ಬೆಂಗಳೂರು, ಅ. 21- ವೇಗದ ಬೌಲರ್‌ಗಳಿಗೆ ಸಹಕಾರಿಯಾಗಿದ್ದ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರುವಲ್ಲಿ ಎಡವಿರುವ ಮೊಹಮದ್ ಸಿರಾಜ್‌ಗೆ ಕೊಕ್ ನೀಡಿ ಯುವ ವೇಗಿ ಆಕಾಶ್‌ದೀಪ್‌ಗೆ ಪುಣೆ ಟೆಸ್ಟ್‌ನಲ್ಲಿ ಸ್ಥಾನ ಕಲ್ಪಿಸಬೇಕೆಂದು ಕ್ರಿಕೆಟ್ ಪಂಡಿತರು ತಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅದರಲ್ಲೂ ಪಂದ್ಯದ 5ನೇ ದಿನ ವೇಗಿ ಜಸ್‌ಪ್ರೀತ್ ಬುಮ್ರಾ 2 ವಿಕೆಟ್ ಪಡೆದು ಕಿವೀಸ್ ಬ್ಯಾಟರ್‌ಗಳ ರನ್ ದಾಹಕ್ಕೆ ತುಸು ಕಡಿವಾಣ ಹಾಕಿದ್ದರು. ಆದರೆ ಈ ಪಿಚ್‌ನಲ್ಲಿ ಹಲವಾರು ಪಂದ್ಯ ಆಡಿರುವ ಸಿರಾಜ್ ವಿಕೆಟ್ ಪಡೆಯುವಲ್ಲಿ ಎಡವಿದ್ದರು. ಅಲ್ಲದೆ ಮೊದಲ ಇನಿಂಗ್ ಕೇವಲ 2 ವಿಕೆಟ್ ಪಡೆದಿದ್ದರು. ಆದ್ದರಿಂದ ಇತ್ತೀಚೆಗೆ ಉತ್ತಮ ಫಾರ್ಮ್‌ನಲ್ಲಿದ್ದ ಸಿರಾಜ್ ಪುಣೆ ಟೆಸ್ಟ್‌ನಲ್ಲಿ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಇಂಗ್ಲೆಂಡ್ ಟೆಸ್ಟ್‌ನಲ್ಲಿ ಮೊದಲ ಪಂದ್ಯದಲ್ಲಿ ವಿಕೆಟ್ ಪಡೆಯಲು ಎಡವಿದ್ದ ಸಿರಾಜ್‌ರನ್ನು ನಂತರದ ಪಂದ್ಯಗಳಿಂದ ಹೊರಗಿಡಲಾಗಿತ್ತು. ಭಾರತದ ನೆಲದಲ್ಲಿ ಆಡಿರುವ 7 ಪಂದ್ಯಗಳಿಂದ ಸಿರಾಜ್ ಕೇವಲ 12 ವಿಕೆಟ್ ಪಡೆದಿದ್ದಾರೆ. ಅಷ್ಟೇ ಪಂದ್ಯ ಆಡಿರುವ ಜಸ್‌ಪ್ರೀತ್ ಬುಮ್ರಾ 33 ವಿಕೆಟ್ ಕಬಳಿಸಿದ್ದಾರೆ.ಆದರೆ ಆಕಾಶ್ ದೀಪ್ ಟೆಸ್ಟ್ ಪಾದರ್ಪಣೆ ಮಾಡಿದಾಗಿನಿಂದ 3 ಪಂದ್ಯಗಳಿಂದ 8 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ.
ಈ ನಡುವೆ ಆರ್‌ಸಿಬಿ ತಂಡದ ಮಾಜಿ ಹೆಡ್‌ಕೋಚ್ ಮೈಕ್ ಹೆಸನ್ ಅವರು ಮೊಹಮದ್ ಸಿರಾಜ್‌ಗಿಂತ ಆಕಾಶ್‌ದೀಪ್ ಅವರು ಉತ್ತಮ ವೇಗದ ಸಂಯೋಜನೆ ಹೊಂದಿರುವುದಲ್ಲದೆ ಬ್ಯಾಟಿಂಗ್‌ನಿಂದಲೂ ತಂಡದ ಗೆಲುವಿಗೆ ಸಹಕಾರಿ ಆಗಲಿದ್ದಾರೆ ಆದ್ದರಿಂದ ಪುಣೆ ಟೆಸ್ಟ್‌ನಲ್ಲಿ ಸಿರಾಜ್ ಬದಲಿಗೆ ಆಕಾಶ್‌ದೀಪ್‌ಗೆ ಸ್ಥಾನ ನೀಡಬೇಕೆಂದು ಆಗ್ರಹಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ 36 ರನ್‌ಗಳಿಂದ ಸೋಲು ಕಂಡಿರುವ ರೋಹಿತ್ ಪಡೆ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಜೀವಂತವಾಗಿರಿಸಿಕೊಳ್ಳಬೇಕಾದರೆ ಪುಣೆ ಟೆಸ್ಟ್ ಗೆಲ್ಲುವ ಒತ್ತಡಕ್ಕೆ ಸಿಲುಕಿದೆ.