ಬೆಂಗಳೂರು,ಏ.20- ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವಾಗಲೇ ರಾಜ್ಯದ ಎಲ್ಲಾ 28 ಸಂಸದರ ಕಾರ್ಯ ವೈಖರಿ ಬಗ್ಗೆ ವಿಶ್ಲೇಷಣೆ ಮಾಡಲಾಗಿದೆ. ಈ ಪೈಕಿ ಬಹುತೇಕ ಮಂದಿ ತಮ್ಮ ಅಧಿಕಾರಾವಧಿಯ ಐದು ವರ್ಷಗಳಲ್ಲಿ ಕಳಪೆ ಸಾಧನೆ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಎಲ್ಲ ಸಂಸದರ ಸರಾಸರಿ ಹಾಜರಾತಿ ಶೇ.71ರಷ್ಟಿದೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ. ಸಂಸತ್ತಿನಲ್ಲಿ ಅವರ ಹಾಜರಾತಿ, ಕೇಳಿದ ಪ್ರಶ್ನೆಗಳು, ಪ್ರಮುಖ ಚರ್ಚೆಗಳಲ್ಲಿ ಭಾಗವಹಿಸುವಿಕೆ ಮತ್ತು ಅವರ ಕ್ಷೇತ್ರಗಳಲ್ಲಿನ ಕಾರ್ಯಕ್ಷಮತೆಯನ್ನು ಸಮೀಕ್ಷೆ ಪರಿಗಣಿಸಿದೆ.
ಸಾಮಾಜಿಕ ವಿಜಾ್ಞನಿಗಳಾದ ಎ.ಆರ್.ವಾಸವಿ ಮತ್ತು ಜಾನಕಿ ನಾಯರ್ ಅವರು ಈ ವಿಶ್ಲೇಷಣೆ ನಡೆಸಿದ್ದಾರೆ. ಡಿ.ಕೆ.ಸುರೇಶ್ (ಬೆಂಗಳೂರು ಗ್ರಾಮಾಂತರ) ಮತ್ತು ಪ್ರಹ್ಲಾದ್ ಜೋಶಿ ಅವರು ಕೋವಿಡ್ ಸಮಯದಲ್ಲಿ ಜನರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬೆಂಗಳೂರು ಉತ್ತರ ಸಂಸದ ಸದಾನಂದಗೌಡ, ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಧಾರವಾಡ ಸಂಸದ ಪ್ರಲ್ಹಾದ ಜೋಶಿ ಮತ್ತು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರು ಸದನದಲ್ಲಿ ಪ್ರಶ್ನೆ ಎತ್ತಲಿಲ್ಲ. ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸಿದ್ದು ಬಿಟ್ಟರೆ ಅನಂತಕುಮಾರ್ ಹೆಗಡೆ (ಉತ್ತರ ಕನ್ನಡ ಸಂಸದ), ಡಿ.ವಿ.ಸದಾನಂದಗೌಡ, ಜೋಶಿ, ರಮೇಶ್ ಜಿಗಜಿಣಗಿ (ವಿಜಯಪುರ), ಶ್ರೀನಿವಾಸ ಪ್ರಸಾದ್ (ಚಾಮರಾಜನಗರ) ಮತ್ತು ಬಚ್ಚೇಗೌಡ (ಚಿಕ್ಕಬಳ್ಳಾಪುರ) ಚರ್ಚೆಯಲ್ಲಿ ಭಾಗವಹಿಸಲಿಲ್ಲ ಎಂದು ವಿಶ್ಲೇಷಣೆ ಹೇಳಿದೆ. ಮಂಗಳಾ ಅಂಗಡಿ (ಬೆಳಗಾವಿ) ಒಂದು ಚರ್ಚೆಯಲ್ಲಿ ಭಾಗವಹಿಸಿ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಹೆಚ್ಚಿನ ವಿಮಾನ ಒದಗಿಸುವಂತೆ ಕೋರಿದ್ದರು.
ಹನ್ನೊಂದು ಸಂಸದರು ನಿಯನ್ನು ನಿರ್ದೇಶಿಸುವ ಮೂಲಕ ಅಥವಾ ಸಭೆಗಳಿಗೆ ಹಾಜರಾಗುವ ಮೂಲಕ ಸೀಮಿತ ಕೆಲಸ ಮಾಡಿದ್ದಾರೆ. ಹದಿನೈದು ಮಂದಿ ಸಂಸದರು ನಿರಾಸಕ್ತರು ಎಂದು ಪರಿಗಣಿಸಲಾಗಿದೆ. ತೇಜಸ್ವಿ ಸೂರ್ಯ (ಬೆಂಗಳೂರು ದಕ್ಷಿಣ) ಮತ್ತು ಶ್ರೀನಿವಾಸಪ್ರಸಾದ್ ನೆಗೆಟಿವ್ ರೋಲ್ ನಿರ್ವಹಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ.
ರಾಜ್ಯಕ್ಕೆ ಜಿಎಸ್ಟಿ ಕೊಡುಗೆಗಳು ಮತ್ತು ತೆರಿಗೆ ಹಂಚಿಕೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸುರೇಶ್ ಮತ್ತು ರಾಜ್ಯದಲ್ಲಿ ಜನೌಷದಿ ಕೇಂದ್ರಗಳನ್ನು ಉತ್ತೇಜಿಸಲು ಸದಾನಂದ ಗೌಡ ಅವರು ಮಾತ್ರ ಕರ್ನಾಟಕದ ನೀತಿಗಳು ಮತ್ತು ಕಾರ್ಯಕ್ರಮಗಳ ಪರ ಮಾತನಾಡಿದ್ದಾರೆ ಎಂಬುದನ್ನು ಪರಿಗಣಿಸಲಾಗಿದೆ.