ಬೆಂಗಳೂರು,ಸೆ.25- ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದಡಿ ಅಗತ್ಯ ಪಾಲು ನೀಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆಯಿತು.
ಸಚಿವರಾದ ಡಾ. ಜಿ. ಪರಮೇಶ್ವರ, ಹೆಚ್.ಕೆ. ಪಾಟೀಲ, ಈಶ್ವರ್‌ಖಂಡ್ರೆ, ಕೆ. ಸುಧಾಕರ್, ಡಾ. ಎಂ.ಸಿ. ಸುಧಾಕರ್, ಎನ್.ಎಸ್. ಬೋಸರಾಜು, ಪ್ರಿಯಾಂಕ ಖರ್ಗೆ, ಡಿ.ಸುಧಾಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪಿಎಸ್‌ಐ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿ ಚಾಲ್ತಿಯಲ್ಲಿದೆ. ಅದರ ಕುರಿತು ಪ್ರಗತಿಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ನೇಮಕಾತಿ ಪ್ರಕ್ರಿಯೆಗಳು ಚುರುಕುಗೊಳ್ಳಬೇಕು. ಅದೇ ಸಂದರ್ಭದಲ್ಲಿ 371 ಜೆ ಸ್ಥಾನಮಾನದ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕಾತಿಯಲ್ಲಿ ಸೂಕ್ತ ಪಾಲು ನೀಡಬೇಕು ಎಂದು ಸೂಚಿಸಿದರು.
ಇತ್ತೀಚೆಗೆ ನಡೆದಿರುವ ಪಿಎಸ್‌ಐ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರ್ದಿಷ್ಟ ಸ್ಥಾನಗಳ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಭವನೀಯ ನೇಮಕಾತಿ ಪಟ್ಟಿಯನ್ನು ತಡೆಹಿಡಿಯುವಂತೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ.