ಹುಬ್ಬಳ್ಳಿ,ಫೆ.2- ಸಂಸದ ಡಿ.ಕೆ.ಸುರೇಶ್‍ರ ಹೇಳಿಕೆಯನ್ನು ಚರ್ಚೆ ಮಾಡುವುದಾದರೆ ಸಂವಿಧಾನವನ್ನೇ ಬದಲಾವಣೆ ಮಾಡುತ್ತೇವೆ ಎಂದು ದಿನಬೆಳಿಗ್ಗೆ ಹೇಳುವ ಬಿಜೆಪಿಯವರ ಹೇಳಿಕೆಗಳು ಚರ್ಚೆಯಾಗಬೇಕಲ್ಲವೇ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ದಕ್ಷಿಣ ಭಾರತ ದೇಶದ ಬೇಡಿಕೆಗೆ ನನ್ನ ಬೆಂಬಲ ಇಲ್ಲ. ಅದರ ಹೊರತಾಗಿ ತೆರಿಗೆ ಹಂಚಿಕೆಯಲ್ಲಿ ಅನ್ಯಾಯವಾಗುತ್ತಿದೆ ಎಂಬ ಆರೋಪಕ್ಕೆ ಸಂಪೂರ್ಣ ಸಹಮತ ಇದೆ ಎಂದರು.
2014 ರಲ್ಲಿ ಕರ್ನಾಟಕಕ್ಕೆ ದೊರೆಯುತ್ತಿದ್ದ ಆರ್ಥಿಕ ನೆರವನ್ನು ಪ್ರಸ್ತುತ ಮೌಲ್ಯಕ್ಕೆ ಹೋಲಿಸಿದರೆ ಕಡಿಮೆಯಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದು ಪ್ರಶ್ನಾರ್ಹ. ನಮ್ಮ ಹಣವನ್ನು ತೆಗೆದುಕೊಂಡು ಉತ್ತರ ಭಾರತದ ಅಭಿವೃದ್ಧಿಗೆ ಬಳಸುವುದಾದರೆ ನಮ್ಮ ಪರಿಸ್ಥಿತಿ ಏನಾಗಬೇಕು. ಮೊದಲು ನಮ್ಮ ಪಾಲನ್ನು ನಮಗೆ ಕೊಡಿ, ಮಿಕ್ಕಿದ್ದನ್ನು ಉತ್ತರ ಭಾರತಕ್ಕೆ ಕೊಟ್ಟರೆ ನಾವು ಬೇಡ ಎನ್ನುವುದಿಲ್ಲ. ಆದರೆ ದಕ್ಷಿಣ ಭಾರತವನ್ನು ಸಂಪೂರ್ಣವಾಗಿ ಕಡೆಗಣಿಸಿ ಉತ್ತರಭಾರತಕ್ಕೆ ಆದ್ಯತೆ ನೀಡುವುದು ಖಂಡನೀಯ ಎಂದರು.
ಮತ್ತೊಂದು ಜೀವ ಬಲಿ ಪಡೆದ ಕಿಲ್ಲರ್ ಬಿಎಂಟಿಸಿ, ವಿದ್ಯಾರ್ಥಿನಿ ಸಾವು
ಡಿ.ಕೆ.ಸುರೇಶ್‍ರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿವಾದ ಮಾಡುತ್ತಿದೆ. ಅದೇ ರೀತಿ ಬಿಜೆಪಿಯವರು ದಿನಬೆಳಗಾದರೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್‍ರವರು ಬರೆದ ಸಂವಿಧಾನವನ್ನು ಗೌರವಿಸುವುದಿಲ್ಲ, ಅದನ್ನು ಬದಲಾಯಿಸುತ್ತೇವೆ ಎನ್ನುತ್ತಾರೆ. ಸಂವಿಧಾನ ಬದಲಾದರೆ ದೇಶ ಬದ ದಂತಲ್ಲವೇ ಎಂದು ಹೇಳಿದರು.
ಅನೇಕ ಬಾರಿ ರಾಜ್ಯದಲ್ಲೂ ಪ್ರತ್ಯೇಕತೆಯ ಕೂಗುಗಳು ಕೇಳಿ ಬಂದಿವೆ. ಏಕೀಕರಣದ ಉದ್ದೇಶ ವನ್ನು ಬದಿಗಿರಿಸಿ ಅಭಿವೃದ್ಧಿಯ ವಿಷಯ ವಾಗಿಯೇ ಆಕ್ರೋಶ ವ್ಯಕ್ತಪಡಿಸುವಾಗ ಪ್ರತ್ಯೇಕ ರಾಜ್ಯವಾಗಬೇಕು ಎನ್ನುತ್ತಾರೆ. ಇದಕ್ಕೆ ಏನು ಹೇಳಬೇಕು ಎಂದರು.ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಅವರು ಗ್ಯಾರಂಟಿ ಯೋಜನೆಗಳ ಕುರಿತು ನೀಡಿರುವ ಹೇಳಿಕೆಗೆ ನನ್ನ ಬೆಂಬಲವಿಲ್ಲ. ಆದರೆ ಕೇಂದ್ರದವರು ನೀಡುತ್ತಿರುವ ಅಕ್ಕಿ ಯಾರ ಯೋಜನೆ ಎಂಬುದನ್ನು ಜನರಿಗೆ ತಿಳಿಸಬೇಕು.
