ದೇವನಹಳ್ಳಿ, ಮೇ.4: ಡಿಲಿವರಿ ಬಾಯ್ ಯೊಬ್ಬರನ್ನು ಅಪಹರಣ ಮಾಡಿಕೊಂಡು ಹೋದ ದುಷ್ಕರ್ಮಿಗಳು ಹತ್ಯೆ ಮಾಡಿರುವ ಘಟನೆ ದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನೀರುಗುಂಟೆಪಾಳ್ಯ ಗ್ರಾಮದ ನಿವಾಸಿ ಪ್ರೀತಂ (19) ಕೊಲೆಯಾದ ಯುವಕ. ಇವರು ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು.
ಎಂಬಿಬಿಎಸ್ ವ್ಯಾಸಂಗ ಮಾಡುತ್ತಿರುವ ತನಗಿಂತ 2 ವರ್ಷ ದೊಡ್ಡವಳಾದ ಯುವತಿಯೊಬ್ಬರನ್ನು ಈತ ಪ್ರೀತಿ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇವರ ಪ್ರೀತಿ ವಿಚಾರ ತಿಳಿದ ಯುವತಿಯ ಪೊಷಕರು ಹಾಗೂ ಸಂಬಂಧಿಕರು ಯುವತಿಯ ಸ್ನೇಹ ಬಿಡುವಂತೆ ಈತನಿಗೆ ಎಚ್ಚರಿಕೆ ನೀಡಿದ್ದರು ಆದರೂ ಈತ ಇದನ್ನು ನಿರ್ಲಕ್ಷ್ಯ ಮಾಡಿದ್ದ. ಯುವತಿಯ ಜೊತೆ ಮಾತನಾಡುತ್ತಿದ್ದ.
ಇದರಿಂದ ಕೊಪಗೊಂಡ ದುಷ್ಕರ್ಮಿಗಳು ಶುಕ್ರವಾರ ರಾತ್ರಿ ಪ್ರೀತಂನನ್ನು ಕಾರಿನಲ್ಲಿ ಅಪಹರಿಸಿಕೊಂಡು ಹೋಗಿ ಕೋಡಿ ಮಂಜನಹಳ್ಳಿ ಸಮೀಪ ಹಲ್ಲೆ ನಡೆಸಿ ಹತ್ಯೆ ಮಾಡಿ ಶವವವನ್ನು ಪೊದೆಯಲ್ಲಿ ಬಿಸಾಕಿ ಪಾರಾರಿಯಾಗಿದ್ದರು.
ನಿನ್ನೆ ಬೆಳಗ್ಗೆ ಶವವನ್ನು ನೋಡಿದಸಾರ್ವಜನಿಕರೊಬ್ಬರು ವಿಷಯವನ್ನು ದೇವನಹಳ್ಳಿ ಠಾಣೆ ಪೊಲೀಸರಿಗೆ ತಿಳಿಸಿದರು.ಸದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲಿಸಿ ಕೊಲೆ ಮೊಕದ್ದಮೆ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.
ಇತ್ತ ಬೆಳೆದು ನಿಂತಿದ್ದ ಮಗನನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸ್ ಠಾಣೆ ಮುಂದೆ ತಾಯಿ ಮತ್ತು ಸಂಬಂಧಿಕರು ಕಣ್ಣೀರು ಹಾಕಿದ್ದಾರೆ.