Sunday, September 15, 2024
Homeರಾಜಕೀಯ | Politicsಗೌರಿ-ಗಣೇಶ ಹಬ್ಬದ ಬಳಿಕ ಚನ್ನಪಟ್ಟಣ ಜೆಡಿಎಸ್‌‍ ಅಭ್ಯರ್ಥಿ ಆಯ್ಕೆ

ಗೌರಿ-ಗಣೇಶ ಹಬ್ಬದ ಬಳಿಕ ಚನ್ನಪಟ್ಟಣ ಜೆಡಿಎಸ್‌‍ ಅಭ್ಯರ್ಥಿ ಆಯ್ಕೆ

ಬೆಂಗಳೂರು, ಆ.13– ಗೌರಿ-ಗಣೇಶ ಹಬ್ಬದ ನಂತರ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಜೆಡಿಎಸ್‌‍ ಅಭ್ಯರ್ಥಿ ಆಯ್ಕೆ ಮಾಡಲು ಉದ್ದೇಶಿಸಲಾಗಿದೆ. ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕಿದೆ.

ಇನ್ನೂ ಚುನಾವಣಾ ವೇಳಾಪಟ್ಟಿ ಪ್ರಕಟವಾಗದಿದ್ದರೂ ಅಭ್ಯರ್ಥಿ ಆಯ್ಕೆ ಕುರಿತಂತೆ ಬಿಜೆಪಿ ಮತ್ತು ಜೆಡಿಎಸ್‌‍ನಲ್ಲಿ ಪದೇ ಪದೇ ಚರ್ಚೆಗಳಾಗುತ್ತಿವೆ. ಆದರೂ ಇದುವರೆಗೆ ಒಮತದ ಮೈತ್ರಿ ಅಭ್ಯರ್ಥಿ ಯಾರೆಂಬುದು ನಿರ್ಧಾರವಾಗದೇ ಉಳಿದಿದ್ದು, ಉಭಯ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಮುಂದುವರೆದಿದೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರ ರಾಜೀನಾಮೆಯಿಂದ ಶಿಗ್ಗಾವಿ ವಿಧಾನಸಭಾ ಕ್ಷೇತ್ರ ಹಾಗೂ ಸಂಸದ ತುಕಾರಾಂ ಅವರ ರಾಜೀನಾಮೆಯಿಂದ ಸಂಡೂರು ವಿಧಾನಸಭಾ ಕ್ಷೇತ್ರಗಳು ತೆರವಾಗಿದ್ದು, ಉಪ ಚುನಾವಣೆ ನಡೆಯಬೇಕಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೂರು ಕ್ಷೇತ್ರಗಳ ಪೈಕಿ ಜೆಡಿಎಸ್‌‍, ಬಿಜೆಪಿ ಹಾಗೂ ಕಾಂಗ್ರೆಸ್‌‍ ತಲಾ ಒಂದು ಕ್ಷೇತ್ರದಲ್ಲಿ ಗೆದ್ದಿದ್ದವು. ಲೋಕಸಭಾ ಚುನಾವಣೆಯಂತೆ ಉಪ ಚುನಾವಣೆಯಲ್ಲೂ ಬಿಜೆಪಿ-ಜೆಡಿಎಸ್‌‍ ಮೈತ್ರಿ ಮುಂದುವರೆಯಲಿದೆ. ಮೂರು ಕ್ಷೇತ್ರಗಳಲ್ಲಿ ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌‍ ಉಳಿಸಿಕೊಳ್ಳಲಿದ್ದು, ಉಳಿದೆರಡು ಕ್ಷೇತ್ರಗಳನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ.

ಆದರೂ ಚನ್ನಪಟ್ಟಣ ಕ್ಷೇತ್ರವನ್ನು ಬಿಟ್ಟುಕೊಡುವಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪಟ್ಟು ಹಿಡಿದ್ದಾರೆ. ಜೆಡಿಎಸ್‌‍ ವರಿಷ್ಠರನ್ನು ಭೇಟಿ ಮಾಡಿ ಈ ಸಂಬಂಧ ಮಾತುಕತೆ ನಡೆಸಿರುವುದಲ್ಲದೆ, ಟಿಕೆಟ್‌ ನೀಡುವಂತೆ ಬಿಜೆಪಿ ವರಿಷ್ಠರ ಮೇಲೆ ಒತ್ತಡವನ್ನೂ ತರುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಅವರ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್‌ ಇವರಿಬ್ಬರಲ್ಲಿ ಒಬ್ಬರು ಸ್ಪರ್ಧೆ ಮಾಡಿದರೂ ಚನ್ನಪಟ್ಟಣ ಹೈ ವೋಲ್ಟೇಜ್‌ ಕ್ಷೇತ್ರವಾಗಿ ಪರಿಣಮಿಸಲಿದೆ.

