ಥಾಣೆ, ಸೆ.9 -ಮಧ್ಯರಾತ್ರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಕಟ್ಟಡ ಒಂದು ಭಾಗ ಕುಸಿದು ಅವಷೇಷಗಳು ಮೇಲೆ ಬಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಅವರ ಸೊಸೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿ ನಡೆದಿದೆ.
ಮುಂಬ್ರಾ ಪ್ರದೇಶದ ದೌಲತ್ ನಗರದ ಲಕ್ಕಿ ಕಾಂಪೌಂಡ್‌ನಲ್ಲಿ ಮಧ್ಯರಾತ್ರಿ 12.36 ಕ್ಕೆ ಈ ಘಟನೆ ಸಂಭವಿಸಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತಡ್ವಿ ತಿಳಿಸಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದ ಫ್ಲಾಟ್‌ನ ಪ್ಯಾರಪೆಟ್‌ನ ಒಂದು ಭಾಗ ಕುಸಿದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಮೇಲೆ ಬಿದ್ದಿದೆ ಎಂದು ಅವರು ಹೇಳಿದರು.
ಅವರಲ್ಲಿ ಸನಾ ಟವರ್ ನಿವಾಸಿಯಾದ ಅತ್ತೆ ನಹಿದ್ ಜೈನುದ್ದೀನ್ ಜಮಾಲಿ (62) ಸಾವನ್ನಪ್ಪಿದ್ದಾರೆ ಸೊಸೆ ಇಲಾ ಜೆಹ್ರಾ ಜಮಾಲಿ (26)ಗಾಯಗೊಂಡಿದ್ದು ಅವರನ್ನುಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಸಿದಿರುವ ಕಟ್ಟಡವನ್ನು ಹಿಂದೆಯೇ ಅಪಾಯಕಾರಿ ಎಂದು ಘೋಷಿಸಿತ್ತು ಮತ್ತು ಸುರಕ್ಷತಾ ಕಾರಣಗಳಿಗಾಗಿ, ಕಟ್ಟಡದಲ್ಲಿರುವ ಎಲ್ಲಾ ಮನೆಗಳನ್ನು ತೆರವುಗೊಳಿಸಲಾಯಿತು ಮತ್ತು ಆವರಣವನ್ನು ಸೀಲ್ ಮಾಡಲಾಗಿದೆಎಂದು ಅಧಿಕಾರಿ ಹೇಳಿದರು.ದುರಾದೃಷ್ಟವಾಗಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.