ಚಿಕ್ಕಮಗಳೂರು, ಮಾ.20-ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಭದ್ರಾನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.ಕಳಸ ಪಬ್ಲಿಕ್ ಸ್ಕೂಲ್‌ನಲ್ಲಿ ಹತ್ತನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಳೆಹೊಳೆ ಮೂಲದ ವಿದ್ಯಾರ್ಥಿ ಮೂಲದ ಶ್ರೇಯಸ್ ಮಾ.16 ರಿಂದ ಕಾಣೆಯಾಗಿದ್ದ.
ಶಾಲೆ ಬಿಟ್ಟ ನಂತರ ವಿದ್ಯಾರ್ಥಿ ಮನೆಗೆ ತೆರಳಿರಲಿಲ್ಲ. ಈ ಬಗ್ಗೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿ ಪತ್ತೆಗಾಗಿ ಹುಡುಕಾಟ ನಡೆಸಲಾಗಿತ್ತು. ಮಾ.16ರಂದು ಸಂಜೆ ಕಳಸ ಬಾಳೆಹೊಳೆ ನಡುವಿನ ಹಳುವಳ್ಳಿ ಬಳಿ ಭದ್ರಾ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿತ್ತು.
ಶವವನ್ನು ಮೇಲಿತ್ತಿ ಪರಿಶೀಲಿಸಲಾಗಿ ಅದು ನಾಪತ್ತೆಯಾಗಿದ್ದ ವಿದ್ಯಾರ್ಥಿಯದೆಂದು ಖಚಿತವಾಗಿದೆ.
ವಿದ್ಯಾರ್ಥಿ ಮೂಲತಃ ಬೇಲೂರು ತಾಲ್ಲೂಕಿನವನಾಗಿದ್ದು, ಸುರೇಶ್ ಶೆಟ್ಟಿ ಮತ್ತು ಜಯಂತಿ ಎಂಬುವವರ ಪುತ್ರ. ಬಾಳೆಹೊಳೆಯಲ್ಲಿ ತನ್ನ ಚಿಕ್ಕಮ್ಮನ ಮನೆಯಲ್ಲಿ ಇದ್ದು ಕಳಸ ಪಬ್ಲಿಕ್ ಸ್ಕೂಲ್ ಗೆ ಹೋಗುತ್ತಿದ್ದ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವು ದಿನಗಳು ಇರುವಂತೆ ವಿದ್ಯಾರ್ಥಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಶಾಲೆಬಿಟ್ಟನಂತರ ಭದ್ರಾ ನದಿಯಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರಬಹುದೇ, ಈತನೊಂದಿಗೆ ಬೇರೆ ಸ್ನೇಹಿತರು ತೆರಳಿದ್ದರೆ ಯಾರಾದರೂ ಕೊಲೆ ಮಾಡಿರಬಹುದೇ, ತಾನೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೇ ಹೀಗೆ ಈ ಪ್ರಕರಣದ ಬಗ್ಗೆ ಹಲವಾರು ಪ್ರಶ್ನೆಗಳು ಉದ್ಭವಿಸಿವೆ.
ಕಳಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ಮೂಡಿಗೆರೆ ಸರ್ಕಲ್ ಇನ್ಸ್‌ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ. ಬಾಲಕನ ಪೋಷಕರು ಈ ಬಗ್ಗೆ ದೂರು ನೀಡುತ್ತಿದ್ದು, ಶವವನ್ನು ಕಳಸ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಮರಣೋತ್ತರ ಪರೀಕ್ಷೆ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಲಂಕಷ ತನಿಖೆ ನಡೆಸಬೇಕು ಎಂದು ಶಾಲೆಯ ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.