ಈಗಾಗಲೇ ಶಿವಕುಮಾರ್‌ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ರಾಜಕೀಯವಾಗಿ ಚರ್ಚೆಯೂ ಆಗಿದೆ. ಮೂರು ಪಕ್ಷಗಳಿಂದ ಉಪ ಚುನಾವಣೆ ಸಿದ್ಧತೆಗಳು ಸಾಗಿವೆ.ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌‍ ತನ್ನಲ್ಲೇ ಉಳಿಸಿಕೊಳ್ಳುವ ನಿರ್ಧಾರ ಮಾಡಿದ್ದು, ಯೋಗೇಶ್ವರ್‌ ಸ್ಪರ್ಧೆಗೆ ವಿರೋಧ ಮಾಡಿಲ್ಲ. ಆದರೆ, ಬಿಜೆಪಿ ಚಿಹ್ನೆಯ ಬದಲಾಗಿ ಜೆಡಿಎಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಲಿ ಎಂಬ ಸಂದೇಶವನ್ನು ಬಿಜೆಪಿಗೆ ರವಾನಿಸಲಾಗಿದೆ ಎಂದು ಜೆಡಿಎಸ್‌‍ ಉನ್ನತ ಮೂಲಗಳು ತಿಳಿಸಿವೆ.

ಆದರೆ, ಯೋಗೇಶ್ವರ್‌ ಅವರು ಪ್ರಸ್ತುತ ವಿಧಾನ ಪರಿಷತ್‌ ಸದಸ್ಯರಾಗಿರುವುದರಿಂದ ಜೆಡಿಎಸ್‌‍ ಚಿಹ್ನೆಯಡಿ ಸ್ಪರ್ಧಿಸಲು ಒಲವು ತೋರುತ್ತಿಲ್ಲ. ಬದಲಾಗಿ ಬಿಜೆಪಿ ಅಭ್ಯರ್ಥಿಯಾಗಿ ಉಪ ಚುನಾವಣೆಯಲ್ಲಿ ಕಣಕ್ಕಿಳಿಯಲು ಆಸಕ್ತಿ ತೋರಿದ್ದಾರೆ. ಒಂದು ವೇಳೆ ಬಿಜೆಪಿ ಟಿಕೆಟ್‌ ದೊರೆಯದಿದ್ದರೆ, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವ ಸಂದೇಶವನ್ನು ಯೋಗೇಶ್ವರ್‌ ರವಾನಿಸಿದ್ದಾರೆ. ಹೀಗಾಗಿ ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಯ ಮೈತ್ರಿ ಅಭ್ಯರ್ಥಿ ವಿಚಾರ ಇನ್ನೂ ಗೊಂದಲದಲ್ಲಿದೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ. ಸಿ.ಎನ್‌. ಮಂಜುನಾಥ್‌ ಅವರು ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಯೋಗೇಶ್ವರ್‌ ಅವರ ಸಾಧನೆ ಬಗ್ಗೆ ಜೆಡಿಎಸ್‌‍ಗೆ ಸಮಾಧಾನವಿಲ್ಲ ಎಂಬ ಅಭಿಪ್ರಾಯವಿದೆ. ಯೋಗೇಶ್ವರ್‌ ನಿಲುವಿನಲ್ಲಿ ಬದಲಾವಣೆಯಾಗದಿದ್ದರೆ, ಗಣೇಶ ಹಬ್ಬದ ನಂತರ ಜೆಡಿಎಸ್‌‍ ಬೇರೆ ಅಭ್ಯರ್ಥಿ ಆಯ್ಕೆ ಮಾಡಿ ಕಣಕ್ಕಿಳಿಸಲು ಉದ್ದೇಶಿಸಿದೆ ಎಂದು ಜೆಡಿಎಸ್‌‍ ಮೂಲಗಳು ತಿಳಿಸಿವೆ.

ಪರ್ಯಾಯ ಅಭ್ಯರ್ಥಿಯಾಗಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ಹೆಸರು ಮುಂಚೂಣಿಯಲ್ಲಿದೆ. ಆದರೆ, ನಿಖಿಲ್ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡುವುದನ್ನು ಈಗಾಗಲೇ ತಳ್ಳಿ ಹಾಕಿದ್ದಾರೆ. ಕೊನೆ ಕ್ಷಣದಲ್ಲಿ ಜೆಡಿಎಸ್, ಕುಟುಂಬದವರಿಗೆ ಮಣೆ ಹಾಕಿ ಸ್ಪರ್ಧೆಗಿಳಿಸಲಿದೆಯೋ ಅಥವಾ ಸ್ಥಳೀಯರಿಗೆ ಅವಕಾಶ ಮಾಡಿಕೊಡಲಿದೆಯೋ ಎಂಬುದನ್ನು ಕಾದು ನೋಡಬೇಕು.

RELATED ARTICLES

Latest News