Thursday, December 7, 2023
Homeರಾಜ್ಯಮುಂಗಾರಿನಲ್ಲಿ ಕೊರತೆ; ಹಿಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ಮುಂಗಾರಿನಲ್ಲಿ ಕೊರತೆ; ಹಿಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ

ಬೆಂಗಳೂರು, ನ.12-ಆಗಸ್ಟ್‍ನಿಂದ ನಿರಂತರ ತೀವ್ರ ಮಳೆ ಕೊರತೆ ಉಂಟಾಗಿದ್ದ ರಾಜ್ಯದಲ್ಲಿ ಈಗ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಚದುರಿದಂತೆ ಅಲ್ಲಲ್ಲಿ ಮಳೆಯಾಗುತ್ತಿದೆ. ಕೆಲವೆಡೆ ಉತ್ತಮ ಮಳೆಯಾಗಿದೆ. ಇದರಿಂದ ಹಿಂಗಾರು ಬೆಳೆಗೆ ಅನುಕೂಲವಾಗಿದ್ದರೆ, ಮುಂಗಾಗರು ಹಂಗಾಮಿನ ಬೆಳೆಗಳಿಗೆ ಹಾನಿಯುಂಟಾಗಿದೆ.

ಮುಂಗಾರಿನಲ್ಲಿ ಉಂಟಾಗಿದ್ದ ಮಳೆ ಕೊರತೆಯೂ ಹಿಂಗಾರಿನಲ್ಲಿ ಚೇತರಿಸಿಕೊಂಡಿದ್ದು, ವಾಡಿಕೆಗಿಂತ ಹೆಚ್ಚು ಮಳೆಯಾಗಿರುವುದು ಕಂಡುಬಂದಿದೆ. ಆದರೂ ಕೊಯ್ಲಿಗೆ ಬಂದಿದ್ದ ಬತ್ತ, ರಾಗಿ ಮೊದಲಾದ ಬೆಳೆಗಳಿಗೆ ತೊಂದರೆಯಾಗಿದೆ. ಆದರೆ, ರಾಜ್ಯಾದ್ಯಂತ ತೀವ್ರ ಬರ ಪರಿಸ್ಥಿತಿ ಇರುವುದರಿಂದ ಮುಂಗಾರು ಹಂಗಾಮಿನ ಬಹುತೇಕ ಬೆಳೆಗಳು ಹಾನಿಗೀಡಾಗಿವೆ. ಹಿಂಗಾರು ಆರಂಭವೂ ವಿಳಂಬವಾದ ಹಿನ್ನೆಲೆಯಲ್ಲಿ ಹಿಂಗಾರು ಹಂಗಾಮಿನ ಬಿತ್ತನೆಯೂ ವಾಡಿಕೆ ಪ್ರಮಾಣದಲ್ಲಿ ಆಗಿಲ್ಲ.

ಇತ್ತೀಚೆಗೆ ಒಂದು ವಾರ ಕಾಲ ಬಿದ್ದ ಮಳೆಯಿಂದ ಬಿತ್ತನೆ ಮಾಡಿರುವ ಬೆಳೆಗಳಿಗೆ ಸಾಕಷ್ಟು ಅನುಕೂಲವಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾದ ಹಿನ್ನೆಯಲ್ಲಿ ಜಲಾಶಯಗಳ ಒಳಹರಿವು ಸಹ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ.

