ಹುಳಿಯಾರು, ಅ.19- ಕಳೆದ ಒಂದು ವಾರದಿಂದ ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಾಲ್ಲೂಕಿನ ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ರಾಗಿ ಬೆಳೆಗೆ ಜೀವಕಳೆ ಬಂದಿದ್ದು, ಈ ಬಾರಿ ಉತ್ತಮ ಇಳುವರಿಯಾಗುವ ನಿರೀಕ್ಷೆಯಲ್ಲಿ ರೈತರಿದ್ದು, ಅವರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷ ಇಡೀ ತಾಲೂಕಿನಲ್ಲಿ ಮಳೆಯ ಕೊರತೆಯಾಗಿ ಬರಗಾಲ ಆವರಿಸಿತ್ತು. ತಾಲೂಕಿನ ವಾಣಿಜ್ಯ ಬೆಳೆಗಳಾದ ಹೆಸರು ಮತ್ತು ರಾಗಿ ಎರಡೂ ಕೈ ಕೊಟ್ಟಿತ್ತು. ಈ ವರ್ಷವೂ ಪೂರ್ವ ಮುಂಗಾರು ಒಳ್ಳೆ ಮಳೆಯಾಗಿದ್ದರೂ ತಡವಾಗಿ ಬಿದ್ದ ಪರಿಣಾಮ ಹೆಸರು ಬಿತ್ತನೆಗೆ ಹಿನ್ನಡೆಯಾಗಿತ್ತು. ಆದರೆ ನಂತರದ ದಿನಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದ ಪರಿಣಾಮ ರೈತರಲ್ಲಿ ಭರವಸೆ ಮೂಡಿಸಿತ್ತು. ಪರಿಣಾಮ ದಾಖಲೆಯ 31,500 ಹೆಕ್ಟರ್ ರಾಗಿ ಬಿತ್ತನೆ ಮಾಡಿ ಉತ್ತಮ ಇಳುವರಿಯ ನಿರೀಕ್ಷೆಯಲ್ಲಿ ತಾಲೂಕಿನ ರೈತರಿದ್ದರು.
ಉತ್ತಮ ಮಳೆಯಾಗುವ ನಿರೀಕ್ಷೆಯಲ್ಲಿ ಸಾಲ ಮಾಡಿ ತಮ್ಮ ಹೊಲಗಳಲ್ಲಿ ಬಿತ್ತನೆ ಮಾಡಿದ್ದರು. ಬಿದ್ದ ಸ್ವಲ್ಪ ಮಳೆಯಾಗಿದ್ದರಿಂದಾಗಿ ಉತ್ತಮ ಫಸಲು ಬರಲಿ ಎಂಬ ಕಾರಣಕ್ಕಾಗಿ ಕಳೆಕಿತ್ತು ಗೊಬ್ಬರ ಹಾಕಿದ್ದರು. ಆ ಬಳಿಕ ಮಳೆಯೇ ಬಾರದ ಕಾರಣ ರೈತರು ಚಿಂತಾಕ್ರಾಂತರಾಗಿದ್ದರು. ಬಾಣಲಿಯಿಂದ ಬೆಂಕಿಗೆ ಬಿದ್ದಂಗೆ ಎನ್ನುವಂತೆ ಮಳೆ ಇಲ್ಲದೆ ಕಂಗಾಲಾಗಿರುವ ರೈತರಿಗೆ ಉಷ್ಣಾಂಶ ಸಹ ಏರಿ ಬಿಸಿಲಿನ ತಾಪಕ್ಕೆ ರಾಗಿ ಪೈರು ಒಣಗಲಾರಂಭಿಸಿ ಬೆಳೆ ಹಾನಿಯ ಭೀತಿ ಎದುರಾಗಿ ರೈತರು ಮಳೆಗಾಗಿ ಮುಗಿಲು ನೋಡುವಂತಾಗಿತ್ತು.
