ಬೆಂಗಳೂರು, ಆ. 13– ಅಡುಗೆ ಸರಿಯಾಗಿ ಮಾಡಿಲ್ಲವೆಂದು ಬೈದಿದ್ದಕ್ಕೆ ಬೋರ್ವೆಲ್ ಲಾರಿ ಚಾಲಕನನ್ನೇ ಕೊಲೆ ಮಾಡಿ ಮಧ್ಯ ಪ್ರದೇಶಕ್ಕೆ ಪರಾರಿಯಾಗಲು ಯತ್ನಿಸಿದ್ದ ಐವರು ಆರೋಪಿಗಳನ್ನು ಕೆಲವೇ ಗಂಟೆಗಳಲ್ಲಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಪ್ರಕರಣದಲ್ಲಿ ಪೊಲೀಸರೇನಾದರೂ ಸ್ವಲ್ಪ ಯಾಮಾರಿದ್ದರೂ ಆರೋಪಿಗಳು ತಪ್ಪಿಸಿಕೊಳ್ಳುತ್ತಿದ್ದರು. ಪೊಲೀಸರ ತ್ವರಿತ ಕಾರ್ಯಾಚರಣೆಯಿಂದ ಐವರೂ ಸಿಕ್ಕಿಬಿದ್ದಿದ್ದಾರೆ.ಪರಪ್ಪನ ಅಗ್ರಹಾರ ಠಾಣಾ ವ್ಯಾಪ್ತಿಯಲ್ಲಿ ಬೋರ್ವೆಲ್ ಹಾಕಲು 5 ಮಂದಿ ಮಧ್ಯ ಪ್ರದೇಶದ ಕೆಲಸಗಾರರಾದ ಸಹದೇವ್, ಸುನೀಲ್, ದಿನೇಶ್, ಅಲಕೇಶ್ ಮತ್ತು ಸಂಜಯ್ನನ್ನು ಕರೆದುಕೊಂಡು ತಮಿಳುನಾಡು ಮೂಲದ ಬೋರ್ವೆಲ್ ಲಾರಿ ಚಾಲಕ ಸುರೇಶ್ ಬಂದಿದ್ದರು.
ಬೋರ್ವೆಲ್ ಕೆಲಸ ಮುಗಿದ ನಂತರ ಚಿಕನ್ ಸಾಂಬಾರ್ ಅಡುಗೆ ತಯಾರಿಸಿದ್ದ ಸಹದೇವ್ಗೆ ನೀನು ಸರಿಯಾಗಿ ಅಡುಗೆ ಮಾಡಲ್ಲ, ಯಾವುದೇ ಕೆಲಸ ಸರಿಯಾಗಿ ಮಾಡಲ್ಲ ಎಂದು ನಿಂದಿಸಿದ್ದಕ್ಕೆ ಕೋಪಗೊಂಡು, ಸುರೇಶ್ ಅವರು ಮಲಗಿದ ನಂತರ ಇತರರೊಂದಿಗೆ ಸೇರಿಕೊಂಡು ಸುತ್ತಿಗೆ ಮತ್ತು ಕಬ್ಬಿಣದ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು.
ಈ ಐದು ಮಂದಿ ಬೇರೆ ಬೇರೆ ಆಟೋದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಾರೆ. ವಾಪಸ್ ಮಧ್ಯ ಪ್ರದೇಶಕ್ಕೆ ಹೋಗಿ ತಲೆಮರೆಸಿಕೊಳ್ಳಲು ಯತ್ನಿಸಿದ್ದರು.ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ, ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಐದು ಮಂದಿ ಸಿಕ್ಕಿಬಿದ್ದಿದ್ದಾರೆ.
ಪೊಲೀಸರೇನಾದರೂ ರೈಲ್ವೆ ನಿಲ್ದಾಣಕ್ಕೆ ಹೋಗುವುದು ಸ್ವಲ್ಪ ತಡವಾಗಿದ್ದರೂ ಆರೋಪಿಗಳ್ಯಾರೂ ಸಿಗುತ್ತಿರಲಿಲ್ಲ. ಪೊಲೀಸರ ಈ ಕಾರ್ಯವೈಖರಿಯನ್ನು ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.