Friday, November 22, 2024
Homeಜಿಲ್ಲಾ ಸುದ್ದಿಗಳು | District Newsಬಿಜೆಪಿ ನಾಯಕನ ಬಂಧನ, ಪೊಲೀಸ್‌‍ ಠಾಣೆಯಲ್ಲೇ ಧರಣಿನಡೆಸಲೆತ್ನಿಸಿದ ಶಾಸಕ ಹರೀಶ್‌ ಪೂಂಜಾ

ಬಿಜೆಪಿ ನಾಯಕನ ಬಂಧನ, ಪೊಲೀಸ್‌‍ ಠಾಣೆಯಲ್ಲೇ ಧರಣಿನಡೆಸಲೆತ್ನಿಸಿದ ಶಾಸಕ ಹರೀಶ್‌ ಪೂಂಜಾ

ಮಂಗಳೂರು, ಮೇ 19- ಅಕ್ರಮ ಕಲ್ಲು ಕ್ವಾರಿಗೆ ಸಂಬಂಧಪಟ್ಟಂತೆ ಬಿಜೆಪಿ ನಾಯಕನನ್ನು ಬಂಧಿಸಿದ ಪೊಲೀಸರ ವಿರುದ್ಧ ಶಾಸಕ ಹರೀಶ್‌ ಪೂಂಜಾ ವಾಗ್ದಾಳಿ ನಡೆಸಿದ್ದು, ನಡುರಾತ್ರಿಯಲ್ಲಿ ಪೊಲೀಸ್‌‍ ಠಾಣೆಯಲ್ಲೇ ಧರಣಿ ನಡೆಸುವ ಪ್ರಯತ್ನ ಮಾಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಮೂಡಲ ನಿವಾಸಿ ಸೂರಪ್ಪ ಪೂಜಾರಿ ಎಂಬುವರ ಜಾಗದಲ್ಲಿ ಕಲ್ಲು ಕ್ವಾರಿ ನಡೆಯುತ್ತಿದ್ದು, ಶನಿವಾರ ಸಂಜೆ ತಹಸೀಲ್ದಾರ್‌ ದಾಳಿ ನಡೆಸಿ ಪರಿಶೀಲನೆ ನಡೆಸಿದರು. ಈ ವೇಳೆ ಕ್ವಾರಿಗೆ ಸಂಬಂಧಪಟ್ಟಂತೆ ಸಮರ್ಪಕ ದಾಖಲೆಗಳು ಇರಲಿಲ್ಲ ಎಂದು ಪತ್ತೆಯಾಗಿದೆ. ಜೊತೆಗೆ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಡಲಾಗಿತ್ತು. ಹಿಟಾಜಿ, ಕಂಪ್ರಸರ್‌ ಮಿಷನ್‌ ಸೇರಿದಂತೆ ಇತರ ವಸ್ತುಗಳನ್ನು ಪೊಲೀಸರು ಜಪ್ತಿ ಮಾಡಿದರು.

ಬಿಜೆಪಿ ಮುಖಂಡ ಪ್ರಮೋದ್‌ ದಿಡುಪೆ ಹಾಗೂ ಬಿಜೆಪಿ ಯುವಮೋರ್ಚಾ ತಾಲೂಕು ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಕ್ವಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಶಶಿರಾಜ ಶೆಟ್ಟಿಯನ್ನು ಬಂಧಿಸಿದ್ದಾರೆ. ತಕ್ಷಣವೇ ಬಿಜೆಪಿ ಕಾರ್ಯಕರ್ತರು ಠಾಣೆಯ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿದರು. ಶಾಸಕ ಹರೀಶ್‌ ಪೂಂಜಾ ಸ್ಥಳಕ್ಕೆ ಆಗಮಿಸಿ ಮಧ್ಯರಾತ್ರಿ ನಮ್ಮ ಕಾರ್ಯಕರ್ತರನ್ನು ಬಂಧಿಸುವ ಅಗತ್ಯವೇನಿತ್ತು ಎಂದು ತರಾಟೆಗೆ ತೆಗೆದುಕೊಂಡರು.

ಪೊಲೀಸರು ಕಾಂಗ್ರೆಸ್‌‍ನ ಏಜೆಂಟರಂತೆ ವರ್ತಿಸುತ್ತಿದ್ದಾರೆ. ನಮ್ಮ ಕಾರ್ಯಕರ್ತರಿಗೆ ಅನ್ಯಾಯವಾಗಲು ನಾನು ಬಿಡುವುದಿಲ್ಲ. ಅವರೊಂದಿಗೆ ನಾನೂ ಪೊಲೀಸ್‌‍ ಠಾಣೆಯಲ್ಲಿ ಮಲಗುತ್ತೇನೆ ಎಂದು ಪಟ್ಟು ಹಿಡಿದರು. ಪೊಲೀಸರು ಅವರ ಮನವೊಲಿಸಲು ಹರಸಾಹಸ ಪಡಬೇಕಾಯಿತು. ಬಿಜೆಪಿ ನಾಯಕರು ಬೆಳಗಿನ ಜಾವದವರೆಗೂ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.

RELATED ARTICLES

Latest News