Sunday, April 20, 2025
Homeರಾಜ್ಯವಲಸಿಗರಿಂದ ಅಪರಾಧ ಹೆಚ್ಚಳ : ಗೃಹ ಸಚಿವ

ವಲಸಿಗರಿಂದ ಅಪರಾಧ ಹೆಚ್ಚಳ : ಗೃಹ ಸಚಿವ

Minister G. Parameshwara

ಬೆಂಗಳೂರು, ಏ.14- ಹೊರರಾಜ್ಯಗಳಿಂದ ರಾಜ್ಯಕ್ಕೆ ಉದ್ಯೋಗ ಅರಸಿ ಬರುವವರಿಂದ ಅಪರಾಧ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಪ್ರತ್ಯೇಕ ಸಭೆ ನಡೆಸುವುದಾಗಿ ಗೃಹಸಚಿವ ಡಾ.ಜಿ.ಪರಮೇಶ್ವ‌ರ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು ಕರ್ನಾಟಕದಲ್ಲಿ ವಲಸೆ ಕಾರ್ಮಿಕರಿಂದ ಅಪರಾಧಗಳು ಹೆಚ್ಚಾಗುತ್ತಿರುವುದು ಸರ್ಕಾರದ ಗಮನದಲ್ಲಿದೆ. ವಲಸಿಗರಿಗೆ ಇಲ್ಲಿನ ಸಂಸ್ಕೃತಿ ಹಾಗೂ ಇಲ್ಲಿನ ಭಾವನೆಗಳು ಅರ್ಥವಾಗುವುದಿಲ್ಲವೇನೋ ಎನ್ನಿಸುತ್ತದೆ. ನಿರ್ಮಾಣ ಕಾಮಗಾರಿಯ ಕಾರ್ಮಿಕರು ಹಾಗೂ ಇತರರು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದನ್ನು ತಡೆಯಲು ಕಾರ್ಮಿಕ ಇಲಾಖೆಯೊಂದಿಗೆ ಪ್ರತ್ಯೇಕ ಸಭೆ ನಡೆಸಿ ಯಾವ ರೀತಿಯ ಕ್ರಮ ಕೈಗೊಳ್ಳಲು ಸಾಧ್ಯ ಎಂಬುದನ್ನು ಪರಿಶೀಲಿಸುತ್ತೇವೆ ಎಂದರು.

ನಿನ್ನೆ ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿ 5 ವರ್ಷದ ಬಾಲಕಿಯನ್ನು ಕರೆದುಕೊಂಡು ಹೋಗಿ ಕೊಲೆ ಮಾಡಿದ್ದಾನೆ. ಕೆಲವೇ ಸಮಯದಲ್ಲಿ ಆತನನ್ನು ಬಂಧಿಸಲಾಗಿದೆ. ಸ್ಥಳ ಮಹಜರಿಗೆ ಆರೋಪಿಯನ್ನು ಕರೆದುಕೊಂಡು ಹೋಗುವಾಗ ಆತ ಪೊಲೀಸರ ಮೇಲೆ ದಾಳಿ ನಡೆಸಿದ್ದಾನೆ.

ಆಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ. ಆರಂಭದಲ್ಲಿ ಕಾಲಿಗೆ ಗುಂಡು ಹಾರಿಸಲು ಯತ್ನಿಸಿದ್ದಾರೆ. ಅದು ಬೆನ್ನಿಗೆ ಬಿದ್ದಿದೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಗೆ ಹೋಗುವ ವೇಳೆಗೆ ಆತ ಸಾವನ್ನಪ್ಪಿದ್ದಾನೆ ಎಂದು ತಿಳಿಸಿದರು.

ತಕ್ಷಣವೇ ತನಿಖೆಗೆ ಆದೇಶಿಸಲಾಗಿದ್ದು, ಹಿರಿಯ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ತನಿಖೆಯ ಬಳಿಕ ವಾಸ್ತವ ಮಾಹಿತಿ ತಿಳಿದುಬರಲಿದೆ ಎಂದರು.

ಬಿಟಿಎಂ ಲೇಔಟ್‌ನ ಘಟನೆಗೆ ಸಂಬಂಧಪಟ್ಟಂತೆ ಗುಲ್ಬರ್ಗ ಮೂಲದ ವ್ಯಕ್ತಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಆತನನ್ನು ಬೆಂಗಳೂರಿಗೆ ಕರೆತಂದ ಬಳಿಕ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದರು.

ಸಚಿವರಿಂದ ಪಿಎಸ್‌ ಐಗೆ ಸೆಲ್ಯೂಟ್ :

ಮತ್ತೊಂದೆಡೆ ಹುಬ್ಬಳ್ಳಿಯಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಆರೋಪಿಯ ದಾಳಿಯಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಿಎಸ್‌ಐ ಅನ್ನಪೂರ್ಣ ಹಾಗೂ ಪೊಲೀಸ್ ಸಿಬ್ಬಂದಿಗಳ ಯೋಗಕ್ಷೇಮ ವಿಚಾರಿಸಿದರು.

ಎನ್‌ಕೌಂಟರ್ ನಡೆಸಿದ ಪಿಎಸ್‌ಐ ಅನ್ನಪೂರ್ಣ ಅವರಿಗೆ ಸೆಲ್ಯೂಟ್ ಮಾಡಿರುವ ಸಂತೋಷ್ ಲಾಡ್ ಆಕೆಯ ಕೈ ಹಿಡಿದು ಧೈರ್ಯ ತುಂಬಿದ್ದಾರೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಸಚಿವರ ಭೇಟಿಯ ವೇಳೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾ‌ರ್ ಹಾಗೂ ಹಿರಿಯ ಅಧಿಕಾರಿ ಉಪಸ್ಥಿತರಿದ್ದರು.

RELATED ARTICLES

Latest News