ಟೆಹ್ರಾನ್,ನ.11- ಇರಾನ್ ನೊಂದಿಗಿನ ಪಾಕಿಸ್ತಾನದ ಗಡಿಯಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಐವರು ಇರಾನಿನ ಯೋಧರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.ಮತರು ಅರೆಸೈನಿಕ ರೆವಲ್ಯೂಷನರಿ ಗಾರ್ಡ್ನ ಸ್ವಯಂಸೇವಕ ಬಸಿಜ್ ಪಡೆಯ ಬಲೂಚ್ ಜನಾಂಗೀಯ ಸದಸ್ಯರು ಎಂದು ಗುರುತಿಸಲಾಗಿದೆ.
ಸಿಸ್ತಾನ್ ಮತ್ತು ಬಲೂಚಿಸ್ತಾನ್ ಪ್ರಾಂತ್ಯದ ಸರವನ್ ನಗರದಲ್ಲಿ ಈ ಘಟನೆ ನಡೆದಿದೆ.ಸರವನ್ ನಗರ ರಾಜಧಾನಿ ಟೆಹ್ರಾನ್ ನಿಂದ ಆಗ್ನೇಯಕ್ಕೆ ಸುಮಾರು 1,400 ಕಿಲೋಮೀಟರ್ ದೂರದಲ್ಲಿದೆ. ಈ ದಾಳಿಯ ಹೊಣೆಯನ್ನು ಯಾವುದೇ ಗುಂಪು ತಕ್ಷಣವೇ ಹೊತ್ತುಕೊಂಡಿಲ್ಲ.
ರೆವಲ್ಯೂಷನರಿ ಗಾರ್ಡ್ ಪಡೆಗಳು ಮಿಲಿಟರಿ ಕಾರ್ಯಾಚರಣೆಯಲ್ಲಿ ಮೂವರು ಭಯೋತ್ಪಾದಕರನ್ನು ಕೊಂದಿವೆ ಮತ್ತು ಇತರ ಒಂಬತ್ತು ಜನರನ್ನು ಬಂಧಿಸಿವೆ ಎಂದು ರಾಜ್ಯ ಟಿವಿ ವರದಿ ಮಾಡಿದೆ. ಶಂಕಿತರು ಯಾವ ಗುಂಪಿಗೆ ಸೇರಿದವರು ಎಂದು ವರದಿಯಲ್ಲಿ ನಿರ್ದಿಷ್ಟಪಡಿಸಲಾಗಿಲ್ಲ. ಕಳೆದ ತಿಂಗಳು, ಅಪರಿಚಿತ ಬಂದೂಕುಧಾರಿಗಳು ಪ್ರಾಂತ್ಯದ ರೆವಲ್ಯೂಷನರಿ ಗಾರ್ಡ್ ಮುಖ್ಯಸ್ಥ ಸೇರಿದಂತೆ ನಾಲ್ವರನ್ನು ಕೊಂದಿದ್ದರು.
ಸೆಪ್ಟೆಂಬರ್ನಲ್ಲಿ ಬಂದೂಕುಧಾರಿಗಳು ಸಿಸ್ತಾನ್ ಮತ್ತು ಬಲೂಚಿಸ್ತಾನ ಪ್ರಾಂತ್ಯದಲ್ಲಿ ಎರಡು ಪ್ರತ್ಯೇಕ ದಾಳಿಗಳಲ್ಲಿ ನಾಲ್ವರು ಗಡಿ ಕಾವಲುಗಾರರನ್ನು ಕೊಂದಿದ್ದರು. ಬಲೂಚ್ ಜನಾಂಗೀಯ ಅಲ್ಪಸಂಖ್ಯಾತರಿಗೆ ಹೆಚ್ಚಿನ ಹಕ್ಕುಗಳನ್ನು ಬಯಸುವ ಉಗ್ರಗಾಮಿ ಗುಂಪು ಜೈಶ್ ಅಲ್-ಅದ್‌್ಲ ದಾಳಿಯ ಹೊಣೆ ಹೊತ್ತಿತ್ತು.