Thursday, December 12, 2024
Homeರಾಜ್ಯಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಹೇಳಿ : ಪ್ರಿಯಾಂಕ್ ಖರ್ಗೆ

ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಹೇಳಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು,ಫೆ.4- ಬಿಜೆಪಿಯವರು ಜೈ ಶ್ರೀರಾಮ್ ಹೇಳುವಷ್ಟೇ ಗಟ್ಟಿಯಾಗಿ ಜೈ ಕರ್ನಾಟಕ ಎಂದು ಹೇಳಲಿ. ರಾಜ್ಯದಿಂದ ಆಯ್ಕೆಯಾಗಿರುವ 25 ಮಂದಿ ಸಂಸದರು ನಾಡಿನ ಪರವಾಗಿ ಸಂಸತ್‍ನ ಒಳಗೆ ದನಿ ಏರಿಸಿ ಮಾತನಾಡಲಿ. ರಾಜ್ಯ ಸರ್ಕಾರ ಅವರ ಬೆನ್ನಿಗಿದೆ ಭಯ ಬೇಡ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೆ.7ರಂದು ದೆಹಲಿಯಲ್ಲಿ ನಾಡಿನ ಪರವಾಗಿ ಕಾಂಗ್ರೆಸ್ ನಡೆಸಲಿರುವ ಪ್ರತಿಭಟನೆಗೆ ಬಿಜೆಪಿಯವರು ಬೆಂಬಲ ನೀಡಬೇಕು. ನಿಜವಾಗಿಯೂ ಅವರಿಗೆ ಕನ್ನಡಿಗರು, ಕರ್ನಾಟಕದ ಬಗ್ಗೆ ಕಾಳಜಿ ಇದುದ್ದೇ ಆದರೆ ನಮ್ಮ ಜತೆ ಕೈ ಜೋಡಿಸಲಿ ಎಂದು ಸವಾಲು ಹಾಕಿದರು.

ನಾವು ಸಂಸತ್‍ನ ಹೊರಗೆ ಪ್ರತಿಭಟನೆ ಮಾಡುತ್ತೇವೆ. ರಾಜ್ಯದ ಸಂಸದರು, ರಾಜ್ಯಸಭಾ ಸದಸ್ಯರು, ಸಂಸತ್ ಒಳಗೆ ದನಿ ಎತ್ತಲಿ. ಅವರಿಗೆ ಯಾವುದೇ ಭಯ ಬೇಡ. ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ನಮ್ಮ ಸಂಸದರ ಬೆನ್ನಿಗೆ ನಿಲ್ಲಲಿದೆ. ಮೋದಿಯ ಭಯದಿಂದಾಗಿ ಮೌನವಾಗಿದ್ದು, ರಾಜ್ಯಕ್ಕೆ ಅನ್ಯಾಯ ಮಾಡಬೇಡಿ ಎಂದು ಹೇಳಿದರು.

ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ನಮಗೆ 44 ಸಾವಿರ ಕೋಟಿ ನೀಡಿದರೆ ಉತ್ತರಪ್ರದೇಶಕ್ಕೆ 2.18 ಲಕ್ಷ ಕೋಟಿ, ಮಧ್ಯಪ್ರದೇಶ, ಬಿಹಾರಕ್ಕೆ 2 ಲಕ್ಷ ಕೋಟಿ ರೂ. ನೀಡಲಾಗಿದೆ. ಇದು ಅನ್ಯಾಯವಲ್ಲವೇ? ಬರ ಬಾತ ಪ್ರದೇಶಗಳಿಗೆ ನಾವು ಕೇಳಿದ್ದು ಬರೀ 18 ಸಾವಿರ ಕೋಟಿ ರೂಪಾಯಿ. ಅದನ್ನೂ ನೀಡುತ್ತಿಲ್ಲ. ಉದ್ಯೋಗ ಖಾತ್ರಿ ಯೋಜನೆ ಮಾನವ ದಿನಗಳ ಪ್ರಮಾಣವನ್ನು 100ರಿಂದ 150 ದಿನಕ್ಕೆ ಹೆಚ್ಚಿಸುವಂತೆ ಮನವಿ ಮಾಡಿದ್ದೇವೆ. ನಾಲೈದು ಬಾರಿ ದೆಹಲಿಗೆ ಹೋಗಿ ಸಚಿವರ ಕಚೇರಿ ಬಾಗಿಲು ಕಾದಿದ್ದಾಗಿದೆ. ಯಾವುದೂ ಪ್ರಯೋಜನವಾಗಿಲ್ಲ ಎಂದರು.

ದಕ್ಷಿಣ ಭಾರತದ ರಾಜ್ಯಗಳು ಬಿಜೆಪಿಗೆ ಸಂಕಟವಾಗಿವೆ : ಡಿಸಿಎಂ ಡಿಕೆಶಿ

ಬಿಜೆಪಿಯವರು ರಾಜ್ಯದಲ್ಲಿ ಯಾವ ಕಾರಣಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಡಿಸೆಂಬರ್‍ವರೆಗೆ ಐಟಿ ರಫ್ತಿನಲ್ಲಿ ಬೆಂಗಳೂರಿನಿಂದ ಬಂದ ಆದಾಯ 3.29 ಲಕ್ಷ ಕೋಟಿ. ಇದರಲ್ಲಿ ಒಂದು ರೂಪಾಯಿ ಕೂಡ ರಾಜ್ಯಕ್ಕೆ ವಾಪಸ್ ಕೊಟ್ಟಿಲ್ಲ. ಹೋಗಲಿ ಈ ಹಣವನ್ನು ಉತ್ತರ ಭಾರತದ ರಾಜ್ಯಗಳಿಗೆ ಕೊಟ್ಟು ಶಾಲಾಕಾಲೇಜು, ಆಸ್ಪತ್ರೆಯಂತಹ ಜನಪರ ಕೆಲಸಗಳನ್ನಾದರೂ ಮಾಡುತ್ತಾರೆಯೇ ಎಂದರೆ ಅದು ಇಲ್ಲ. ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದರು.

