ಬೆಂಗಳೂರು,ಆ.13– ಯಾದಗಿರಿ ಪಿಎಸ್ಐ ಪರಶುರಾಮ್ ಅಸಹಜ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಇಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದರು. ಪರಮೇಶ್ವರ್ರವರ ಮನೆಗೆ ಹಿಂಬಾಗಿಲ ಮೂಲಕ ಬಂದ ಚೆನ್ನಾರೆಡ್ಡಿ ಮಾಧ್ಯಮಗಳ ಕಣ್ತಪ್ಪಿಸಿ ಹಿಂಬಾಗಿಲಿನಿಂದಲೇ ಹೊರಹೋದರು.
ಪರಶುರಾಮ್ ಆತಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಆಡಳಿತ ಪಕ್ಷದ ಶಾಸಕರೂ ಆಗಿರುವ ಚೆನ್ನಾರೆಡ್ಡಿ ಮತ್ತು ಅವರ ಪುತ್ರ ಪಂಪನಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಶಾಸಕರು ಮತ್ತು ಅವರ ಪುತ್ರ ಬಂಧನದ ಭೀತಿ ಎದುರಿಸುತ್ತಿದ್ದಾರೆ.
ಶಾಸಕರ ಭೇಟಿ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಸಚಿವ ಪರಮೇಶ್ವರ್, ನನ್ನ ಹುಟ್ಟುಹಬ್ಬದ ದಿನ ಅವರಿಗೆ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದು ಬಂದು ಭೇಟಿ ಮಾಡಿ ಶುಭ ಹಾರೈಸಿದ್ದಾರೆ. ಇದು ಸೌಜನ್ಯದ ಭೇಟಿಯಷ್ಟೇ. ಈಗಾಗಲೇ ದಾಖಲಾಗಿರುವ ಪ್ರಕರಣದ ತನಿಖೆ ನಡೆಯುತ್ತಿದೆ. ಆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ , ದೇರ್ ಈಸ್ ನೋ ನೀಡ್ ಟು ಬಿಟ್ವೀನ್ ದಿ ಲೈನ್ ಎಂದು ಹೇಳಿದರು.
ಚೆನ್ನಾರೆಡ್ಡಿ ಬಂಧನಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ
ಲಂಚಕ್ಕೆ ಬೇಡಿಕೆಯಿಟ್ಟ ಹಿನ್ನಲೆ ಒತ್ತಡದಿಂದಲೇ ನಿಗೂಢವಾಗಿ ಸಾವನ್ನಪ್ಪಿರುವ ಪಿಎಸ್ಐ ಪರಶುರಾಮ್ ಪ್ರಕರಣದಲ್ಲಿ ಸ್ಥಳೀಯ ಶಾಸಕ ಚೆನ್ನಾರೆಡ್ಡಿ ಅವರನ್ನು ತಕ್ಷಣವೇ ಪೊಲೀಸರು ಬಂಧಿಸಬೇಕೆಂದು ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.
ಯಾದಗಿರಿ ಸುಭಾಷ್ ವೃತ್ತದಲ್ಲಿ ನಡೆದ ಬಿಜೆಪಿ ಪ್ರತಿಭಟನೆ ವೇಳೆ ಮಾತನಾಡಿದ ಅವರು, ಪಿಎಸ್ಐ ಪರಶುರಾಮ್ ನಿಗೂಢ ಸಾವು ಖಂಡಿಸಿ, ಪ್ರಕರಣ ಸಂಬಂಧ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು, ಪಂಪಣ್ಣಗೌಡ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು. ್ಢರಾಜ್ಯ ಸರ್ಕಾರದ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತವಾಗಿ ತನಿಖೆ ನಡೆಯಲು ಸಾಧ್ಯವಾಗಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರದ ಮೇಲೆ ಅವರು ಒತ್ತಡ ಹಾಕಿದರು.
ಪ್ರತಿಭಟನೆ ಮುನ್ನ ಮೃತ ಪಿಎಸ್ಐ ಪರಶುರಾಮ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾಜಿ ಸಚಿವರಾದ ಎನ್.ಮಹೇಶ್,ರಾಜುಗೌಡ ಸೇರಿದಂತೆ ಅನೇಕರು ಭಾಗಿಯಾಗಿದ್ದರು.