಟ್ಯೂಡ್‌ನಷ್ಟು ಲಘು ಭೂಕಂಪನವಾಗಿದೆ.
ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.ಅಳಂದ ತಾಲ್ಲೂಕಿನ ಸಿರಾಚಂದ್, ಚಿಂಚನಸೂರು ಗ್ರಾಮಪಂಚಾಯ್ತಿ ಹಾಗೂ ಕಲಬುರಗಿ ನಗರದ ಕೆಲವೆಡೆ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಮಿ ಕಂಪಿಸಿರುವುದು ಭೂಕಂಪನ ಮಾಪಕದಲ್ಲಿ ದಾಖಲಾಗಿದೆ. ಇದು ಲಘು ಕಂಪನವಾಗಿರುವುದರಿಂದ ಸ್ಥಳೀಯವಾಗಿ ಯಾವುದೇ ರೀತಿಯ ಹಾನಿ ಉಂಟಾಗಿಲ್ಲ ಎಂದು ತಿಳಿಸಿದೆ.
ಭೂಕಂಪನದ ಕೇಂದ್ರ ಬಿಂದುವಿನಿಂದ ಸುಮಾರು 20ರಿಂದ 25 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪನಿಸಿದೆ. ಇದು ಲಘು ಕಂಪನವಾಗಿರುವುದರಿಂದ ಜನರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.