ಮಳೆ ಕೊರತೆಯಿಂದಾಗಿ ಬಹುತೇಕ ಜಲಾಶಯಗಳ ಒಳಹರಿವು ನಿಂತಿತ್ತು. ಹಿಂಗಾರು ಚೇತರಿಸಿಕೊಂಡು ಬಹಳಷ್ಟು ಕಡೆಗಳಲ್ಲಿ ಉತ್ತಮ ಮಳೆಯಾದ್ದರಿಂದ ಪ್ರಮುಖ ಜಲಾಶಗಳಿಗೆ ಒಳಹರಿವಿನ ಪ್ರಮಾಣ ಸ್ವಲ್ಪ ಹೆಚ್ಚಿದೆ. ಈಗಾಗಲೇ ಚಳಿಗಾಲ ಆರಂಭವಾಗಿರುವುದರಿಂದ ಮುಂದೆ ಉತ್ತಮ ಮಳೆಯಾಗುವ ಸಾಧ್ಯತೆ ವಿರಳ. ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ನವೆಂಬರ್ ಒಂದರಿಂದ ನಿನ್ನೆಯವರೆಗೆ ರಾಜ್ಯದಲ್ಲಿ ಉತ್ತಮ ಮಳೆಯಾಗಿದೆ.

ಈ ಅವಧಿಯಲ್ಲಿ ವಾಡಿಕೆ ಮಳೆ ಪ್ರಮಾಣ 53 ಮಿ.ಮೀ. ಇದ್ದು, 156 ಮಿ.ಮೀ.ನಷ್ಟು ಮಳೆಯಾಗಿದೆ. ಇದರಿಂದ ವಾಡಿಕೆಗಿಂತ ಶೇ. 156ರಷ್ಟು ಮಳೆಯಾದಂತಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ. 171, ಉತ್ತರ ಒಳನಾಡಿನಲ್ಲಿ ಶೇ.93, ಮಲೆನಾಡಿನಲ್ಲಿ ಶೇ.186 ಹಾಗೂ ಕರಾವಳಿಯಲ್ಲಿ ಶೇ.226ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ.

ನವೆಂಬರ್ ತಿಂಗಳು ಚಳಿಗಾಲವಾಗಿರುವುದರಿಂದ ವಾಡಿಕೆ ಮಳೆಯ ಪ್ರಮಾಣ ಕಡಿಮೆಯೇ ಇದೆ. ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯಾಗಿದೆ. ಕಳೆದ ಒಂದು ವಾರದಲ್ಲೂ ವಾಡಿಕೆಗಿಂತ ಶೇ.277ರಷ್ಟು ಅಧಿಕ ಮಳೆಯಾಗಿದೆ. ಈ ಅವಧಿಯ ವಾಡಿಕೆ ಪ್ರಮಾಣ 13 ಮಿ.ಮೀ. ಆಗಿದ್ದು, 48 ಮಿ.ಮೀ.ನಷ್ಟು ಮಳೆಯಾಗಿದೆ.

ಮುಂಗಾರು ಆರಂಭವಾಗುವ ಜೂನ್‍ನಿಂದ ನಿನ್ನೆಯವರೆಗೆ ಶೇ.26ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಅಕ್ಟೋಬರ್ ಒಂದರಿಂದ ನಿನ್ನೆಯವರೆಗಿನ ಮಾಹಿತಿ ಅವಲೋಕಿಸಿದರೆ, ವಾಡಿಕೆ ಮಳೆ ಪ್ರಮಾಣ 152 ಮಿ.ಮೀ. ಇದ್ದು, ಕೇವಲ 99 ಮಿ.ಮೀ.ನಷ್ಟು ಮಾತ್ರ ಮಳೆಯಾಗಿದೆ. ರಾಜ್ಯದಲ್ಲಿ ಶೇ.35ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಕರಾವಳಿಯಲ್ಲಿ ಶೆ.14ರಷ್ಟು ಹೆಚ್ಚು ಮಳೆಯಾಗಿದ್ದರೆ ಮಲೆನಾಡಿನಲ್ಲಿ ಶೇ. 10, ಉತ್ತರ ಒಳನಾಡಿನಲ್ಲಿ ಶೇ.72, ದಕ್ಷಿಣ ಒಳನಾಡಿನಲ್ಲಿ ಶೇ.25ರಷ್ಟು ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಜಲಾಶಯಗಳ ಮಾಹಿತಿ: ರಾಜ್ಯದ 14 ಪ್ರಮುಖ ಜಲಾಶಗಳ ಗರಿಷ್ಠ ನೀರು ಸಂಗ್ರಹ ಸಾಮಥ್ರ್ಯ 895.62 ಟಿಎಂಸಿ ಅಡಿ ಇದೆ. ಪ್ರಸ್ತುತ 480.34 ಟಿಎಂಸಿಯಷ್ಟು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಯಲ್ಲಿ 794.46 ಟಿಎಂಸಿಯಷ್ಟು ನೀರು ಸಂಗ್ರವಾಗಿತ್ತು. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 314 ಟಿಎಂಸಿಯಷ್ಟು ಕಡಿಮೆ ನೀರಿದೆ. ಒಟ್ಟಾರೆ ಎಲ್ಲಾ ಜಲಾಶಯಗಳಲ್ಲಿ ಸರಾಸರಿ ಶೇ.54ರಷ್ಟು ಮಾತ್ರ ನೀರಿದೆ. ಒಳಹರಿವಿನ ಪ್ರಮಾಣ 17787 ಕ್ಯುಸೆಕ್‍ನಷ್ಟಿದ್ದರೆ, ಹೊರ ಹರಿವು 24349 ಕ್ಯುಸೆಕ್‍ನಷ್ಟಿದೆ.

