ಬೆಂಗಳೂರು,ನ.3- ಬರ ಅಧ್ಯಯನ ಪ್ರವಾಸ ಎಂಬ ಹೊಸ ನಾಟಕ ಶುರುಮಾಡಿದ್ದಾರೆ. ಈ ಪ್ರವಾಸದಿಂದ ಬಿಜೆಪಿ ನಾಯಕರು ಏನು ಕಡಿದು ಕಟ್ಟೆ ಹಾಕಲಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವ್ಯಂಗ್ಯವಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಈಗಾಗಲೇ ಕೇಂದ್ರದ ಅಧಿಕಾರಿಗಳ ತಂಡ ರಾಜ್ಯಕ್ಕೆ ಬಂದು ಬರ ಅಧ್ಯಯನ ಮಾಡಿ ಹೋಗಿದೆ. ಕೇಂದ್ರದ ತಂಡ ರಾಜ್ಯಕ್ಕೆ ಬಂದು ಹೋದದಷ್ಟೆ ಗೊತ್ತು. ಆದರೆ ಈವರೆಗೂ ಬರದ ಬಗ್ಗೆ ಕೇಂದ್ರದ ತಂಡ ಏನು ವರದಿ ನೀಡಿದೆ ಎಂಬ ಸುಳಿವೇ ಇಲ್ಲ ಎಂದಿದ್ದಾರೆ.
ರಾಜ್ಯ ಬಿಜೆಪಿ ನಾಯಕರು ಇಲ್ಲಿ ಬರ ಪ್ರವಾಸದ ನಾಟಕ ಮಾಡುವ ಬದಲು ಕೇಂದ್ರ ಸರ್ಕಾರಕ್ಕೆ ಅಧಿಕಾರಿಗಳ ವರದಿ ಆಧರಿಸಿ ಪರಿಹಾರ ಕೊಡಲು ಒತ್ತಾಯಿಸಬಹುದಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಡಿಎಂಕೆ ಸಚಿವ ವೇಲು ಮನೆ ಮೇಲೆ ಐಟಿ ದಾಳಿ
ಬಿಜೆಪಿ ನಾಯಕರು ಬರ ಅಧ್ಯಯನ ಪ್ರವಾಸ ಮಾಡಿ ಏನು ವರದಿ ನೀಡಲಿದ್ದಾರೆ? ರಾಜ್ಯದಲ್ಲಿ ಬರ ಇದೆ ಎಂದು ವರದಿ ನೀಡುವರೋ ಅಥವಾ ಇಲ್ಲ ಎಂದು ವರದಿ ನೀಡುವರೋ? ವಿರೋಧ ಪಕ್ಷದ ನಾಯಕರೇನು ಜನಪರ ಕಾಳಜಿಯಿಂದ ಈ ಅಧ್ಯಯನ ಪ್ರವಾಸ ಮಾಡುತ್ತಿಲ್ಲ. ಬದಲಿಗೆ ಕಳೆದು ಹೋಗಿರುವ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರವಾಸದ ಪ್ರಹಸನ ಮಾಡುತ್ತಿದ್ದಾರಷ್ಟೆ ಎಂದು ದಿನೇಶ್ ಗುಂಡುರಾವ್ ಕಾಲೆಳೆದಿದ್ದಾರೆ.
ನಿಯಮದ ಅನುಸಾರ ಕೇಂದ್ರ ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಅದರೆ ಇಲ್ಲಿಯವರೆಗೂ ಪರಿಹಾರದ ಹಣ ಬಿಡುಗಡೆಯಾಗಿಲ್ಲ. ಯಾಕೆಂದರೆ ಮೋದಿ ಸರ್ಕಾರಕ್ಕೆ ಕರ್ನಾಟಕ ನೆನಪಾಗುವುದು ಚುನಾವಣಾ ಸಂದರ್ಭದಲ್ಲಿ ಮಾತ್ರ ಎಂದು ಲೇವಡಿ ಮಾಡಿದ್ದಾರೆ.
ಕರ್ನಾಟಕ ಸಂಕಷ್ಟದಲ್ಲಿದ್ದಾಗಲೆಲ್ಲಾ ಕೇಂದ್ರ ಕೈ ಕೊಡುವುದು ಸಾಮಾನ್ಯ ಸಂಗತಿ. ಬಿಜೆಪಿ ನಾಯಕರು ಬರ ಅಧ್ಯಯನಕ್ಕಾಗಿ ರಾಜ್ಯ ಪ್ರವಾಸ ಮಾಡುವುದು ಬಿಟ್ಟು ದೆಹಲಿ ಪ್ರವಾಸ ಮಾಡಲಿ. ಆಗಲಾದರೂ ಕೇಂದ್ರ ಪರಿಹಾರ ಹಣ ಬಿಡುಗಡೆ ಮಾಡಬಹುದೇನೋ ಎಂದು ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದಾರೆ.