Thursday, June 20, 2024
Homeರಾಜ್ಯರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ..?

ರಾಜ್ಯದ ನಾಲ್ವರು ಸಂಸದರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ..?

ಬೆಂಗಳೂರು,ಜೂ.6- ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ರಾಜ್ಯದಿಂದ ನಾಲ್ವರು ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವವಿದೆ.ಜೆಡಿಎಸ್‌‍, ಎನ್‌ಡಿಎ ಮೈತ್ರಿ ಭಾಗವಾಗಿರುವುದರಿಂದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿಜೆಪಿಯಿಂದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌, ಶೋಭಾ ಕರಂದ್ಲಾಜೆ, ಪ್ರಹ್ಲಾದ್‌ ಜೋಶಿ ಹಾಗೂ ರಮೇಶ್‌ ಜಿಗಜಿಣಗಿ ಇಲ್ಲವೇ ಗೋವಿಂದ ಕಾರಜೋಳ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭವನೀಯ ಪಟ್ಟಿಯಲ್ಲಿದ್ದಾರೆ.

ಸದ್ಯಕ್ಕೆ ಈ ನಾಲ್ವರಿಗೆ ಸೇರ್ಪಡೆ ಕುರಿತು ಯಾವುದೇ ಮಾಹಿತಿಯನ್ನು ನೀಡಿಲ್ಲವಾದರೂ ಎಲ್ಲಾ ಸಂಸದರು ದೆಹಲಿಗೆ ಬರುವಂತೆ ಬುಲಾವು ನೀಡಲಾಗಿದ್ದು, ರಾಜ್ಯಕ್ಕೆ ಈ ಬಾರಿ 3 ರಿಂದ 4 ಸ್ಥಾನಗಳು ಕೇಂದ್ರದಲ್ಲಿ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಬಿಜೆಪಿ ಈ ಬಾರಿ ಪೂರ್ಣ ಪ್ರಮಾಣದಲ್ಲಿ ಬಹುಮತ ಗಳಿಸಲು ಸಾಧ್ಯವಾಗದ ಕಾರಣ ಮಿತ್ರಪಕ್ಷಗಳಿಗೆ ಸಂಪುಟದಲ್ಲೂ ಅವಕಾಶ ಕಲ್ಪಿಸಬೇಕಾಗಿದೆ. ಹೀಗಾಗಿ ಮೊದಲ ಕಂತಿನಲ್ಲೇ ಎಚ್‌.ಡಿ.ಕುಮಾರಸ್ವಾಮಿ ಸಚಿವ ಸ್ಥಾನ ಬಹುತೇಕ ಗ್ಯಾರಂಟಿ.

ಉಳಿದಂತೆ ಬಿಜೆಪಿಯು ರಾಜ್ಯದಲ್ಲಿ ಈ ಬಾರಿ 17 ಸ್ಥಾನಗಳನ್ನು ಗೆದ್ದಿರುವುದರಿಂದ ಹಿರಿತನ ಪ್ರದೇಶವಾರು ಜಾತಿ, ಪಕ್ಷಕ್ಕೆ ಸೇರಿಸುವ ಸೇವೆ, ಸಂಘಟನೆ ಹೀಗೆ ಹತ್ತು ಹಲವು ಮಾನದಂಡಗಳ ಮೇಲೆ ಸಂಪುಟಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.ಜಗದೀಶ್‌ ಶೆಟ್ಟರ್‌ ಮಾಜಿ ಮುಖ್ಯಮಂತ್ರಿಯಾಗಿರುವುದರಿಂದ ಹಿರಿತನದ ಮೇಲೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ.

ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷ ತೊರೆದಿದ್ದ ಅವರು, ನಂತರ ನಡೆದ ಬೆಳವಣಿಗೆಯಲ್ಲಿ ಪುನಃ ಮಾತೃಪಕ್ಷಕ್ಕೆ ವಾಪಸ್ಸಾಗಿದ್ದರು. ಈ ವೇಳೆ ಕೇಂದ್ರದಲ್ಲಿ ಮೂರನೇ ಬಾರಿ ಅಧಿಕಾರಕ್ಕೆ ಬಂದರೆ ನಿಮಗೆ ಮಂತ್ರಿ ಸ್ಥಾನ ನೀಡಲಾಗುತ್ತದೆ ಎಂದು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹಸಚಿವ ಅಮಿತ್‌ ಶಾ ಆಶ್ವಾಸನೆ ನೀಡಿದ್ದರು.ಗೆದ್ದಿರುವ ಬಿಜೆಪಿ ಸಂಸದರಲ್ಲಿ ಶೆಟ್ಟರ್‌ ಹಿರಿಯರಾಗಿದ್ದು, ಸಂಪುಟಕ್ಕೆ ಸೇರ್ಪಡೆಯಾಗುವುದು ಖಚಿತವಾಗಿದೆ. ಲಿಂಗಾಯತ ಕೋಟದಲ್ಲಿ ಅವರಿಗೆ ಸ್ಥಾನ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಬಸವರಾಜ ಬೊಮಾಯಿ ಮುಖ್ಯಮಂತ್ರಿಯಾಗಿರುವುದರಿಂದ ಸದ್ಯಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅವಕಾಶ ಕ್ಷೀಣಿಸಿವೆ. ಹಿಂದಿನ ಮೋದಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರಗಳ ಸಚಿವರಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದ ಪ್ರಹ್ಲಾದ್‌ ಜೋಶಿ ಪುನಃ ಸಂಪುಟಕ್ಕೆ ಸೇರ್ಪಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಕೆಲವು ಸಂದರ್ಭಗಳಲ್ಲಿ ಮಸೂದೆ ಅಂಗೀಕಾರ ಸೇರಿದಂತೆ ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಜೋಶಿ ನಿರ್ವಹಿಸಿದ ಪಾತ್ರಕ್ಕೆ ಖುದ್ದು ಮೋದಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ಮೊದಲ ಸಂಪುಟದಲ್ಲೇ ಜೋಶಿಗೆ ಈ ಬಾರಿಯೂ ಅದೃಷ್ಟ ಖುಲಾಯಿಸಬಹುದು.

ಈ ಬಾರಿಯೂ ಬಿಜೆಪಿಗೆ ಒಕ್ಕಲಿಗ ಮತಗಳು ಹೆಚ್ಚಿನ ಪ್ರಮಾಣದಲ್ಲಿ ಲಭಿಸಿರುವ ಕಾರಣ ಮಹಿಳಾ ಕೋಟದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾಕರಂದ್ಲಾಜೆ ಎರಡನೇ ಬಾರಿ ಸಂಪುಟಕ್ಕೆ ಸೇರುವ ಸಂಭವನೀಯ ಪಟ್ಟಿಯಲ್ಲಿದ್ದಾರೆ ಎಂದು ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದಿರುವ ಡಾ.ಸಿ.ಎನ್‌.ಮಂಜುನಾಥ್‌ ಅವರನ್ನು ಸಹ ಸಂಪುಟಕ್ಕೆ ತೆಗೆದುಕೊಳ್ಳುವ ಬಗ್ಗೆ ಬಿಜೆಪಿ ಸಕಾರಾತಕವಾದ ನಿಲುವು ಇಟ್ಟುಕೊಂಡಿದೆ.ಒಂದು ಕಡೆ ಕುಮಾರಸ್ವಾಮಿ, ಮತ್ತೊಂದು ಕಡೆ ಡಾ.ಸಿ.ಎನ್‌.ಮಂಜುನಾಥ್‌ ಸೇರ್ಪಡೆಯಾದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಆನೆಬಲ ಬರಲಿದೆ ಎಂಬ ಲೆಕ್ಕಾಚಾರವು ಇದೆ.ಇನ್ನೊಂದು ಮೂಲದ ಪ್ರಕಾರ, ಡಾ.ಸಿ.ಎನ್‌.ಮಂಜುನಾಥ್‌ಗೆ ಎರಡನೇ ಅವಧಿಯಲ್ಲಿ ಸಚಿವ ಸಂಪುಟ ಪುನರ್‌ ರಚನೆಯಾಗುವ ವೇಳೆ ಅವಕಾಶ ಸಿಗಬಹುದು ಎಂಬ ಮಾತುಗಳು ಕೇಳಿಬಂದಿವೆ.

