ಬೆಂಗಳೂರು,ಮಾ.9- ರಾಜ್ಯದಲ್ಲಿ ಈಗ ಎಲ್ಲ ಕ್ಷೇತ್ರಗಳಲ್ಲಿ ನರೇಂದ್ರ ಮೋದಿಯವರ ಮತ್ತು ಬಿಜೆಪಿ ಪರ ವಾತಾವರಣ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ತಿಳಿಸಿದರು. ನಗರದ ಮಲ್ಲೇಶ್ವರದ ಬಾವುರಾವ್ ದೇಶಪಾಂಡೆ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರದ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಕಾರ್ಯಕ್ರಮಗಳನ್ನು ಜನರು ಮೆಚ್ಚಿಕೊಂಡಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಬಿಜೆಪಿಯೇ ಉತ್ತಮ ಮತ್ತು ನರೇಂದ್ರ ಮೋದಿಯವರ ಸರಕಾರ ಬೇಕೆಂಬ ತೀರ್ಮಾನಕ್ಕೆ ಜನರು ಬಂದಿದ್ದಾರೆ ಎಂದು ವಿಶ್ಲೇಷಿಸಿದರು.
28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯದ ಅಭ್ಯರ್ಥಿಗಳ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ. ಇಂದು, ನಾಳೆಯೊಳಗೆ ಎಲ್ಲವೂ ಅಂತಿಮವಾಗಲಿದೆ. 22, 23, 24 ಕ್ಷೇತ್ರ ಗೆಲುವಿನ ಪ್ರಶ್ನೆ ಅಲ್ಲ. ಹೊಸ ಇತಿಹಾಸವನ್ನು ಬಿಜೆಪಿ ರಾಜ್ಯದಲ್ಲಿ ಸೃಷ್ಟಿಸಲಿದೆ ಎಂದು ರಾಜ್ಯಾಧ್ಯಕ್ಷನಾಗಿ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು. ಹಿಂದೆ ಬಾರದಂಥ ಅತ್ಯುತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ನಾವಿದ್ದೇವೆ ಎಂದು ನುಡಿದರು.
ಅಭ್ಯರ್ಥಿಗಳ ವಿಚಾರ ತಾರ್ಕಿಕ ಅಂತ್ಯಕ್ಕೆ ತಲುಪಿದೆ. ಮೂರ್ನಾಲ್ಕು ದಿನಗಳಲ್ಲಿ ಎಲ್ಲ ವಿವರ ಲಭಿಸಲಿದೆ ಎಂದು ಅವರು ಪ್ರಶ್ನೆಗೆ ಉತ್ತರ ಕೊಟ್ಟರು. ಬಹುತೇಕ 2 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಲಿದೆ ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರಿಸಿದರು. ನಿಮ್ಮ ಎಲ್ಲ ಪ್ರಶ್ನೆಗಳಿಗೆ ಮೂರ್ನಾಲ್ಕು ದಿನಗಳಲ್ಲಿ ಉತ್ತರ ಲಭಿಸಲಿದೆ ಎಂದು ಅವರು ಹೇಳಿದರು.
ಡಿ.ಕೆ.ಶಿವಕುಮಾರ್‍ರ ನಡವಳಿಕೆಯನ್ನು ಖಂಡಿಸುವುದಾಗಿ ತಿಳಿಸಿದ ಅವರು, ಬೆಂಗಳೂರಿನಲ್ಲಿ 15- 20 ದಿನಗಳಿಂದ ನೀರಿನ ತೀವ್ರ ಸಮಸ್ಯೆ ಇದೆ. ಇದರ ನಡುವೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ 14ಕ್ಕೂ ಹೆಚ್ಚು ನೋಡಲ್ ಅಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ. ಅದರ ಅರ್ಥ ಏನು? ಬೆಂಗಳೂರಿನಲ್ಲಿ ಮನುಷ್ಯರೇ ಇಲ್ಲವೇ ಎಂದು ಪ್ರಶ್ನಿಸಿದರು.