Friday, December 6, 2024
Homeರಾಜಕೀಯ | Politicsಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಕೈವಾಡವಿಲ್ಲ : ಶಿವರಾಮೇಗೌಡ ಸ್ಪಷ್ಟನೆ

ಪೆನ್‌ಡ್ರೈವ್‌ ಪ್ರಕರಣದಲ್ಲಿ ಕಾಂಗ್ರೆಸ್ಸಿಗರ ಕೈವಾಡವಿಲ್ಲ : ಶಿವರಾಮೇಗೌಡ ಸ್ಪಷ್ಟನೆ

ಬೆಂಗಳೂರು, ಮೇ 19- ಬಿಜೆಪಿ ಮುಖಂಡ ದೇವರಾಜೇಗೌಡ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್‌ಗಳನ್ನು ವ್ಯಾಪಾರಕ್ಕಿಟ್ಟಿದ್ದಾರೆ. ಇಡೀ ಪ್ರಕರಣದಲ್ಲಿ ನನ್ನದಾಗಲೀ, ಡಿ.ಕೆ.ಶಿವಕುಮಾರ್‌ ಅವರದಾಗಲೀ ಅಥವಾ ಸಚಿವರ ಕೈವಾಡ ಇಲ್ಲ ಎಂದು ಮಾಜಿ ಸಚಿವ ಎಲ್‌.ಆರ್‌.ಶಿವರಾಮೇಗೌಡ ತಿಳಿಸಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರಾಜೇಗೌಡರನ್ನು ತಾವು ನೋಡಿರಲೇ ಇಲ್ಲ, ಅವರ ಸಂಪರ್ಕವೂ ಇರಲಿಲ್ಲ, ಪೆನ್‌ಡ್ರೈವ್‌ ಪ್ರಕರಣ ಹೊರಬಂದ ಬಳಿಕ ಅವರನ್ನು ನಾನು ಟಿವಿಯಲ್ಲಿ ನೋಡಿದ್ದು. ಅನಂತರ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿಸುವಂತೆ ನನ್ನನ್ನು ಕೇಳಿದರು.

ಹಾಗಾಗಿ ದೂರವಾಣಿಯಲ್ಲಿ ಮಾತನಾಡಿಸಿದ್ದೆ. ಅದೇ ಮಹಾಪರಾಧವಾಗಿದೆ. ದೇವರಾಜೇಗೌಡ ಮೋಸಗಾರ. ಆತನ ಜೊತೆ ಮಾತನಾಡುವಾಗ ಜನ ಎಚ್ಚರಿಕೆಯಿಂದಿರಬೇಕು. ಆತನ ಇಡೀ ದೇಹದಲ್ಲಿ ಇನ್ನೊಬ್ಬರು ಮಾತನಾಡುವುದನ್ನು ರೆಕಾರ್ಡ್‌ ಮಾಡಿಕೊಳ್ಳುವ ವ್ಯವಸ್ಥೆ ಇಟ್ಟುಕೊಂಡಿರುತ್ತಾನೆ ಎಂದು ಹೇಳಿದರು.

100 ಕೋಟಿ ಆಫರ್‌ ನೀಡಲಾಗಿತ್ತು. ಸಂಪುಟ ದರ್ಜೆಯ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು ಎಂದೆಲ್ಲಾ ಹೇಳಿಕೆ ನೀಡುತ್ತಿರುವ ದೇವರಾಜೇಗೌಡ, ಆರಂಭದಲ್ಲೇ ಇವುಗಳ ಬಗ್ಗೆ ಏಕೆ ಮಾತನಾಡಲಿಲ್ಲ? ಡಿ.ಕೆ.ಶಿವಕುಮಾರ್‌ರವರ ಜೊತೆಗಿನ ಮಾತುಕತೆಯನ್ನು ಪೂರ್ಣ ಪ್ರಮಾಣದಲ್ಲಿ ಬಹಿರಂಗ ಮಾಡದೇ ತನಗೆ ಬೇಕಾದಷ್ಟನ್ನು ಮಾತ್ರ ಹೊರಗೆ ಬಿಟ್ಟು ರಾಜಕೀಯ ಲಾಭ ಪಡೆಯುವ ಯತ್ನ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಪುಟದ ಸಚಿವರಾಗಲೀ, ಡಿ.ಕೆ.ಶಿವಕುಮಾರ್‌ರವರ ಪಾತ್ರವಾಗಲೀ ಪೆನ್‌ಡ್ರೈವ್‌ ಪ್ರಕರಣದಲ್ಲಿಲ್ಲ. ನನ್ನ ಹೆಸರನ್ನು ಅನಗತ್ಯವಾಗಿ ಇನ್ನು ಮುಂದೆ ಈ ಪ್ರಕರಣದಲ್ಲಿ ಬಳಸಬೇಡಿ. ಈ ಇಳಿವಯಸ್ಸಿನಲ್ಲಿ ದೇವೇಗೌಡಿರಗೆ ಈ ಪ್ರಕರಣದಿಂದಾದ ನೋವಿನ ಬಗ್ಗೆ ನನಗೆ ವಿಶಾದವಿದೆ. ಆ ಕಾರಣಕ್ಕಾಗಿಯೇ ನಿನ್ನೆ ಅವರ ಹುಟ್ಟುಹಬ್ಬವಿದ್ದಿದ್ದರಿಂದ ನಾನು ಪತ್ರಿಕಾಗೋಷ್ಠಿ ನಡೆಸದೆ ಇಂದು ಮಾತನಾಡುತ್ತಿದ್ದೇನೆ ಎಂದು ಹೇಳಿದರು.

