Saturday, July 27, 2024
Homeರಾಷ್ಟ್ರೀಯಮಿಜೋರಾಂ : ರೆಮಾಲ್‌ ಚಂಡಮಾರುತದ ಪ್ರಭಾವದಿಂದ ಕಲ್ಲು ಕ್ವಾರಿ ಕುಸಿದು 10 ಜನ ಸಾವು

ಮಿಜೋರಾಂ : ರೆಮಾಲ್‌ ಚಂಡಮಾರುತದ ಪ್ರಭಾವದಿಂದ ಕಲ್ಲು ಕ್ವಾರಿ ಕುಸಿದು 10 ಜನ ಸಾವು

ಐಜ್ವಾಲ್‌‍, ಮೇ 28- ರೆಮಾಲ್‌ ಚಂಡಮಾರುತದ ಪ್ರಭಾವದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆ ಇಂದು ಬೆಳಿಗ್ಗೆ ಮಿಜೋರಾಂನ ಐಜ್ವಾಲ್‌ ಜಿಲ್ಲೆಯಲ್ಲಿ ಕಲ್ಲು ಕ್ವಾರಿಯೊಂದು ಕುಸಿದು ಹತ್ತು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಕಾಣೆಯಾಗಿದ್ದಾರೆ. ಐಜ್ವಾಲ್‌ ಪಟ್ಟಣದ ದಕ್ಷಿಣ ಹೊರವಲಯದಲ್ಲಿರುವ ಮೆಲ್ತುಮ್‌ ಮತ್ತು ಹ್ಲಿಮೆನ್‌ ನಡುವಿನ ಪ್ರದೇಶದಲ್ಲಿ ಬೆಳಿಗ್ಗೆ 6 ಗಂಟೆಗೆ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದುವರೆಗೆ ಹತ್ತು ಮೃತದೇಹಗಳು ಪತ್ತೆಯಾಗಿದ್ದು, ಇನ್ನೂ ಹಲವರು ಅವಶೇಷಗಳಡಿ ಸಿಲುಕಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರನ್ನು ರಕ್ಷಿಸಲು ಎಲ್ಲ ಪ್ರಯತ್ನಗಳು ನಡೆಯುತ್ತಿವೆ.ಆದರೂ ಭಾರೀ ಮಳೆಯಿಂದಾಗಿ ಕಾರ್ಯಾಚರಣೆಗೆ ತೊಂದರೆಯಾಗುತ್ತಿದೆ ಎಂದು ಪೊಲೀಸ್‌‍ ಮಹಾನಿರ್ದೇಶಕ (ಡಿಜಿಪಿ) ಅನಿಲ್‌ ಶುಕ್ಲಾ ಪಿಟಿಐಗೆ ತಿಳಿಸಿದ್ದಾರೆ.

ಮೃತರಲ್ಲಿ ಏಳು ಮಂದಿ ಸ್ಥಳೀಯರಾಗಿದ್ದರೆ, ಮೂವರು ಹೊರ ರಾಜ್ಯದವರಾಗಿದ್ದಾರೆ. ಇನ್ನೂ 10ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆ ಇದೆ.ಮಳೆಯಿಂದಾಗಿ ರಾಜ್ಯದ ಹಲವು ಸ್ಥಳಗಳಲ್ಲಿ ಭೂಕುಸಿತ ಉಂಟಾಗಿದ್ದು, ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಐಜ್ವಾಲ್‌ನ ಸೇಲಂ ವೆಂಗ್‌ನಲ್ಲಿ ಭೂಕುಸಿತದಿಂದ ಕಟ್ಟಡವೊಂದು ಕೊಚ್ಚಿ ಹೋಗಿದ್ದು, ಮೂವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಹುಂತಾರ್‌ನಲ್ಲಿ ರಾಷ್ಟ್ರೀಯ ಹೆದ್ದಾರಿ 6 ರಲ್ಲಿ ಭೂಕುಸಿತದಿಂದಾಗಿ ರಾಜ್ಯದ ರಾಜಧಾನಿಯನ್ನು ದೇಶದ ಇತರ ಭಾಗಗಳಿಂದ ಕಡಿತಗೊಳಿಸಲಾಗಿದೆ. ಇದಲ್ಲದೆ, ಹಲವಾರು ಅಂತರ್‌-ರಾಜ್ಯ ಹೆದ್ದಾರಿಗಳು ಭೂಕುಸಿತದಿಂದ ಅಸ್ತವ್ಯಸ್ತಗೊಂಡಿವೆ. ಮುಖ್ಯಮಂತ್ರಿ ಲಾಲ್ದುಹೋಮ ಅವರು ಗೃಹ ಸಚಿವ ಕೆ.ಸಪ್ದಂಗ, ಮುಖ್ಯ ಕಾರ್ಯದರ್ಶಿ ರೇಣು ಶರ್ಮಾ ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ಪರಿಸ್ಥಿತಿಯನ್ನು ಅವಲೋಕಿಸಲು ತುರ್ತು ಸಭೆಯನ್ನು ಕರೆದಿದ್ದಾರೆ.

ಮಳೆಯ ಕಾರಣ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಅಗತ್ಯ ಸೇವೆಗಳನ್ನು ಒದಗಿಸುವವರನ್ನು ಹೊರತುಪಡಿಸಿ ಸರ್ಕಾರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡಲು ತಿಳಿಸಲಾಗಿದೆ.

RELATED ARTICLES

Latest News