ಕೊಳವೆಬಾವಿಯಲ್ಲಿ ಹೆಚ್ಚು ನೀರು ಇರುವ ಕೆಲವು ರೈತರು ರಾಗಿ ಬೆಳೆಗೆ ತುಂತುರು ನೀರಾವರಿ ಮೂಲಕ ನೀರು ಹಾಯಿಸಿ ರಾಗಿ ಪೈರು ರಕ್ಷಣೆ ಮಾಡಿಕೊಂಡಿದ್ದರು. ಇನ್ನೂ ಕೆಲವರು ಅಕ್ಕಪಕ್ಕದ ತೋಟದವರಿಂದ ಇಂತಿಷ್ಟು ರಾಗಿ ಕೊಡುವ ಒಪ್ಪಂದ ಮಾಡಿಕೊಂಡು ನೀರು ಪಡೆದು ರಾಗಿ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಯಾವುದೇ ನೀರಿನ ವ್ಯವಸ್ಥೆಯಿಲ್ಲದ ರೈತರು ದೇವರ ಮೇಲೆ ಭಾರ ಹಾಕಿ ಕೃಪೆ ತೋರು ವರುಣ ಎಂದು ಕೈ ಮುಗಿದು ಪ್ರಾರ್ಥಿಸುತ್ತಿದ್ದರು. ರೈತರ ಪ್ರಾರ್ಥನೆ ವರುಣನಿಗೆ ಮುಟ್ಟಿದ ಪರಿಣಾಮವೋ ಏನೋ ಕಳೆದ 12 ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಅದರಲ್ಲೂ ದಿನವಿಡೀ ಸುರಿದ ಜಡಿಮಳೆ ರಾಗಿ ಬೆಳೆಗೆ ಮರುಜೀವ ನೀಡಿ ರೈತರು ನಿಟ್ಟುಸಿರು ಬಿಡುವಂತೆ ಮಾಡಿದೆ.
ಚಿಕ್ಕನಾಯಕನಹಳ್ಳಿ ತಾಲೂಕು ಮಳೆಯಾಶ್ರಿತ ರಾಗಿ ಬೆಳೆಗಾರರೇ ಹೆಚ್ಚಾಗಿದ್ದಾರೆ. ಮಳೆಯಾದರೆ ಮಾತ್ರ ಬೆಳೆ ಎಂಬ ಪರಿಸ್ಥಿತಿಯಿದೆ. ಮಳೆ ನಂಬಿ ಬಿತ್ತಿದ್ದ ರಾಗಿ ತೆನೆ ಮೂಡುವ ಹಂತದಲ್ಲಿ ಮಳೆ ಇಲ್ಲದಾಗಿದ್ದು ರೈತರು ಮುಗಿಲು ನೋಡುವಂತಾಗಿತ್ತು. ಬಿತ್ತಿದ್ದ ಬೀಜವೂ ದಕ್ಕಲಾರದ ಸ್ಥಿತಿಯಿತ್ತು. ಸಾಲ ಮಾಡಿಕೊಂಡಿದ್ದ ರೈತರು ಚಿಂತಾಕ್ರಾಂತರಾಗಿದ್ದರು. ಈಗ ಸುರಿದ ಮಳೆಯಿಂದ ರಾಗಿ ಸೇರಿದಂತೆ ತೊಗರಿ, ಸಾಮೆ, ಹುರುಳಿ ಬೆಳೆಗೆ ಹೆಚ್ಚು ಅನುಕೂಲವಾಗಿದೆ. ಇನ್ನೊಂದೆರಡು ಮಳೆ ಬಿದ್ದರೆ ಈ ವರ್ಷ ತಾಲೂಕಿನಲ್ಲಿ ದಾಖಲೆಯ ಇಳುವರಿ ಬರುವ ಸಾಧ್ಯತೆ ಇದೆ ಎಂದು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕರಿಯಣ್ಣ ತಿಳಿಸಿದ್ದಾರೆ.
ತಾಲೂಕಿನಲ್ಲಿ ಈ ವರ್ಷ 31,500 ಹೆಕ್ಟೆರ್ ರಾಗಿ, 480 ಹೆಕ್ಟೇರ್ ತೊಗರಿ, 420 ಹೆಕ್ಟೇರ್ ಅವರೆ, 720 ಹೆಕ್ಟೇರ್ ಅಲಸಂದೆ ಬಿತ್ತಲಾಗಿತ್ತು. ಕಳೆದ ತಿಂಗಳು ಮಳೆ ಇಲ್ಲದೆ ಬೆಳೆ ಬಾಡುತ್ತಿತ್ತು. ಈಗ ತಾಲೂಕಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಎಕರೆಗೆ 6 ಕ್ವಿಂಟಾಲ್ ರಾಗಿ ಇಳುವರಿ ಬಂದೇ ಬರುತ್ತದೆ. ಹತ್ತದಿನೈದು ದಿನ ಬಿಟ್ಟು ಮತ್ತೊಮ್ಮೆ ಮಳೆ ಬಂದರಂತು 6 ಕ್ವಿಂಟಾಲ್‌ಗಿಂತಲೂ ಹೆಚ್ಚು ಇಳುವರಿ ಬರುತ್ತದೆ. ಸಾಮೆ, ತೊಗರಿ, ಅವರೆಗೂ ಅನುಕೂಲವಾಗಲಿದೆ. ಹೂವು ಕಟ್ಟುವ ಹಂತದಲ್ಲಿ ಕೀಟ ಬಾದೆ ಬಂದರೆ ಇಲಾಖೆಯನ್ನು ಸಂಪರ್ಕಿಸಿದರೆ ಔಷಧಿ ಕೊಡಲಾಗುವುದು ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಶಿವರಾಜ್‌ಕುಮಾರ್.