Sunday, November 24, 2024
Homeರಾಜ್ಯಮುಡಾ ಪ್ರಕರಣ : ಸಿಎಂ ಬಂಧಿಸಿ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ಮತ್ತೊಂದು ದೂರು

ಮುಡಾ ಪ್ರಕರಣ : ಸಿಎಂ ಬಂಧಿಸಿ ವಿಚಾರಣೆ ನಡೆಸುವಂತೆ ಲೋಕಾಯುಕ್ತಕ್ಕೆ ಮತ್ತೊಂದು ದೂರು

Muda case: Another complaint to Lokayukta seeking to arrest CM and investigate

ಮೈಸೂರು, ಅ.14- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದು, ತನಿಖೆಯ ದಿಕ್ಕು ತಪ್ಪಿಸುವ ಪ್ರಯತ್ನ ನಡೆಸುತ್ತಿದ್ದಾರೆ ಹಾಗೂ ಪ್ರಚೋದನೆ ನೀಡುವ ಕೃತ್ಯದಲ್ಲಿ ನಿರಂತರವಾಗಿ ಭಾಗಿಯಾಗುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳ ಪಡಿಸುವಂತೆ ದೂರುದಾರ ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸ್ ಅಧ್ಯಕ್ಷಕರಿಗೆ ದೂರು ನೀಡಿದ್ದಾರೆ.

ದಸರಾ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ನೀಡಲಾದ ಜಾಹೀರಾತುವಿನಲ್ಲಿ ಮುಖ್ಯಮಂತ್ರಿಯವರು ತಮ್ಮ ಮೇಲಿನ ಆರೋಪವನ್ನು ಮುಚ್ಚಿಕೊಳ್ಳಲು ಹಾಗೂ ಪ್ರಚೋದನೆ ನೀಡಲು ಸಾರ್ವಜನಿಕರ ಹಣವನ್ನು ದುರ್ಬಳಕೆ ಮಾಡಿದ್ದಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯವನ್ನು ವಾಮಮಾರ್ಗ ಹಾಗೂ ಮೋಸದಿಂದ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿರುವ ದುಷ್ಟ ಶಕ್ತಿಗಳನ್ನು ತಾಯಿ ಚಾಮುಂಡೇಶ್ವರಿ ದೇವಿಯು ನಿಗ್ರಹಿಸಿ ನಾಡಿನ ಜನತೆಗೆ ಸುಖ, ಶಾಂತಿ ಮತ್ತು ನೆಮ್ಮದಿ ಕರುಣಿಸಲಿ ಎಂದು ಉಲ್ಲೇಖಿಸಲು ಕಾರಣಗಳೇನು? ಎಂದು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸುವಾಗ ಲಗತ್ತಿಸಿರುವ ದಾಖಲೆಗಳನ್ನು ಸ್ನೇಹಮಯಿ ಕೃಷ್ಣ ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿದ್ದು, ಅದರಲ್ಲಿನ ಪ್ರತಿಯೊಂದು ವಿಚಾರಗಳನ್ನೂ ವಿಸ್ತರಿತವಾಗಿ ವಿವರಿಸಿದ್ದಾರೆ.

ಯಾವೆಲ್ಲಾ ದಾಖಲಾತಿಗಳನ್ನು ಪರಿಶೀಲಿಸಬೇಕು. ಯಾವೆಲ್ಲಾ ಅಂಶಗಳನ್ನು ಪರಿಗಣಿಸಬೇಕು ಎಂಬ ವಿಚಾರಗಳನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರ ಸಹೋದರ ಮಲ್ಲಿಕಾರ್ಜುನ ಸ್ವಾಮಿಯವರು ಮದುವೆಯಾದಾಗಿನಿಂದಲೂ ಯಾವುದೇ ಆಸ್ತಿಗಳನ್ನು ಉಡುಗೊರೆಯಾಗಿ ನೀಡದೇ ಇದ್ದವರು 2010 ರಲ್ಲೇ ಕೆಸರೆ ಗ್ರಾಮದ ಜಮೀನನ್ನು ದಾನ ಪತ್ರ ಮಾಡಿಕೊಟ್ಟಿದ್ದೇಕೆ? ಎಂಬ ಅಂಶಗಳನ್ನು ಪ್ರಶ್ನಿಸಲಾಗಿದೆ.

ದೇವರಾಜು ಅವರ ಜಮೀನಿನ ಮಾಲೀಕತ್ವವನ್ನು ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ. ಕಾಲಕಾಲಕ್ಕೆ ಮುಡಾಗೆ ಸಲ್ಲಿಸಲಾದ ಮನವಿಗಳನ್ನು ಸಿದ್ಧಪಡಿಸಿದವರು ಯಾರು?, ಭೂಸ್ವಾಧಿನ ಮತ್ತು ಭೂ ಪರಿವರ್ತನೆ ಪ್ರಕ್ರಿಯೆಗಳ ಲೋಪಗಳೇನು? ಎಂಬುದನ್ನು ಸಮಗ್ರವಾಗಿ ವಿವರಿಸಲಾಗಿದೆ.