ಮನಮೋಹನಸಿಂಗ್ ಪ್ರಧಾನಿಯಾಗಿದ್ದಾಗ ಆಹಾರ ಭದ್ರತಾ ಯೋಜನೆಯನ್ನು ಜಾರಿ ಗೊಳಿಸಿದ್ದರು. ಅಂದಿನಿಂದಲೂ ಬಡವರಿಗೆ ಅಕ್ಕಿ ನೀಡುವುದು ಜಾರಿಯಲ್ಲಿದೆ. ಕಳೆದ ಒಂದು ವರ್ಷದಿಂದ ಇದರ ಬಗ್ಗೆ ಜ್ಞಾನೋದಯ ವಾದಂತೆ ಬಿಜೆಪಿಯವರು 80 ಕೋಟಿ ಜನರಿಗೆ ಉಚಿತ ಅಕ್ಕಿ ನೀಡುತ್ತಿದ್ದೇವೆ ಎಂದು ಪ್ರಚಾರ ಮಾಡಿಕೊಳ್ಳಲಾರಂಭಿಸಿದ್ದಾರೆ ಎಂದು ತಿರುಗೇಟು ನೀಡಿದರು.
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಗಳನ್ನು ಜಾರಿಗೊಳಿಸಿದ ಮೇಲೆ ಕೇಂದ್ರ ಸರ್ಕಾರ ಮೋದಿ ಗ್ಯಾರಂಟಿ ಎಂದು ಜಾರಿ ಮಾಡಲು ಮುಂದಾಗಿದೆ. ಅದಕ್ಕೆ ಮೊದಲು ಗ್ಯಾರಂಟಿ ಎಂಬ ಪದವನ್ನೇ ಟೀಕಿಸುತ್ತಿದ್ದರು. ಮೋದಿಯವರ 10 ವರ್ಷದ ಆಡಳಿತದಲ್ಲಿ ಒಂದೇ ಒಂದು ಹೊಸ ಯೋಜನೆ ತೋರಿಸಲಿ ಎಂದು ಸವಾಲು ಹಾಕಿದರು.
ಮೇಕ್ ಇನ್ ಇಂಡಿಯಾ ಎನ್ನುತ್ತಾರೆ. ಒಂದು ಸೂಜಿಯನ್ನೂ ತಯಾರಿಸಿಲ್ಲ. ವಿದೇಶದಿಂದ ತಂದು ಇಲ್ಲಿ ಪ್ಯಾಕ್ ಮಾಡಿ ನೀಡಲಾಗುತ್ತಿದೆ. ಖೇಲೋ ಇಂಡಿಯಾ ಬಗ್ಗೆ ಮರೆತುಬಿಟ್ಟಿದ್ದಾರೆ. ಸ್ವಚ್ಛಭಾರತ್ ಯೋಜನೆಗೆ ಹಣವನ್ನೇ ಇಟ್ಟಿಲ್ಲ. ವಯೋವೃದ್ಧರಿಗೆ, ವಿಧವೆಯರಿಗೆ, ವಿಶೇಷ ಚೇತನರಿಗೆ ಇಂದಿರಾಗಾಂಧಿ ಕಾಲದಿಂದಲೂ 20 ಅಂಶಗಳ ಕಾರ್ಯಕ್ರಮದಲ್ಲಿ ಮಾಸಾಶನ ನೀಡಲಾಗುತ್ತಿದೆ. ಇಂತಹ ಎಲ್ಲಾ ಯೋಜನೆ ಗಳನ್ನು ಹೆಸರು ಬದಲಿಸಿ ಕೇಂದ್ರ ಸರ್ಕಾರ ತನ್ನ ಸಾಧನೆ ಎಂದು ಹೇಳಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಮಂಡ್ಯ ಬಂದ್ ನಡೆಸಲು ಮುಂದಾದ ಪ್ರತಿಪಕ್ಷಗಳ ವಿರುದ್ಧ ಸಚಿವ ಚೆಲುವರಾಯಸ್ವಾಮಿ ಕಿಡಿ
ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿಯವರು ಪದೇಪದೇ ಪ್ರಚಾರ ಮಾಡುತ್ತಿದ್ದಾರೆ. ಅಸಂಬದ್ಧವಾದ ಈ ಪ್ರಶ್ನೆಗೆ ಎಷ್ಟು ಬಾರಿ ಉತ್ತರ ನೀಡಲು ಸಾಧ್ಯ. ಸರ್ಕಾರ ಪತನವಾಗುವುದಾದರೆ ಅದು ಆಯಾ ಕಾಲಕ್ಕೆ ನಡೆಯುತ್ತದೆ. ದಯವಿಟ್ಟು ಇಂತಹ ಪ್ರಶ್ನೆಗಳನ್ನ ಪದೇ ಪದೇ ಕೇಳಬೇಡಿ ಎಂದು ಹೇಳಿದರು.