ಬೆಂಗಳೂರು, ಡಿ.4- ಮೈಸೂರು ನಗರಾಭಿವೃದ್ಧಿ ಪ್ರಾಧಿ ಕಾರದ (ಮುಡಾ) ನಿವೇಶನ ಹಂಚಿಕೆ ಸಂಬಂಧ ವಿಶೇಷ ಭೂ ಅಧಿಕಾರಿ(ಎಸ್ಎಲ್ಓ) ಮಂಜು ನಾಥ್ ಅವರು, ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳ ಮುಂದೆ ವಿಚಾರಣೆ ಎದುರಿಸಿದರು.
ಬೆಂಗಳೂರಿನ ಶಾಂತಿ ನಗರದಲ್ಲಿರುವ ಇ.ಡಿ.ಕಚೇರಿಗೆ ಒಂದು ಬ್ಯಾಗ್ನಲ್ಲಿ ದಾಖಲೆಗಳನ್ನು ಇಟ್ಟುಕೊಂಡು ಬೆಳಿಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾದ ಮಂಜುನಾಥ್ ಅವರನ್ನು ಇ.ಡಿ.ಅಧಿಕಾರಿಗಳು ಸುಮಾರು ಮೂರು ಗಂಟೆಗೂ ಹೆಚ್ಚು ಕಾಲ ವಿಚಾರಣೆ ನಡೆಸಿ ಪ್ರಕರಣ ಸಂಬಂಧ ಮಾಹಿತಿ ಪಡೆದುಕೊಂಡರು.
ಮುಡಾದಲ್ಲಿ ವಿಶೇಷ ಭೂ ಅಧಿಕಾರಿಯಾಗಿದ್ದ ಮಂಜುನಾಥ್ ಅವರು, ಕಾನೂನು ಉಲ್ಲಂಘಿಸಿ ಬೇಕಾಬಿಟ್ಟಿ ನಿವೇಶನಗಳನ್ನು ಹಂಚಿ ನೂರಾರು ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂಬ ಆರೋಪವಿದೆ. ನಿಯಮಗಳನ್ನು ಉಲ್ಲಂಘನೆ ಮಾಡಿ ತಮಗೆ ಬೇಕಾದವರಿಗೆ ನಗರದ ಪ್ರಮುಖ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ ಮಾಡುವಲ್ಲಿ ಇವರ ಪ್ರಮುಖ ಪಾತ್ರವಿತ್ತು ಎಂಬ ಆರೋಪವಿದೆ.
ಮೊದಲೇ ಇ.ಡಿ.ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು. ಇಂತಹ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ನಿಮ ಮೇಲೆ ಯಾರಾದರೂ ಪ್ರಭಾವ ಬೀರಿದ್ದರೆ, ಇಲ್ಲವೇ ಸ್ವಯಂ ಪ್ರೇರಿತವಾಗಿ ನೀವೇ ನಿವೇಶನ ಹಂಚಿಕೆ ಮಾಡಿದ್ದೀರ ಎಂದು ಪ್ರಶ್ನಿಸಿರುವುದಾಗಿ ತಿಳಿದುಬಂದಿದೆ.