ಪೆನ್‌ಡ್ರೈವ್‌ ಪ್ರಕರಣದ ತನಿಖೆ ದಿಕ್ಕು ತಪ್ಪಿಸಲು ಕಾಣದ ಕೈಗಳು ಕೆಲಸ ಮಾಡುತ್ತಿವೆ. ದೇವರಾಜೇಗೌಡ ತಾವು ಸಿಕ್ಕಿಹಾಕಿಕೊಳ್ಳುತ್ತೇನೆ ಎಂಬ ಆತಂಕದಲ್ಲಿ ಬೇರೆ ಬೇರೆ ರೀತಿಯ ಆರೋಪ ಮಾಡುತ್ತಿದ್ದಾನೆ. ಅಮಿತ್‌ ಶಾ, ನರೇಂದ್ರ ಮೋದಿ ಗೊತ್ತು ಎಂದು ಸುಳ್ಳು ಹೇಳುತ್ತಿದ್ದಾನೆ ಎಂದರು.

ಬಿಜೆಪಿಗೆ ರಾಜೀನಾಮೆ :
ತಾವು ಬಿಜೆಪಿಗೆ ರಾಜೀನಾಮೆ ನೀಡುವುದಾಗಿ ಎಲ್‌.ಆರ್‌.ಶಿವರಾಮೇಗೌಡರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. ಮೂಲತಃ ನಾನು ಕಾಂಗ್ರೆಸಿಗ. ಎರಡು ಬಾರಿ ಪಕ್ಷೇತರ ಶಾಸಕನಾಗಿ ಆಯ್ಕೆಯಾಗಿದ್ದೆ. ಎರಡು ಬಾರಿ ಬಿಜೆಪಿ ಪಕ್ಷ ಸೇರಿ ಕೆಲಸ ಮಾಡಿದ್ದೇನೆ. ಒಮೆ ಯಡಿಯೂರಪ್ಪ ಅವರು ಪಕ್ಷಕ್ಕೆ ಸೇರಿಸಿಕೊಂಡು ಎಂಪಿ ಟಿಕೆಟ್‌ ನೀಡಿದ್ದರು.

ಇತ್ತೀಚೆಗೆ ಬಸವರಾಜಬೊಮಾಯಿ ಪಕ್ಷಕ್ಕೆ ಸೇರಿಸಿಕೊಂಡರು. ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟುವುದು ಕಷ್ಟದ ಕೆಲಸ ಎಂದು ನಾನು ಅವರಿಗೆ ಹೇಳಿದ್ದೆ. ಆದರೂ ಅವರು ಕೇಳಲಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸರ್ಕಾರವೂ ಹೋಯಿತು, ಅವರ ನಾಯಕತ್ವದ ಪ್ರಭಾವವೂ ತಗ್ಗಿತ್ತು ಎಂದು ವಿವರಿಸಿದರು.

ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌‍, ಕಾಂಗ್ರೆಸ್‌‍ ಪಕ್ಷಗಳು ಪ್ರಬಲವಾಗಿವೆ. ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ 10 ರಿಂದ 40 ಸಾವಿರದವರೆಗೂ ಮತ ಪಡೆದು ಇತ್ತೀಚೆಗೆ ಚೇತರಿಕೆ ಕಾಣುತ್ತಿತ್ತು. ಆದರೆ ಜೆಡಿಎಸ್‌‍ ಮೈತ್ರಿಯಿಂದಾಗಿ ಮತ್ತಷ್ಟು ದುರ್ಬಲವಾಗಿದೆ. ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಕುಮಾರಸ್ವಾಮಿ 2 ಲಕ್ಷ ಅಂತರದಿಂದ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದರು.

ತಾವು ಬಿಜೆಪಿಗೆ ರಾಜೀನಾಮೆ ನೀಡಿದ್ದು ವಿಜಯೇಂದ್ರ ಅವರಿಗೆ ಪತ್ರ ಕಳುಹಿಸಿದ್ದೇನೆ. ಅವರಿಂದ ಯಾವ ಪ್ರತಿಕ್ರಿಯೆಯೂ ಬಂದಿಲ್ಲ. ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

RELATED ARTICLES

Latest News