ಮೋದಿ ಗ್ಯಾರಂಟಿ ಎಂಬ ಪ್ರಚಾರದ ವಿರುದ್ಧ ಕಡಿಕಾರಿದ ಪ್ರಿಯಾಂಕ್ ಖರ್ಗೆ, ಜಲಜೀವನ್ ಮಿಷನ್ ಸೇರಿದಂತೆ ಕೇಂದ್ರದ ಎಲ್ಲ ಯೋಜನೆಗಳಲ್ಲೂ ರಾಜ್ಯದ್ದು ಶೇ.50ರಷ್ಟು ಪಾಲಿದೆ. ಆದರೂ ಮೋದಿ ಗ್ಯಾರಂಟಿ ಎಂದು ಬಿಂಬಿಸಿಕೊಳ್ಳುತ್ತಾರೆ ಇವರ ಪ್ರಚಾರ ಮಾತ್ರ ಶೇ.100ರಷ್ಟು. ಪ್ರತಿ ಯೋಜನೆಯಲ್ಲೂ ಕನ್ನಡಿಗರ ಬೆವರಿದೆ ಎಂದು ಹೇಳಿದರು.

ಮಂಡ್ಯದ ಕೆರಗೋಡಿನಲ್ಲಿ ರಾಷ್ಟ್ರಧ್ವಜ ಹಾರಿಸಿರುವುದರಲ್ಲಿ ತಪ್ಪೇನಿದೆ? ಬಿಜೆಪಿಯವರು ಕದ್ದು ಮುಚ್ಚಿ ನಾಟಕ ಆಡುವುದರ ಬದಲಾಗಿ ಬಹಿರಂಗವಾಗಿ ನಮಗೆ ರಾಷ್ಟ್ರ ಧ್ವಜದ ಮೇಲೆ ಗೌರವವಿಲ್ಲ. ಭಗವಧ್ವಜವೇ ಬೇಕು ಎಂದು ಘೋಷಣೆ ಮಾಡಿಕೊಳ್ಳಲಿ. ಸ್ವತಂತ್ರ ಬಂದಾಗ 1947ರಲ್ಲಿ ಆರ್‍ಎಸ್‍ಎಸ್ ಮುಖವಾಣಿ ಆರ್ಗನೈಸರ್‍ನಲ್ಲಿ ತ್ರಿವರ್ಣ ಧ್ವಜ ಅಪಶಕುನ ಎಂದು ಸಂಪಾದಕೀಯ ಬರೆಯಲಾಗಿತ್ತು.

ಮಾಜಿ ಸಚಿವ ಈಶ್ವರಪ್ಪ ಅವರು ನಮಗೆ ರಾಷ್ಟ್ರ ಧ್ವಜಗಿಂತಲೂ ಭಗವಧ್ವಜವೇ ಮುಖ್ಯ ಎಂದು ಈ ಹಿಂದೆ ಹೇಳಿದ್ದರು. ಈಗಲೂ ಅದೇ ವಾದವನ್ನು ಬಹಿರಂಗವಾಗಿ ಹೇಳಿ ಕೆರಗೋಡಿನ ಧ್ವಜ ಪ್ರಕರಣದಲ್ಲಿ ಪ್ರತಿಭಟನೆ ಮಾಡಲಿ ಎಂದು ಸವಾಲು ಹಾಕಿದರು.

ನಾಳೆ ಜೆಡಿಎಸ್ ಕೋರಕಮಿಟಿ ಸಭೆ : ಲೋಕಸಭೆ-ರಾಜ್ಯಸಭೆ ಚುನಾವಣೆ ಕುರಿತ ಚರ್ಚೆ

ನಿರುದ್ಯೋಗದ ಬಗ್ಗೆ ಬಿಜೆಪಿ ಎಂದೂ ಪ್ರತಿಭಟನೆ ಮಾಡಿಲ್ಲ. ಭದ್ರ ಮೇಲ್ದಂಡೆ, ಮೇಕೆದಾಟು, ಮಹದಾಯಿ ಸೇರಿದಂತೆ ನೀರಾವರಿ ಯೋಜನೆಗಳ ಅನ್ಯಾಯ ಪ್ರಶ್ನಿಸಿಲ್ಲ. ಕಲಬುರಗಿ ರೈಲ್ವೆ ವಿಭಾಗೀಯ ಕಚೇರಿಗೆ ಸಮರ್ಪಕ ಅನುದಾನ ಇಲ್ಲ. ಇದರ ಬಗ್ಗೆ ಮಾತೇ ಆಡುವುದಿಲ್ಲ ಎಂದು ಕಿಡಿಕಾರಿದರು.

ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಮೋದಿಯವರ ಗಾರ್ಡನ್‍ನಲ್ಲಿ ಬೆಳೆಯುವುದಿಲ್ಲ. ಎಲ್ಲ ಭಾರತೀಯ ರೈತರು ಬೆಳೆಯುತ್ತಾರೆ. ಸಂಪನ್ಮೂಲಗಳು ಎಲ್ಲರಿಂದಲೂ ಕ್ರೂಢೀಕರಣವಾಗುತ್ತದೆ. ಅದೇ ರೀತಿ ಸಮಾನವಾಗಿ ಹಂಚಿಕೆಯೂ ಆಗಬೇಕು ಎಂದು ಕುಮಾರಸ್ವಾಮಿಯವರ ಟೀಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

RELATED ARTICLES

Latest News