ಮಲ್ಲಿಕಾರ್ಜುನ ಸ್ವಾಮಿ ಭೂಮಿಯನ್ನು ಖರೀದಿಸಲು 5,95,000 ರೂ.ಗಳನ್ನು ನೀಡಿರುವುದಾಗಿ ಕ್ರಯಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆ ಹಣ ಅವರ ಸ್ವಂತದ್ದೇ? ಎಂಬ ಪ್ರಶ್ನೆಯನ್ನು ಸ್ನೇಹಮಯಿ ಕೃಷ್ಣ ಎತ್ತಿದ್ದಾರೆ. ಮಲ್ಲಿಕಾರ್ಜುನ ಸ್ವಾಮಿಯವರು ಸಿದ್ದರಾಮಯ್ಯನವರ ಪತ್ನಿಗೆ ದಾನಪತ್ರ ನೋಂದಣಿ ಮಾಡಿಕೊಡುವ ಮೊದಲೇ ಸದರಿ ಜಮೀನಿನಲ್ಲಿ 19 ನಿವೇಶನಗಳ ಕ್ರಯಪತ್ರಗಳು ನೋಂದಣಿಯಾಗಿರುವುದು ಕಂಡುಬಂದಿದೆ. ಇದನ್ನು ನೋಡಿದರೆ ಮುಡಾ ಬಡಾವಣೆ ನಿರ್ಮಿಸಿ ಮಾರಾಟ ಮಾಡಿದ್ದು ಸ್ಪಷ್ಟವಾಗಿದೆ. ಆದರೂ ಕೃಷಿ ಭೂಮಿಯೆಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿದೆ. ಸಿದ್ದರಾಮಯ್ಯನವರು ಹೈಕೋರ್ಟ್ಗೆ ಸಲ್ಲಿಸಲಾದ ದಾಖಲಾತಿಗಳಲ್ಲೇ ಈ ಎಲ್ಲಾ ಅಂಶಗಳೂ ಉಲ್ಲೇಖವಾಗಿದೆ ಎಂದು ವಿವರಿಸಲಾಗಿದೆ.

ಒಟ್ಟು 25 ಪುಟಗಳ ಸುದೀರ್ಘ ಪತ್ರವನ್ನು ಲೋಕಾಯುಕ್ತ ಎಸ್ಪಿಯವರಿಗೆ ಬರೆದಿರುವ ಸ್ನೇಹಮಯಿ ಕೃಷ್ಣ, ಜಾಹೀರಾತು ಪ್ರಕಟಗೊಂಡ ದಿನವೇ ತಾವು ಆನ್‌ಲೈನ್‌ನಲ್ಲಿ ಈ ಪತ್ರವನ್ನು ನೀಡಿದ್ದು, ಅ.10 ರಂದು ಲಿಖಿತವಾಗಿ ಸಲ್ಲಿಸುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿಯವರು ಹೇಳುವ ಕರಾರುಪತ್ರವನ್ನು ನ್ಯಾಯಾಲಯಕ್ಕೆ ಏಕೆ ಸಲ್ಲಿಸಿಲ್ಲ ಎಂಬ ಪ್ರಶ್ನೆಯನ್ನು ಸ್ನೇಹಮಯಿ ಕೃಷ್ಣ ಮುಂದಿಟ್ಟಿದ್ದಾರೆ.

ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರನ್ನು ವಿಚಾರಗೊಳಪಡಿಸಿದ ವೇಳೆಯಲ್ಲಿ ಕೇಳಬೇಕಾದ ಪ್ರಶ್ನೆಗಳ ಸರಪಳಿಯನ್ನೇ ಸ್ನೇಹಮಯಿ ಕೃಷ್ಣ ಉಲ್ಲೇಖಿಸಿದ್ದಾರೆ. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯನವರು ತಮ್ಮ ಸಾಮಾಜಿಕ ಜಾಲತಾಣ, ವಿವಿಧ ಮಾಧ್ಯಮಗಳಲ್ಲಿ ನೀಡಿರುವ ಹೇಳಿಕೆಗಳನ್ನು ನಮೂದಿಸಲಾಗಿದೆ. ಮುಡಾದ ನಿರ್ಣಯದ ಸಾಚಾತನದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಲಾಗಿದೆ.

ಜಮೀನಿನ ನೋಂದಣಿ ಸೇರಿದಂತೆ ಪ್ರತಿ ಹಂತದಲ್ಲೂ ಸಿದ್ದರಾಮಯ್ಯ ಅವರು ಪ್ರಭಾವ ಬಳಸಿದ್ದಾರೆ. ಈಗ ದುಷ್ಟಶಕ್ತಿ, ಶಿಷ್ಟಶಕ್ತಿ ಎಂಬ ಪ್ರಚೋದನಾತ್ಮಕ ಮಾತುಗಳನ್ನಾಡುತ್ತಿದ್ದಾರೆ. ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು. ಇಲ್ಲವಾದರೆ ನಿಮ್ಮ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸುವುದು ಅನಿವಾರ್ಯವಾಗುತ್ತದೆ ಎಂದು ತನಿಖಾಧಿಕಾರಿಗೆ ಸ್ನೇಹಮಯಿ ಕೃಷ್ಣ ಎಚ್ಚರಿಕೆ ನೀಡಿದ್ದಾರೆ.

RELATED ARTICLES

Latest News