ಶಿಶುವಿಹಾರಗಳಲ್ಲಿ ಮದ್ದುಗುಂಡು ಮುಚ್ಚಿಟ್ಟಿರುವ ಹಮಾಸ್ ಉಗ್ರರು

ಜಲ ವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ, ಸೂಪ, ವರಾಹಿ ಜಲಾಶಯಗಳಿಗೆ 843 ಕ್ಯುಸೆಕ್ ಒಳಹರಿವಿದ್ದರೆ, 2581 ಕ್ಯುಸೆಕ್ ಹೊರ ಹರಿವಿದೆ. ಕಾವೇರಿ ಕೊಳ್ಳದ ಹಾರಂಗಿ, ಹೇಮಾವತಿ, ಕೆಆರ್‍ಎಸ್ ಹಾಗೂ ಕಬಿನಿ ಜಲಾಶಯಗಳ ಒಳಹರಿವು 10 ಸಾವಿರ ಕ್ಯುಸೆಕ್‍ನಷ್ಟಿದ್ದು, ಹೊರ ಹರಿವು 1200 ಕ್ಯುಸೆಕ್‍ಗೂ ಹೆಚ್ಚಿದೆ.

ಕೃಷ್ಣಾ ಕೊಳದ ಭದ್ರಾ, ತುಂಗಭದ್ರಾ, ಘಟಪ್ರಭಾ, ಮಲಪ್ರಭಾ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಗೆ 6659 ಕ್ಯುಸೆಕ್‍ನಷ್ಟು ಒಳ ಹರಿವಿದ್ದರೆ, 19881ರಷ್ಟು ಹೊರ ಹರಿವಿದೆ. ವಾಣಿವಿಲಾಸ ಸಾಗರ ಜಲಾಶಯಕ್ಕೆ 17787 ಕ್ಯುಸೆಕ್‍ನಷ್ಟು ಒಳಹರಿವು ಇದ್ದರೆ, 24349ರಷ್ಟು ಹೊರ ಹರಿವಿದೆ.

ಮುಂಗಾರು ಮಳೆಯ ವೈಫಲ್ಯದಿಂದಾಗಿ ಈಗಾಗಲೇ ಕುಡಿಯುವ ನೀರು, ವಿದ್ಯುತ್ ಹಾಗೂ ಜಾನುವಾರುಗಳ ಮೇವಿನ ಸಮಸ್ಯೆ ಕಂಡುಬರುತ್ತಿದೆ. ಹಿಂಗಾರು ಕೂಡ ಕೈ ಕೊಟ್ಟರೆ, ಬೇಸಿಗೆಯಲ್ಲಿ ರಾಜ್ಯ ತೀವ್ರ ಸ್ವರೂಪದ ಸಮಸ್ಯೆ ಎದುರಿಸಬೇಕಾಗಬಹುದು.

RELATED ARTICLES

Latest News