ಪರಿಶಿಷ್ಟ ಜಾತಿ ಕೋಟದಲ್ಲಿ 7 ಬಾರಿ ಗೆದ್ದಿರುವ ವಿಜಯಾಪುರದ ಸಂಸದ ರಮೇಶ್‌ ಜಿಗಜಿಣಗಿ ಸಚಿವರಾಗಬಹುದು. ಈ ಹಿಂದೆ ಒಂದು ಬಾರಿ ರಾಜ್ಯಖಾತೆ ಸಚಿವರಾಗಿದ್ದ ಅವರಿಗೆ ಈ ಬಾರಿ ಸಂಪುಟ ದರ್ಜೆಯ ಖಾತೆ ಸಿಗಲಿದೆ ಎಂದು ಹೇಳಲಾಗುತ್ತಿದೆ.ಅಚ್ಚರಿಯ ಬೆಳವಣಿಗೆಯಲ್ಲಿ ಚಿತ್ರದುರ್ಗದಲ್ಲಿ ಗೆದ್ದಿರುವ ಗೋವಿಂದ ಕಾರಜೋಳ ಕೂಡ ಎಸ್‌‍ಸಿ ಕೋಟದಲ್ಲಿ ಸಚಿವ ಸ್ಥಾನ ಮೇಲೆ ಕಣ್ಣಿಟ್ಟಿದ್ದಾರೆ.

ಆದರೆ ಜಿಗಜಿಣಗಿ ಹಿರಿಯರಾಗಿರುವುದರಿಂದ ಹೆಚ್ಚಿನ ಅವಕಾಶಗಳು ಅವರಿಗೆ ಸಿಗಬಹುದು. ಹಿಂದುಳಿದ ವರ್ಗದ ಕೋಟದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೂಡ ಪ್ರಬಲ ಆಕಾಂಕ್ಷಿಯಾಗಿದ್ದಾರೆ.ವಿಧಾನಪರಿಷತ್‌ನಲ್ಲಿ ಪ್ರತಿಪಕ್ಷದ ನಾಯಕರಾಗಿ, ಸಚಿವರಾಗಿ ಸುಮಾರು ಮೂರು ದಶಕಗಳ ಸುದೀರ್ಘ ರಾಜಕೀಯ ಅನುಭವ ಹೊಂದಿರುವ ಅವರಿಗೆ ಮೋದಿ ಸಂಪುಟದಲ್ಲಿ ಸಚಿವರಾಗುವ ಅದೃಷ್ಟ ಖುಲಾಯಿಸಿದರೂ ಅಚ್ಚರಿಯಿಲ್ಲ ಎಂದು ಹೇಳಲಾಗುತ್ತಿದೆ.ಸಂಪುಟಕ್ಕೆ ಸೇರ್ಪಡೆಯಾಗುವವರೆಗೂ ಗುಟ್ಟು ಬಿಟ್ಟುಕೊಡದೆ ಎಲ್ಲವನ್ನೂ ರಹಸ್ಯವಾಗಿಯೇ ಉಳಿಸಿಕೊಳ್ಳುವ ಮೋದಿ, ಅಮಿತ್‌ ಶಾ ಜೋಡಿ ಕೃಪೆ ಯಾರ ಮೇಲೆ ಎಂಬುದು ಶನಿವಾರದವರೆಗೂ ಕಾದು ನೋಡಲೇಬೇಕು.

RELATED ARTICLES

Latest News