ನವದೆಹಲಿ,ಫೆ.17- ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಅವರು, ನಿರಂತರ ಸುಳ್ಳು ಮೋದಿ ಗ್ಯಾರಂಟಿಯಿಂದ ಈ ಮೊದಲು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ 750 ರೈತರು ಪ್ರಾಣ ಕಳೆದುಕೊಂಡಿದ್ದರು. ಎರಡನೇ ಹಂತದ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಬಳಸಿದ ರಬ್ಬರ್ ಬುಲೆಟ್‍ಗಳಿಂದ ನಿನ್ನೆ ರೈತರೊಬ್ಬರು ಹುತಾತ್ಮರಾಗಿದ್ದಾರೆ. ಮೂರು ಜನ ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ನರೇಂದ್ರ ಮೋದಿಯವರ ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಮಾತ್ರ ರೈತರಿಗೆ ಕಾನೂನುಬದ್ಧವಾದ ಕನಿಷ್ಠ ಬೆಂಬಲ ಬೆಲೆ ಹಕ್ಕನ್ನು ನೀಡಲು ಸಾಧ್ಯ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ತಮ್ಮ ಪೋಸ್ಟ್‍ನಲ್ಲಿ 2014 ರಲ್ಲಿ ನರೇಂದ್ರ ಮೋದಿಯವರು ರೈತರ ಕೃಷಿ ಉತ್ಪಾದನಾ ವೆಚ್ಚಕ್ಕೆ ಹೆಚ್ಚುವರಿಯಾಗಿ ಶೇ.50 ರಷ್ಟನ್ನು ಸೇರ್ಪಡೆಗೊಳಿಸಿ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಖರ್ಗೆ ನೆನಪಿಸಿದ್ದಾರೆ.
ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆಯ ಮತದಾನ
2014 ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ 2020-21 ರಲ್ಲಿ ಕನಿಷ್ಠ ಬೆಂಬಲ ಬೆಲೆಗಾಗಿ ಮತ್ತು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರವಾಯು ಸಿಡಿಸಿದ್ದನ್ನು ಖರ್ಗೆ ಪ್ರಸ್ತಾಪಿಸಿದ್ದಾರೆ. ಆ ಪ್ರತಿಭಟನೆ ವೇಳೆ 750 ರೈತರು ಬಲಿದಾನವಾಗಿದ್ದನ್ನು ಉಲ್ಲೇಖಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಪ್ರತಿಭಟನಾ ನಿರತ ರೈತರನ್ನು ಅವಹೇಳಕಾರಿಯಾಗಿ ಬಿಂಬಿಸಿದ್ದನ್ನು ಕಾಂಗ್ರೆಸ್ ಅಧಿನಾಯಕ ಆಕ್ಷೇಪಿಸಿದ್ದಾರೆ. ಕಳೆದ ವಾರದಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ನಿರ್ಬಂಧಿಸಲು ಮುಳ್ಳು ತಂತಿಬೇಲಿ ನಿರ್ಮಿಸಿರುವುದು, ಬ್ಯಾರಿಕೇಡ್ ಹಾಕಿರುವುದು, ಡ್ರೋನ್ ಬಳಸಿ ಅಶ್ರವಾಯು ಸ್ಪೋಟಿಸುತ್ತಿರುವುದು ಸೇರಿದಂತೆ ಹಲವು ಆಕ್ಷೇಪಾರ್ಹ ಕ್ರಮಗಳನ್ನು ಖರ್ಗೆ ಖಂಡಿಸಿದ್ದಾರೆ.